More

    ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ

    ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು, ಇದರ ಪರಿಣಾಮ ಪ್ರವಾಹದ ಸಮಸ್ಯೆ ಎದುರಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.


    ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಸಂಸದರ ಕಚೇರಿಯಲ್ಲಿ ಗುರುವಾರ ಮಳೆ ಹಾನಿ ಸಂಬಂಧ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಬಳಿಕ ಮಾತನಾಡಿದರು. ಈ ಹಿಂದೆಯೂ ಅಪಾರ ಪ್ರಮಾದ ಮಳೆ ಬಿದ್ದಿದೆ. ಈ ಬಾರಿಯ ಮಳೆಯಿಂದ ಬೆಂ-ಮೈ ಹೆದ್ದಾರಿ ವ್ಯಾಪ್ತಿಯಲ್ಲಿ ಹೊಸ ಸಮಸ್ಯೆಗಳು ಉದ್ಭವವಾಗಿವೆ. ಇದಕ್ಕೆ ಪ್ರಮುಖ ಕಾರಣ ಅವೈಜ್ಞಾನಿಕ ಬೆಂ-ಮೈ ಹೆದ್ದಾರಿ ಕಾಮಗಾರಿ ನಡೆದಿರುವುದು ಎಂದು ಆರೋಪಿಸಿದರು.


    ಬೆಂ-ಮೈ ಹೆದ್ದಾರಿ ಅದ್ಭುತವಾದ ಯೋಜನೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಆದರೆ ಕಾಮಗಾರಿಯಿಂದ ಈ ಭಾಗದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ನೋಡಬೇಕು. ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಾನು ಎರಡು ವರ್ಷದಿಂದ ಧ್ವನಿ ಎತ್ತಿದ್ದೇನೆ. ನಾನು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಕಾಲುವೆಗಳನ್ನು ಮುಚ್ಚಿ ಪೈಪ್‌ಗಳನ್ನು ಹಾಕಿದ್ದಾರೆ ಎಂದು ಇಂಜಿಯರ್‌ಗಳೇ ಒಪ್ಪಿಕೊಂಡಿದ್ದಾರೆ. ಈ ಪೈಪ್‌ಗಳು ಕಟ್ಟಿಕೊಂಡು ಹೆದ್ದಾರಿ ವ್ಯಾಪ್ತಿಯಲ್ಲಿ ಪ್ರವಾಹ ಬಂದಿದೆ. ಇದಕ್ಕೆಲ್ಲ ಯಾರು ಜವಾಬ್ದಾರಿಯಾಗುತ್ತಾರೆ. ಇದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರುತ್ತೇನೆ ಎಂದ ಅವರು, ಟೈಮ್ ಅಥವಾ ದುಡ್ಡು ಉಳಿಸಲು ಈ ಕಾಮಗಾರಿ ಮಾಡಿದ್ದಾರೋ ನನಗೆ ಗೋತ್ತಿಲ್ಲ. 21 ಪತ್ರಗಳನ್ನು ಎನ್‌ಎಚ್‌ಎಗೆ ಸಿಎನ್‌ಎನ್‌ಎಲ್‌ನಿಂದ ಪತ್ರ ಬಂದಿದೆ. ಒಂದು ಪತ್ರಕ್ಕೂ ಅವರು ಉತ್ತರ ನೀಡಿಲ್ಲ. ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.


    ಪ್ರತಾಪ್ ಸಿಂಹಗೆ ಟಾಂಗ್: ಬೇರೆ ಕ್ಷೇತ್ರದ ಜನಪ್ರತಿನಿಧಿಗಳ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಾನು ಈ ಹಿಂದೆ ಅವೈಜ್ಞಾನಿಕ ಕಾಮಗಾರಿ ಎಂದು ಹೋರಾಟ ಮಾಡಿದ್ದೆ. ಆಗ ಇದು ರಾಜಕೀಯ ಎಂದು ಹೇಳಿದರು. ಈಗ ಸಮಸ್ಯೆಗಳು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಪರೋಕ್ಷವಾಗಿ ಸುಮಲತಾ ಟಾಂಗ್ ನೀಡಿದರು.


    ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಹೀಗೆ ಆಗುತ್ತಿರಲಿಲ್ಲ. ಇಂತಹ ದೊಡ್ಡ ಕಾಮಗಾರಿಯನ್ನು ಶೇ.100ರಷ್ಟು ಸರಿಯಾಗಿ ಮಾಡಲು ಆಗುವುದಿಲ್ಲ. ಆದರೆ ಗೊತ್ತಿದ್ದು ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ. ಈ ಸಮಸ್ಯೆಯನ್ನು ಯಾರು ಸರ್ಮಥನೆ ಮಾಡಿದರೂ ಅದನ್ನು ಒಪ್ಪಿಕೊಳ್ಳಲು ಆಗಲ್ಲ. ಇದು ಯಾರ ಯೋಜನೆಯೂ ಅಲ್ಲ. ಎನ್‌ಎಚ್‌ಎ ಅವರ ಯೋಜನೆ. ಇದಕ್ಕೆ ಎಲ್ಲರೂ ಜನಪ್ರತಿನಿಧಿಗಳು ಅಷ್ಟೇ. ಆಗುತ್ತಿರುವ ಸಮಸ್ಯೆ ಬಗ್ಗೆ ನಾವು ಧ್ವನಿ ಎತ್ತಬೇಕು. ನಾವು ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ. ಯಾರನ್ನೂ ಸಮರ್ಥನೆ ಮಾಡಿಕೊಳ್ಳಬಾರದು. ರಾಜಕೀಯ ಮಾಡುತ್ತಿದ್ದೀರಾ ಎಂದು ಹೇಳುವವರಿಗೆ ನಾನು ಕೇರ್ ಮಾಡಲ್ಲ. ಬೆಂ-ಮೈ ಹೆದ್ದಾರಿ ವ್ಯಾಪ್ತಿಯಲ್ಲಿ 16 ಕಡೆ ಸಮಸ್ಯೆ ಆಗಿದೆ. ಸಮರ್ಥನೆ ಮಾಡಿಕೊಳ್ಳುವವರು ಮೊದಲು 16 ಕಡೆ ಸರಿಪಡಿಸಿ ಎಂದು ವ್ಯಂಗ್ಯವಾಡಿದರು.

    ತ್ವರಿತವಾಗಿ ಕ್ರಮ ವಹಿಸಿ: ಜಿಲ್ಲಾದ್ಯಂತ ಧಾರಾಕಾರವಾಗಿ ಮಳೆ ಸುರಿಯುವುದರಿಂದ ಅವಾಂತರ ಸೃಷ್ಟಿಯಾಗಿದೆ. ಆದ್ದರಿಂದ ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಂಸದೆ ಸುಮಲತಾ ಸೂಚನೆ ನೀಡಿದರು.


    ಸಭೆಯಲ್ಲಿ ಮಳೆಹಾನಿ ಬಗ್ಗೆ ಕಾವೇರಿ ನೀರಾವರಿ ನಿಗಮ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ಮಾಡುವಂತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.


    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಆಡಳಿತ) ಸರಸ್ವತಿ, ಇಂಜಿನಿಯರ್‌ಗಳಾದ ನಾಗರಾಜು, ಕೆಂಪರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts