More

    ಹೆಣ ಬಿದ್ದರೂ ಖುರ್ಚಿ ಬಿಡದ ಜನ

    ಕೋಲಾರ: ದೇಶಕ್ಕಾಗಿ ಹೋರಾಡಿದ ಮಹಾತ್ಮಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ, ಅಂಬೇಡ್ಕರ್ ಆದರ್ಶಗಳನ್ನು ಪಾಲಿಸದೆ ಸಿನಿಮಾ ನಟರನ್ನು ಅನುಕರಣೆ ಮಾಡುತ್ತಿರುವುದರಿಂದ ಮಹಾತ್ಮರ ಕುರಿತು ಸಕಾರಾತ್ಮಕವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಂತಾಗಿದೆ ಎಂದು ವಿಧಾನ ಸಭೆ ಸದಸ್ಯ ಕೆ.ಆರ್.ರಮೇಶ್‌ಕುಮಾರ್ ವಿಷಾದಿಸಿದರು.

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಲೇಖಕ ಡಾ.ಆರ್.ಶಂಕರಪ್ಪ ರಚಿಸಿರುವ ‘ಮರೆಯಲಾಗದ ಮಹಾನ್ ನಾಯಕರು’ ಹಾಗೂ ‘ಮುಕ್ತ ವ್ಯಾಪಾರ ಮತ್ತು ಭಾರತದ ವಿದೇಶಾಂಗ ನೀತಿ’ ಕೃತಿಗಳನ್ನು ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಿಡುಗಡೆ ಮಾಡಿ ಮಾತನಾಡಿದರು.

    ಗಾಂಧಿ ವಿಶ್ವ ಶಾಂತಿಗಾಗಿ ಅಹರ್ನಿಶಿ ಹೋರಾಡಿದರೇ ಹೊರತು ಕಾಂಗ್ರೆಸ್ ಸದಸ್ಯತ್ವ ಪಡೆದಿರಲಿಲ್ಲ, ಖುರ್ಚಿ ಬೇಕೆಂಬ ಆಸೆ ಇರಲಿಲ್ಲ, ಅಂಬೇಡ್ಕರ್‌ಗೆ ಖುರ್ಚಿ ಬೇಕಾಗಿತ್ತಾದರೂ ನಾವು ಕೊಡಲಿಲ್ಲ, ಶಾಸ್ತ್ರಿ ಅವರಿಗೆ ಖುರ್ಚಿ ಇತ್ತಾದರೂ ಕೂರಲು ಬಿಡಲಿಲ್ಲ, ಈಗ ಖುರ್ಚಿಗಾಗಿ, ಅಧಿಕಾರಕ್ಕಾಗಿ ಏನೇನೋ ನಡೆಯುತ್ತಿದೆ. ಶವ ಬಿದ್ದರೂ ಖುರ್ಚಿ ಬಿಡಲು ಸಿದ್ಧರಿಲ್ಲದ ಜನರನ್ನು ಕಾಣುತ್ತಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದರು.

    ಮಠಾಧಿಪತಿಗಳ ನಡೆಗೆ ವ್ಯಂಗ್ಯ: ಬಸವಣ್ಣನವರು ಸಮಾಜದ ಅಂಕು-ಡೊಂಕು ತಿದ್ದಿ ಸಮ ಸಮಾಜ ನಿರ್ಮಾಣಕ್ಕೆ ಹೋರಾಡಿದವರು, ಆದರೆ ನಾವಿಂದು ಬಸವಣ್ಣನವರ ಹೆಸರಲ್ಲಿ ನೂರಾರು ಮಠ, ಮಠಾಧೀಶರನ್ನು ಕಾಣುವಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಠಾಧೀಶರು ಮುಂದೊಂದು ದಿನ ಎಲೆಕ್ಷನ್‌ಗೆ ನಿಲ್ಲಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

    ಘೋಷಣೆಗಳಿಂದ ದೇಶಾಭಿವೃದ್ಧಿ ಅಸಾಧ್ಯ: ಗ್ಯಾಟ್ ಇನ್ನಿತರ ಒಪ್ಪಂದಗಳು ಭಾರತಾಂಬೆಯನ್ನು ಒತ್ತೆ ಇಡುವ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದೇ ರೀತಿ ಕೇವಲ ಘೋಷಣೆಗಳಿಂದ ದೇಶವನ್ನು ಅಭಿವೃದ್ಧಿಪಡಿಸಬಹುದೆಂಬ ಭ್ರಮೆ ಸಲ್ಲ. ಭಾವೋದ್ವೇಗ, ಆತಂಕ ಸೃಷ್ಟಿ, ಉದ್ವೇಗದ ಮಾತುಗಳಿಂದ ದೇಶದ ಆರ್ಥಿಕತೆಯನ್ನು ಮರೆಮಾಚಲು ಸಾಧ್ಯವಿಲ್ಲ, ಚುನಾವಣೆಯಲ್ಲಿ ಗೆಲ್ಲುವುದಕ್ಕೆ ತಂತ್ರಗಾರಿಕೆ ಅನಿವಾರ್ಯ, ಹಾಗಂತ ಇದರಿಂದಲೇ ದೇಶ ಕಟ್ಟಬಹುದೆಂಬ ಭ್ರಮೆ ಅತ್ಯಂತ ಅಪಾಯಕಾರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್, ಲೇಖಕ, ಚಿಂತಕ ಡಾ.ಆರ್.ಶಂಕರಪ್ಪ, ಪ್ರೊ.ಎ.ವಿ.ರೆಡ್ಡಿ, ಶ್ರೀನಿವಾಸಪುರದ ವೇಣು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಗೋಪಾಲಗೌಡ, ಜಿಲ್ಲಾ ಜಾನಪದ ಕಲಾ ಪರಿಷತ್ ಅಧ್ಯಕ್ಷ ಮುನಿವೆಂಕಟೇಗೌಡ, ಸರ್ಕಾರಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಸ್.ಮುರಳೀಧರ್, ಶ್ರೀನಿವಾಸಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಇನ್ನಿತರರಿದ್ದರು.

    ಗಾಂಧಿ ತತ್ವಗಳನ್ನು ಮೆಲುಕು ಹಾಕಿ ನಡೆದರೆ ಕಾಂಗ್ರೆಸ್‌ಗೆ ಒಳ್ಳೆಯದಾಗುತ್ತದೆ, ಗಾಂಧಿ ಮತ್ತಿತರ ಮಹಾನ್ ನಾಯಕರ ವಿಚಾರಧಾರೆಗಳಿಗೆ ಸಂಬಂಧಿಸಿದಂತೆ ಮತಭೇದ ಇದ್ದರೆ ನಿವಾರಿಸಿಕೊಳ್ಳಬಹುದು, ಮನಭೇದ ಅತ್ಯಂತ ಅಪಾಯಕಾರಿ.
    ನಾಡೋಜ ಡಾ.ವೂಡೇ ಪಿ.ಕೃಷ್ಣ, ಅಧ್ಯಕ್ಷ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts