More

    ಹುಬ್ಬಳ್ಳಿ ಏರ್​ಪೋರ್ಟ್​ಗೆ ಪ್ರಶಸ್ತಿ

    ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ನಿಲ್ದಾಣ ಪ್ರಶಸ್ತಿ ಲಭಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಈ ಪ್ರಶಸ್ತಿ ನೀಡಿ ಗೌರವಿಸಿದೆ.

    ಕೇಂದ್ರ ಸರ್ಕಾರದ ವಿಮಾನಯಾನ ಮಂತ್ರಾಲಯ ಭಾರತೀಯ ವಾಣಿಜ್ಯೋದ್ಯಮ ಸಂಸ್ಥೆಯ ಸಹಯೋಗದಲ್ಲಿ ಹೈದರಾಬಾದ್​ನ ಬೇಗಂಪೇಟೆಯಲ್ಲಿ ಮಾ. 12ರಿಂದ 15ರವರೆಗೆ ಆಯೋಜಿಸಿರುವ ಏಷ್ಯಾದ ಅತಿದೊಡ್ಡ ವಿಮಾನಯಾನ ಕುರಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

    ಮಾ. 13ರಂದು ಹೋಟೆಲ್ ತಾಜ್ ಕೃಷ್ಣಾದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕ್ರೆ ಪ್ರಶಸ್ತಿ ಸ್ವೀಕರಿಸಿದರು.

    ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಎರಡನೇ ಹಂತದ ಯೋಜನೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಾಲ್ಕು ವಿಮಾನ ಸಂಸ್ಥೆಗಳಿಂದ 9 ಮಾರ್ಗಗಳನ್ನು ನೀಡಲಾಗಿದೆ. ಈ ಹಿಂದೆ ನೀಡಲಾಗಿದ್ದ ಎಲ್ಲ 8 ಮಾರ್ಗಗಳನ್ನು ಈ ನಿಲ್ದಾಣ ಸಮರ್ಥವಾಗಿ ನಿರ್ವಹಿಸಿದೆ. ಪ್ರತಿವರ್ಷ ಉತ್ತಮ ಪ್ರಗತಿ ಹೊಂದುತ್ತಿದೆ.

    2017-18 ಹಾಗೂ 2018- 19ರ ಅವಧಿಯಲ್ಲಿ ವಿಮಾನ ಸಂಚಾರ ಬೆಳವಣಿಗೆಯು ಶೇ. 500ರಷ್ಟು ಹಾಗೂ ಪ್ರಯಾಣಿಕರ ಓಡಾಟವೂ ಸಹ ಶೇ. 800ರಷ್ಟು ವೃದ್ಧಿಯಾಗಿದೆ. 4.6 ಲಕ್ಷ ಪ್ರಯಾಣಿಕರಿಗೆ ಒಟ್ಟು 6694 ನಿರ್ಧಾರಿತ ಸಂಚಾರಗಳಲ್ಲಿ ಶೇ. 85ರಷ್ಟು ಸೇವೆ ನೀಡಲಾಗಿದೆ.

    ನಿರಂತರ ಪ್ರಯತ್ನದ ಪರಿಣಾಮವಾಗಿ 2019-20ನೇ ಸಾಲಿನ ಜನವರಿ ಅಂತ್ಯದವರೆಗೆ 4.11 ಲಕ್ಷ ಜನರಿಗೆ ಸೇವೆ ನೀಡಲಾಗಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ 5 ಲಕ್ಷ ಜನರನ್ನು ತಲುಪುವ ನಿರೀಕ್ಷೆ ಇದೆ. ಮೂಲಸೌಕರ್ಯಗಳನ್ನು ಒದಗಿಸುವಲ್ಲಿಯೂ ಕ್ರಮ ಕೖಗೊಳ್ಳಲಾ ಗಿದೆ. ಈ ಪ್ರಶಸ್ತಿ ದೊರೆಯಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆಡಳಿತ ಮಂಡಳಿ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ಭಾಗೀದಾರರು ನೀಡಿದ ಸಹಕಾರ ಕಾರಣವಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ಸಂತಸ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts