More

    ಹುಬ್ಬಳ್ಳಿಯಲ್ಲಿ ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್

    ಹುಬ್ಬಳ್ಳಿ: ವ್ಯಾಪಾರಿಗಳೇ ಎಚ್ಚರ..! ಸೂಟು- ಬೂಟು ಧರಿಸಿಕೊಂಡು ಹೈ ಪ್ರೊಫೈಲ್ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುವ ಕಳ್ಳರ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿದೆ.

    ಶ್ರೀಮಂತ ಗ್ರಾಹಕರಂತೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಇದ್ದ ತಂಡ ದುಬಾರಿ ಬೆಲೆಯ 2 ವಾಚ್​ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಇಲ್ಲಿನ ಗೋಕುಲ ರಸ್ತೆ ಅರ್ಬನ್ ಓಯಸಿಸ್ ಮಾಲ್​ನ ವಾಚ್ ಅಂಗಡಿಯಲ್ಲಿ ಮಂಗಳವಾರ ನಡೆದಿದೆ.

    ವೇಮರೆಡ್ಡಿ ಪಾಟೀಲ ಮಾಲೀಕತ್ವದ ಹಾರಿಜಾನ್ ವಾಚ್ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7,995 ರೂ. ಬೆಲೆಯ ಟೈಮೆಕ್ಸ್ ಸ್ಮಾರ್ಟ್ ವಾಚ್​ಅನ್ನು ಎಗರಿಸಿದ್ದಾರೆ.

    ಕಳ್ಳರ ಕೈಚಳಕ: ರಾತ್ರಿ 7.30ರ ಸುಮಾರು ಮೊದಲು ಮಹಿಳೆ ಅಂಗಡಿ ಒಳಗೆ ಬಂದು ಗಮನಿಸಿ ವಾಪಸಾಗಿದ್ದಾಳೆ. ಕೆಲ ಕ್ಷಣಗಳ ನಂತರ ಸೂಟು ಬೂಟು ಧರಿಸಿ, ಕೈಯಲ್ಲಿ ಲ್ಯಾಪ್​ಟಾಪ್ ಬ್ಯಾಗ್ ಹಿಡಿದಿದ್ದ ಇಬ್ಬರು ಯುವಕರು ಹಾಗೂ ಯುವತಿ ಅಂಗಡಿ ಪ್ರವೇಶಿಸಿದ್ದಾರೆ. ನಂತರ ಕೆಂಪು ಟೀಶರ್ಟ್ ಧರಿಸಿದ್ದ ಯುವಕ ‘ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ’ ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, ‘ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ ?’ ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ. ಮತ್ತೊಬ್ಬ ಟೈಮೆಕ್ಸ್ ಕೌಂಟರ್​ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಅದೂ ಇದೂ ವಿಚಾರಿಸಿ ವಾಪಸಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ಪ್ಯಾಕ್ ಚೆಕ್ ಮಾಡಿದಾಗ ವಾಚ್ ಕಳವಾದ ವಿಷಯ ಗೊತ್ತಾಗಿದೆ. ತಕ್ಷಣ ಏರ್​ಪೋರ್ಟ್ ಹಾಗೂ ವಸತಿ ಗೃಹಗಳಲ್ಲಿ ವಿಚಾರಣೆ ನಡೆಸಿದರೂ ಪ್ರಯೋಜನವಾಗಿಲ್ಲ.

    ಈ ಕುರಿತು ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

    ಹೈ ಪ್ರೊಫೈಲ್ ಕಳ್ಳರ ಗ್ಯಾಂಗ್​ನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಗ್ಯಾಂಗ್ ಮಾಲ್​ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆ ಯಲ್ಲಿ ಓಡಾಡಿ ತೆರಳಿದೆ. ಆ ದೃಶ್ಯಗಳೂ ಸೆರೆಯಾಗಿವೆ.

    ಮಾಲೀಕರಲ್ಲಿ ಆತಂಕ

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್​ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಬಿಜಿನೆಸ್​ವುನ್​ಗಳ ವೇಷದಲ್ಲಿ ಮಾಲ್​ಗೆ ಬಂದು ಕಳ್ಳತನ ಮಾಡಿರುವುದು ಅಂಗಡಿಗಳ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ ಪ್ರಾಮಾಣಿಕ ಗ್ರಾಹಕರನ್ನೂ ಅನುಮಾನದಿಂದ ನೋಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts