More

    ತ್ಯಾಜ್ಯ ವಿಲೇವಾರಿಯಲ್ಲಿ ನಗರಸಭೆ ವಿಫಲ, ನಗರಸಭೆ ಸದಸ್ಯರಿಂದಲೇ ಆಕ್ರೋಶ, ಸಿಬ್ಬಂದಿ ಕೊರತೆಯೇ ಕಾರಣ ಎನ್ನುತ್ತಿರುವ ಅಧಿಕಾರಿಗಳು

    ನೆಲಮಂಗಲ: ನಗರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ನಗರಸಭೆ ಸಿಬ್ಬಂದಿ ವಿಫಲವಾಗಿದ್ದಾರೆ ಎಂದು ನಗರಸಭೆ ಸದಸ್ಯರು ಆರೋಪಿಸಿದ್ದಾರೆ.

    ಗರದ ಸಂತೆ ಮೈದಾನ, ಬಿಇಒ ಕಚೇರಿ ಬಳಿ, 1 ಮತ್ತು 2ನೇ ವಾರ್ಡ್, ಜಯನಗರ ರಸ್ತೆ, 19ನೇ ವಾರ್ಡ್, 10ನೇ ವಾರ್ಡ್‌ನ ವಾಜರಹಳ್ಳಿ ರಸ್ತೆ, ಅರಿಶಿಣಕುಂಟೆ, ಬಸವನಹಳ್ಳಿ, ವಿಶ್ವೇಶ್ವರಪುರ ಸೇರಿ ಹಲವೆಡೆ ಕಸದ ರಾಶಿ ಬಿದ್ದು ಹಲವು ದಿನಗಳೇ ಕಳೆದಿವೆ. ಆದರೂ ಅದನ್ನು ತೆರವು ಮಾಡದೇ ಇರುವುದರಿಂದ, ಸ್ವಚ್ಛತೆ ಸಮಸ್ಯೆ ತಲೆದೋರಿದೆ.

    ಸಾಂಕ್ರಾಮಿಕ ರೋಗ ಭೀತಿ: ಕೆಲದಿನಗಳ ಹಿಂದೆ ಮಳೆಯಾಗಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದೆ. ಜತೆಗೆ ಕರೊನಾ ಪಿಡುಗಿನ ನಡುವೆ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.

    ಮೊದಲು ನಗರದ ಎಲ್ಲ ವಾರ್ಡ್‌ಗಳಿಗೆ ತೆರಳಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಮರ್ಪಕ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಕೆಲದಿನಗಳಿಂದ ಕಸ ಸಂಗ್ರಹಣಾ ವಾಹನಗಳು ಸರಿಯಾಗಿ ತ್ಯಾಜ್ಯವನ್ನು ಸಂಗ್ರಹಿಸುತ್ತಿಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ, ಕಸದ ರಾಶಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಅಧಿಕಾರಿಗಳ ನಿರ್ಲಕ್ಷ್ಯ: ಕೆಲ ವಾರ್ಡ್‌ಗಳ ನಿವಾಸಿಗಳು ಹಾಗೂ ನಗರಸಭೆ ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಕಸದ ಸಮಸ್ಯೆ ಉದ್ಭವಿಸಿರುವ ವಿಷಯ ತಿಳಿಸಿ, ಇದನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡರೂ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ ಎಂದು ನಗರಸಭೆ ಸದಸ್ಯರು ದೂರಿದ್ದಾರೆ.

    ಕಸದ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಕರೊನಾ ಪಿಡುಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ತೀವ್ರ ಆತಂಕ ಮೂಡುತ್ತಿದೆ.
    ಗಂಗಾಧರ್‌ರಾವ್, ನಗರಸಭೆ ಸದಸ್ಯ

    ನಗರಸಭೆ ಎಲ್ಲ ವಾರ್ಡ್‌ಗಳು ಹಾಗೂ ನಗರಸಭೆಯಲ್ಲಿ ವಿಲೀನಗೊಂಡಿರುವ ಎಲ್ಲ ಪ್ರದೇಶಗಳಲ್ಲೂ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಕೆಲವು ದಿನ ವಾಹನ ಹಾಗೂ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉದ್ಭವಿಸಿರಬಹುದು. ಕೂಡಲೇ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು.
    ಬಸವರಾಜು, ಹಿರಿಯ ಆರೋಗ್ಯ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts