More

    ಹುಬ್ಬಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರಾತಂಕ

    ಹುಬ್ಬಳ್ಳಿ: ಗ್ರಾಮೀಣ ಹಾಗೂ ಶಹರ ವ್ಯಾಪ್ತಿಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಹುತೇಕ ನಿರಾತಂಕವಾಗಿ ನಡೆಯಿತು.

    ಕೇಶ್ವಾಪುರದ ಫಾತಿಮಾ ಪ್ರೌಢ ಶಾಲೆಯಲ್ಲಿ ಬಾಲಕನೊಬ್ಬನ ದೇಹದ ತಾಪಮಾನ ಹೆಚ್ಚು ಬಂದಿದ್ದರಿಂದ ಆತನನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಿಸಲಾಯಿತು. ಲ್ಯಾಮಿಂಗ್ಟನ್ ಶಾಲೆಯಲ್ಲಿಯೂ ಬಾಲಕರಿಬ್ಬರ ತಾಪಮಾನ ನಿಗದಿಗಿಂತ ಹೆಚ್ಚಾಗಿತ್ತು. ಕೆಲ ಸಮಯ ಬಾಲಕರನ್ನು ನೆರಳಿನಲ್ಲಿ ಕೂರಿಸಿ, ಕುಡಿಯಲು ನೀರು ಕೊಟ್ಟ ನಂತರ ತಾಪಮಾನ ಸಾಮಾನ್ಯ ಸ್ಥಿತಿಗೆ ಬಂದಿದ್ದರಿಂದ ಅವರಿಗೆ ಮೊದಲು ನಿಗದಿಯಾಗಿದ್ದ ಕೊಠಡಿಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಯಿತು.

    ಮೂರುಸಾವಿರ ಮಠದ ಕಂಟೇನ್ಮೆಂಟ್ ಪ್ರದೇಶದಲ್ಲಿರುವ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿಯೂ ಸುಸೂತ್ರವಾಗಿ ಪರೀಕ್ಷೆ ನಡೆಯಿತು. ಕಂಟೇನ್ಮೆಂಟ್ ಪ್ರದೇಶವಾಗಿದ್ದರಿಂದ ಮಠದ ಪ್ರವೇಶ ದ್ವಾರದ ಬಳಿಯೇ ಬ್ಯಾರಿಕೇಡ್ ಹಾಕಿದ್ದರಿಂದ ಪಾಲಕರು ದೂರದಲ್ಲಿಯೇ ಮಕ್ಕಳನ್ನು ವಾಹನಗಳಿಂದ ಇಳಿಸಿ ಹೋಗುತ್ತಿದ್ದರು.

    ಸೀಲ್​ಡೌನ್ ಆಗಿರುವ ಆದರ್ಶನಗರ ಸಮೀಪದ ಡಾ. ಜಿ.ವಿ. ಜೋಶಿ ರೋಟರಿ ಶಾಲೆಯಲ್ಲಿ ಎಲ್ಲ 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಲಾಯಿತು. ಮಾಸ್ಕ್ ನೀಡಿ, ಬದಾಮಿ ಹಾಲು ಹಾಗೂ ಬಿಸ್ಕಿಟ್ ನೀಡಲಾಯಿತು.

    ಪರೀಕ್ಷೆ ನಂತರ ಗುಂಪುಗೂಡಿದ ವಿದ್ಯಾರ್ಥಿಗಳು

    ಪರೀಕ್ಷೆ ಮುಗಿದ ನಂತರ ಕೇಂದ್ರದಿಂದ ಹೊರಬಂದ ಬಹುತೇಕ ವಿದ್ಯಾರ್ಥಿಗಳು ಗುಂಪುಗೂಡಿ ನಿಲ್ಲುವ ಮೂಲಕ ಆತಂಕ ಸೃಷ್ಟಿಸಿದ ಘಟನೆ ಕೆಲ ಶಾಲೆಗಳ ಬಳಿ ನಡೆದಿದೆ.

    ಕರೊನಾ ಸೋಂಕು ಹರಡಬಾರದೆಂಬ ಉದ್ದೇಶದಿಂದ ಪರೀಕ್ಷೆ ಕೇಂದ್ರಕ್ಕೆ ಹೋಗುವ ಮೊದಲು ಹಾಗೂ ಕೇಂದ್ರದಿಂದ ಹೊರ ಬಂದ ನಂತರ ಸ್ನೇಹಿತರೊಂದಿಗೆ ಗುಂಪುಗೂಡಿ ನಿಲ್ಲದಂತೆ ಮೊದಲೇ ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.

    ಕೇಂದ್ರಕ್ಕೆ ಹೋಗುವ ಮೊದಲು ಬೇರೆ ಬೇರೆ ಸಮಯಕ್ಕೆ ಪಾಲಕರೊಂದಿಗೆ ಬೈಕ್, ಕಾರುಗಳಲ್ಲಿ ಬಂದಿಳಿದ ವಿದ್ಯಾರ್ಥಿಗಳು, ಒಬ್ಬೊಬ್ಬರಾಗಿಯೇ ಶಾಲೆಯ ಒಳಗೆ ಪ್ರವೇಶಿಸಿದರು. ಪರೀಕ್ಷೆ ಮುಗಿದ ನಂತರವೂ ಕೊಠಡಿಗಳಿಂದ ಪರಸ್ಪರ ಅಂತರ ಕಾಯ್ದುಕೊಂಡೇ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಗುಂಪುಗೂಡಿ ನಿಂತು ಹರಟೆಯಲ್ಲಿ ತೊಡಗಿದರು. ಸ್ಥಳದಲ್ಲಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿದರೂ, ದೂರ ಹೋಗಿ ಮತ್ತೆ ಗುಂಪುಗೂಡ ತೊಡಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts