More

    ಹಿರೇಕೆರೂರಿಗೂ ಕಾಲಿಟ್ಟ ಕರೊನಾ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಭಾನುವಾರ 12 ಪ್ರಕರಣಗಳು ದೃಢಪಟ್ಟಿವೆ.

    ಹಿರೇಕೆರೂರ ತಾಲೂಕಿನ ವೈದ್ಯ ಸೇರಿ 6 ಜನರಿಗೆ, ಹಾನಗಲ್ಲ ತಾಲೂಕಿನ ಮೂವರು ಆಶಾ ಕಾರ್ಯಕರ್ತೆಯರಿಗೆ, ಸವಣೂರಿನ ಇಬ್ಬರಿಗೆ, ರಾಣೆಬೆನ್ನೂರನ ಒಬ್ಬರಿಗೆ ಕರೊನಾ ಪಾಸಿಟಿವ್ ಬಂದಿದೆ. ಹಾವೇರಿ ನಗರದ ನಾಗೇಂದ್ರನಮಟ್ಟಿಯ ಮಹಿಳೆಗೂ ಪಾಸಿಟಿವ್ ಬಂದಿದ್ದು, ಆದರೆ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದರಿಂದ ಜಿಲ್ಲೆಯ ಪ್ರಕರಣಗಳ ಲೆಕ್ಕಕ್ಕೆ ಬಂದಿಲ್ಲ.

    ಹಿರೇಕೆರೂರ ತಾಲೂಕಿನ ಮಾಸೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ 38 ವರ್ಷದ ವೈದ್ಯ, ಮಾಸೂರಿನ 50 ವರ್ಷದ ಪುರುಷ, 45 ವರ್ಷದ ಮಹಿಳೆ, 22 ವರ್ಷದ ಯುವಕ, 15 ವರ್ಷದ ಬಾಲಕ, 35 ವರ್ಷದ ಪುರುಷ (ಮೂಲತಃ ಶಿಕಾರಿಪುರ ತಾಲೂಕು ಈಸೂರ ಗ್ರಾಮದ ನಿವಾಸಿ), ಸವಣೂರಿನ 27 ವರ್ಷದ ಪುರುಷ, 40 ವರ್ಷದ ಮಹಿಳೆ, ಹಾನಗಲ್ಲ ತಾಲೂಕಿನ ಆಶಾ ಕಾರ್ಯಕರ್ತೆಯರಾದ 36, 41, 50 ವರ್ಷದ ಮಹಿಳೆಯರಿಗೆ, ರಾಣೆಬೆನ್ನೂರಿನ 5 ವರ್ಷದ ಬಾಲಕಿಗೆ ಭಾನುವಾರ ಕರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 68 ಜನರಿಗೆ ಕರೊನಾ ದೃಢಪಟ್ಟಿದ್ದು, 25 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 43 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಟ್ರಾವೆಲ್ ಹಿಸ್ಟರಿ: ಹಿರೇಕೆರೂರ, ರಟ್ಟಿಹಳ್ಳಿಯ ಆರು ಜನರಿಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ಪಾಸಿಟಿವ್ ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಸೋಂಕು ತಗುಲಿದೆ. ಶಿಕಾರಿಪುರದ ವ್ಯಕ್ತಿಗೆ ಪಾಸಿಟಿವ್ ಬಂದ ಕೂಡಲೆ ಎಲ್ಲರನ್ನೂ ದೂದಿಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಜೂ. 24ರಂದು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಜೂ. 27ರಂದು ರಾತ್ರಿ ಪಾಸಿಟಿವ್ ವರದಿ ಬಂದಿದೆ.

    ಈಗಾಗಲೇ ಕಂಟೇನ್ಮೆಂಟ್ ಜೋನ್ ಆಗಿರುವ ಸವಣೂರಿನ ಖಾದರ್​ಬಾಗ್ ಪ್ರದೇಶದಲ್ಲಿ ವಾಸವಾಗಿದ್ದ ಪುರುಷ ಹಾಗೂ ಮಹಿಳೆಯ ಗಂಟಲ ದ್ರವವನ್ನು ಜೂ. 24ರಂದು ಟೆಸ್ಟ್​ಗೆ ಕಳಿಸಲಾಗಿತ್ತು. ಜೂ. 27ರಂದು ಪಾಸಿಟಿವ್ ಬಂದಿದೆ.

    ಹಾನಗಲ್ಲ ತಾಲೂಕಿನ ಮೂವರು ಆಶಾ ಕಾರ್ಯಕರ್ತೆಯರ ನಿಯಮಿತ ತಪಾಸಣೆಗಾಗಿ ಗಂಟಲ ದ್ರವವನ್ನು ಜೂ. 24ರಂದು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. ಜೂ. 27ರ ರಾತ್ರಿ ಸೋಂಕು ದೃಢಪಟ್ಟಿದೆ.

    ರಾಣೆಬೆನ್ನೂರ ಮಾರುತಿ ನಗರದಲ್ಲಿ ತಂದೆ, ತಾಯಿಯೊಂದಿಗೆ ವಾಸವಾಗಿದ್ದ 5 ವರ್ಷದ ಬಾಲಕಿಗೆ ಅವರದೇ ಸಂಬಂಧಿ ಹಾಗೂ ಬಟ್ಟೆ ವ್ಯಾಪಾರಿಗೆ ಸೋಂಕು ತಗುಲಿತ್ತು. ಬಾಲಕಿಯನ್ನು ಪ್ರಾಥಮಿಕ ಸಂರ್ಪತಳೆಂದು ಸ್ವ್ಯಾಬ್ ಟೆಸ್ಟ್ ನಡೆಸಿದಾಗ ಸೋಂಕು ದೃಢಪಟ್ಟಿದೆ.

    ಅಕ್ಕನಿಗೆ ಕರೊನಾ ದೃಢ, ತಂಗಿ ಮದುವೆ ರದ್ದು

    ಹಾವೇರಿಯ ನಾಗೇಂದ್ರನಮಟ್ಟಿಯ ಮದುವೆ ಮನೆಗೂ ಕರೊನಾ ವಕ್ಕರಿಸಿದ್ದು, ವಧು ಕ್ವಾರಂಟೈನ್​ಗೆ ಒಳಗಾಗಿರುವುದರಿಂದ ಭಾನುವಾರ ನಡೆಯಬೇಕಿದ್ದ ಮದುವೆ ರದ್ದುಗೊಂಡಿದೆ. ನಾಗೇಂದ್ರನಮಟ್ಟಿಯ ಮಹಿಳೆ ಕ್ಯಾನ್ಸರ್ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೂ ಮುನ್ನ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ತಂಗಿಯನ್ನು ಭಾನುವಾರ ಬೆಳಗ್ಗೆ ಕ್ವಾರಂಟೈನ್ ಮಾಡಲಾಯಿತು. ಹೀಗಾಗಿ ಮನೆಯವರು ನಮ್ಮ ಮನವಿಗೆ ಸ್ಪಂದಿಸಿ ಮದುವೆಯನ್ನು ರದ್ದುಪಡಿಸಿದ್ದಾರೆ. ಅಲ್ಲದೆ ನಾಗೇಂದ್ರನಮಟ್ಟಿಯ ಅವರ ಮನೆಯನ್ನು ಸೀಲ್​ಡೌನ್ ಮಾಡಲಾಗಿದ್ದು, ಅವರ ಸಂಪರ್ಕದಲ್ಲಿದ್ದ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts