More

    ಹುಬ್ಬಳ್ಳಿಯಲ್ಲಿ ಟೈ ಸಮ್ಮೇಳನ 27ರಿಂದ

    ಹುಬ್ಬಳ್ಳಿ: ಯಾವುದೇ ಕ್ಷೇತ್ರದಲ್ಲಿ ಗಮನ ಸಾಧನೆ ಮಾಡುವುದು ಒಂದು ತಪಸ್ಸಿನಂತೆ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಗಳ ಹಿಂದೆಯೂ ಹತ್ತಾರು ಹೋರಾಟದ ಕಥನಗಳಿರುತ್ತವೆ. ಗೆಲುವನ್ನು ಕಂಡವರು, ಲೋಕ ವ್ಯವಹಾರದ ಆಳ-ಅಗಲ ಅರಿತವರು ಮುಂದಿನ ದಿನದ ಬದಲಾವಣೆ, ಅವಶ್ಯಕತೆಗಳ ಕುರಿತು ಸ್ಪಷ್ಟ ಸುಳಿವನ್ನು ಹೊಂದಿರುತ್ತಾರೆ. ಅಂಥವರ ಮಾತು ಕೇಳುವುದು ಸಾಧನೆಯ ಹಂಬಲ ಇರುವವರಿಗೆ ಮೃಷ್ಟಾನ್ನ ಭೋಜನದಂತೆಯೇ ಸರಿ. ಅಂಥದ್ದೊಂದು ಅವಕಾಶವನ್ನು ದಿ ಇಂಡಸ್ ಆಂತರ್​ಪ್ರಿನರ್ಸ್ (ಟೈ) ಹುಬ್ಬಳ್ಳಿ ಶಾಖೆ ಕಲ್ಪಿಸಿಕೊಡಲು ಸಜ್ಜಾಗಿದೆ.

    ಹೌದು. 2012ರಿಂದ ಪ್ರತಿ ವರ್ಷವೂ ಟೈ ಕಾನ್ (ಟೈ ಸಮ್ಮೇಳನ) ಏರ್ಪಡಿಸುತ್ತ ಬಂದಿರುವ ಟೈ, ದೇಶ- ವಿದೇಶಗಳ ಖ್ಯಾತನಾಮ ಸಾಧಕರನ್ನು ಹುಬ್ಬಳ್ಳಿಗೆ ಕರೆಸಿ, ಅವರ ಯಶೋಗಾಥೆಯನ್ನು ಕೇಳುವ, ಅವರೊಂದಿಗೆ ಮುಕ್ತವಾಗಿ ಸಂವಾದ ನಡೆಸುವ ಅವಕಾಶವನ್ನು ಒದಗಿಸಿಕೊಡುತ್ತ ಬಂದಿದೆ.

    ಈ ಹಿಂದೆ ರತನ್ ಟಾಟಾ, ಕೈಲಾಶ್ ಸತ್ಯಾರ್ಥಿ, ಸದ್ಗುರು ಶ್ರೀ ಜಗ್ಗಿ ವಾಸುದೇವ ಅವರು ಸೇರಿದಂತೆ ವಿಶ್ವ ವಿಖ್ಯಾತ ಸಾಧಕರು, ಮಾರ್ಗದರ್ಶಕರನ್ನು ಹುಬ್ಬಳ್ಳಿಗೆ ಕರೆಸಿದ ಶ್ರೇಯಸ್ಸು ಟೈ ಗೆ ಸಲ್ಲುತ್ತದೆ. ಹುಬ್ಬಳ್ಳಿ ಶಾಖೆ ಪ್ರತಿವರ್ಷವೂ ಸಾಧಕರನ್ನು ಗುರುತಿಸಿ

    ಪ್ರಶಸ್ತಿಯನ್ನು ಸಹ ನೀಡುತ್ತಿದೆ.

    ಈ ಸಲ ಟೈ ಯುವ ಸಮ್ಮೇಳನ ಈಗಾಗಲೇ (ಜ. 30) ಮುಗಿದಿದ್ದು, ಫೆ. 27ರಂದು ಮಹಿಳಾ ಸಮ್ಮೇಳನ ಮತ್ತು 28 ಉದ್ಯಮಶೀಲರ ಸಮ್ಮೇಳನ ನಿಗದಿಯಾಗಿದೆ. ಕೋವಿಡ್ ಕಾರಣದಿಂದ ಬದಲಾದ ಸನ್ನಿವೇಶದಲ್ಲಿ ಈ ಸಲದ್ದು ಸಂಪೂರ್ಣ ವರ್ಚುವಲ್ ಸಮ್ಮೇಳನ ಎನ್ನುವುದು ವಿಶೇಷವಾಗಿದೆ.

    ಟೈ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಅಜಯ ಹಂಡಾ, ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ ನಾಡಗೌಡ, ಸಂಯೋಜಕ ವಿಜಯ ಮಾನೆ ಮತ್ತು ಇತರರು ಸಾಕಷ್ಟು ಪರಿಶ್ರಮ ವಹಿಸಿ ಸಮ್ಮೇಳನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಅತಿಥಿಗಳಿವರು: ಮಹಿಳಾ ಸಮ್ಮೇಳನದಲ್ಲಿ, ‘ಮಹಿಳೆ ಮತ್ತು ಕನಸುಗಳು’ ಕುರಿತು ಫೆಮಿನಾ ಮತ್ತು ಹಲೋ ಮ್ಯಾಜಝಿನ್ ಸಂಪಾದಕಿ ರುಚಿಕಾ ಮೆಹ್ತಾ, ‘ಉದ್ಯಮಶೀಲತೆಯಲ್ಲಿ ವೈಭವ ಸಾಧನೆ’ ಕುರಿತು ಪಾರ್ಕ್ ಹೋಟೆಲ್ಸ್ ಅಧ್ಯಕ್ಷೆ ಪ್ರಿಯಾ ಪೌಲ್, ‘ಪ್ರತಿಕೂಲ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ’ ಕುರಿತು ಕ್ರೀಡಾ ಸಾಧಕಿ ಡಾ. ಕೋಮಲ ರಾವ್, ‘ನವಭಾರತ ನಿರ್ವಣದಲ್ಲಿ ಮೂಲಸೌಕರ್ಯದ ಪಾತ್ರ’ ಕುರಿತು ಬ್ರಿಗೇಡ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕಿ ನಿರುಪಮಾ ಶಂಕರ, ‘ಉದ್ಯಮಶೀಲತೆಯಿಂದ ರಾಜಕೀಯಕ್ಕೆ- ನನ್ನ ಕಥೆ’ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಲಿದ್ದಾರೆ.

    ಹುಬ್ಬಳ್ಳಿಗೆ ತಂದವರು ದೇಶಪಾಂಡೆ: ದಿ ಇಂಡಸ್ ಆಂತರ್​ಪ್ರಿನರ್ಸ್ (ಟೈ) ಎನ್ನುವುದು ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಗಳು, ಹೊಸಬರಿಗೆ ಪ್ರೋತ್ಸಾಹ ನೀಡಲೆಂದೇ ಸ್ಥಾಪಿಸಿರುವ ಸಂಸ್ಥೆ. ಹುಬ್ಬಳ್ಳಿಯವರಾದ ಡಾ. ಗುರುರಾಜ ದೇಶಪಾಂಡೆಯವರು ಟೈ ಅನ್ನು ತಮ್ಮ ತವರು ನೆಲಕ್ಕೆ ತಂದರು. ದೇಶದ ಪ್ರಮುಖ ನಗರಗಳಲ್ಲಿ ಟೈ ಶಾಖೆಗಳಿವೆ.

    ‘ಬಿಜಿನೆಸ್ ಕಾನ್ಪರೆನ್ಸ್ ಇನ್ ಎ ನ್ಯೂ ಅವತಾರ್’ ಎನ್ನುವ ಶಿರೋನಾಮೆಯಲ್ಲಿ ನಾವು ಸಮ್ಮೇಳನ ಏರ್ಪಡಿಸಿದ್ದೇವೆ. ಇದು ಸಂಘಟಿತ ಪ್ರಯತ್ನ. ಖ್ಯಾತನಾಮರು ಪಾಲ್ಗೊಳ್ಳಲಿರುವುದರಿಂದ ಪ್ರತಿನಿಧಿಗಳಿಗೆ ಇದೊಂದು ಸ್ಮರಣೀಯವಾದ ಸಮ್ಮೇಳನವಾಗಲಿದೆ. ಜತೆಗೆ, ಹೊಸ ಸಾಧನೆಗೆ ಪ್ರೇರಣೆ ನೀಡಲಿದೆ ಎಂಬ ವಿಶ್ವಾಸ ಇದೆ.
    | ವಿಜಯ ಮಾನೆ ಟೈಕಾನ್ ಸಂಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts