More

    ಹೆದ್ದಾರಿ ಯೋಜನೆ ಜಾರಿಗೆ ವಿಘ್ನ!

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ಪಟ್ಟಣದ ಮೂಲಕ ಹಾಯ್ದು ಹೋಗುವ ಕಾರವಾರ-ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ತಡೆ ಹಿಡಿದಿದ್ದು, ದಶಕಗಳಿಂದ ಹೆದ್ದಾರಿಯ ಕನಸು ಕಾಣುತ್ತಿರುವ ಈ ಭಾಗದ ಜನರಿಗೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ.

    ಈಗಾಗಲೇ ಗದಗ-ವಾಡಿ ರೈಲ್ವೆ ಯೋಜನೆ ಕೈತಪ್ಪಿದ್ದು, ಇದೀಗ ರಾಷ್ಟ್ರೀಯ ಹೆದ್ದಾರಿ ಯೋಜನೆಯಾದರೂ ಸಾಕಾರಗೊಳ್ಳಲಿ ಎನ್ನುವ ಆಶಯ ಈ ಭಾಗದ ನಾಗರಿಕರದ್ದಾಗಿದೆ. ಗದಗ ಜಿಲ್ಲೆಯ ರೋಣ, ಗಜೇಂದ್ರಗಡ ಹಾಗೂ ನರೇಗಲ್ಲ ಪಟ್ಟಣದಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಿಲ್ಲ. ಈ ಭಾಗದ ಆರ್ಥಿಕ ಅಭಿವೃದ್ಧಿಗಾಗಿ ಹೆದ್ದಾರಿಯ ಅವಶ್ಯಕತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಹೋರಾಟಗಾರರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಾರವಾರ-ಇಳಕಲ್ಲ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿ ಉನ್ನತೀಕರಿಸಲಾಗುವುದು ಎಂಬ ಮಾಹಿತಿಯಿಂದ ಈ ಭಾಗದ ಜನರು ಸಂತೋಷಪಟ್ಟಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ಯೋಜನೆಗೆ ತಡೆಯೊಡ್ಡಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.

    2016ರಲ್ಲಿ ಕೇಂದ್ರ ಸರ್ಕಾರ ದೇಶದ ಒಟ್ಟು 2266 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಿತ್ತು. ಕಾರವಾರ-ಕೈಗಾ- ಮುಂಡಗೋಡ- ಸವಣೂರ- ಗದಗ-ನರೇಗಲ್ಲ-ಗಜೇಂದ್ರಗಡ-ಇಳಕಲ್ಲ (318 ಕಿ.ಮೀ)ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಉನ್ನತೀಕರಿಸಲು ಹಸಿರು ನಿಶಾನೆ ತೋರಿಸಲಾಗಿತ್ತು. ಅದರಂತೆ, 318 ಕಿ.ಮೀ. ದ್ವಿಪಥ ರಸ್ತೆ ನಿರ್ವಣದ ಡಿಪಿಆರ್ (ಸಮಗ್ರ ಯೋಜನಾ ವರದಿ) ತಯಾರಿಸಿ ಸಲ್ಲಿಸಲಾಗಿತ್ತು. ಡಿ.2019 ಮತ್ತು ಜ.2020 ರಲ್ಲಿ ಉನ್ನತೀಕರಿಸಲಾಗಿದ್ದ ಎಲ್ಲ ರಸ್ತೆ ಕಾಮಗಾರಿಗಳ ಯೋಜನಾ ವರದಿಯನ್ನು ಮರುಪರಿಶೀಲನೆ ನಡೆಸಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಯೋಜನೆಗಳನ್ನು ತಡೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ.

    ಕಾರವಾರ-ಇಳಕಲ್ಲ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಲಿದೆ ಎಂಬ ಮಾತುಗಳು ಕೇಳಿ ಬಂದು ವರ್ಷಗಳೇ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಈ ರಸ್ತೆ ಅಭಿವೃದ್ಧಿಯಿಂದ ಕರಾವಳಿ ಭಾಗ ಮತ್ತು ಉತ್ತರ ಕರ್ನಾಟಕದ ಭಾಗಗಳ ಸಂಪರ್ಕ ಹೆಚ್ಚಾಗುವುದರೊಂದಿಗೆ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ.

    |ಎಂ.ಎಸ್. ಧಡೇಸೂರಮಠ ನರೇಗಲ್ಲ ನಿವಾಸಿ

    ವರದಿ ಬಂದ ನಂತರ ಟೆಂಡರ್: ಹೆದ್ದಾರಿ ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಂಸದ ಶಿವಕುಮಾರ ಉದಾಸಿ ಅವರು, ‘ಕಾರವಾರ-ಇಳಕಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗೆ ಟೆಂಡರ್ ಕರೆಯಲಾಗಿಲ್ಲ. ಪ್ರಧಾನ ಮಂತ್ರಿ ಕಚೇರಿಯಿಂದ ದೇಶದ ಎಲ್ಲ ಉನ್ನತೀಕರಿಸಿದ ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೈಗೊಳ್ಳಲಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಮಿಟಿಯ ವರದಿ ಬರಲು ತಡವಾಗಿದೆ. ಕಮಿಟಿಯ ವರದಿ ಬಂದ ನಂತರ ಟೆಂಡರ್ ಕರೆಯಲಾಗುತ್ತದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಹಾವೇರಿ, ಗದಗ, ಬೆಳಗಾವಿ, ಧಾರವಾಡ ವಿಶೇಷ ಆರ್ಥಿಕ ಬಂಡವಾಳ ವಲಯ (ಎಸ್​ಐಆರ್) ಎಂದು ಘೊಷಿಸಲಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮೂಲ ಸೌಕರ್ಯಗಳ ಅಭಿವೃದ್ಧಿ ಅತ್ಯವಶ್ಯಕವಾಗಿದ್ದು, ಟೆಂಡರ್ ಕರೆದು ರಸ್ತೆ ಕಾಮಗಾರಿ ಪ್ರಾರಂಭವಾಗುವ ಮುನ್ನ ಗಜೇಂದ್ರಗಡ-ಬಂಕಾಪೂರವರೆಗಿನ ರಸ್ತೆಯನ್ನು 60 ರಿಂದ 90 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ, ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಈಗಾಗಲೇ ಪತ್ರ ಬರೆದು, ವೈಯಕ್ತಿಕವಾಗಿ ಭೇಟಿ ಮಾಡಿ ಒತ್ತಡ ತಂದಿದ್ದೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts