More

    ಹಿಮಾಚಲ ಪ್ರದೇಶ ಗೆಲುವು, ಕಾಂಗ್ರೆಸ್ ವಿಜಯೋತ್ಸವ

    ದಾವಣಗೆರೆ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರಪಾಲಿಕೆ ಎದುರು ವಿಜಯೋತ್ಸವ ಆಚರಿಸಿದರು. ಪಕ್ಷದ ಮುಖಂಡರ ಪರ ಜಯಘೋಷ ಮೊಳಗಿದವು. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
    ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ ದೇವರನಾಡು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ನ್ಯಾಯ ದಕ್ಕಿದೆ. ಸ್ಪಷ್ಟ ಬಹುಮತ ದೊರೆತಿದೆ. ನರೇಂದ್ರ ಮೋದಿ 8 ವರ್ಷ ಅಧಿಕಾರದಲ್ಲಿದ್ದರೂ ದೆಹಲಿಯ ಪಾಲಿಕೆ ಗದ್ದುಗೆ ಹಿಡಿಯಲಾಗಲಿಲ್ಲ. ಪಕ್ಕದ ಹಿಮಾಚಲ ಪ್ರದೇಶದಲ್ಲಿ ಅವರ ಹವಾ ನಡೆಯಲಿಲ್ಲ ಎಂದು ಟೀಕಿಸಿದರು.
    ಗುಜರಾತ್ ಕೋಮುವಾದಿಗಳ ಕೇಂದ್ರವಾಗಿದೆ. ಅಲ್ಲಿನ ಚುನಾವಣೆಯಲ್ಲಿ ಆಮ್‌ಆದ್ಮಿ ಮತ್ತು ಕಾಂಗ್ರೆಸ್ ನಡುವಿನ ಮತ ವಿಭಜನೆಯಿಂದಾಗಿ ನಮಗೆ ಹಿನ್ನಡೆಯಾಗಿದೆ. ಬಿಜೆಪಿ ಹಲಾಲ್, ಹಿಜಾಬ್, ಧರ್ಮ ದಂಗಲ್ ಹೆಸರಲ್ಲಿ ಮೋಸ ಮಾಡಿ ಜನರ ಮತ ಪಡೆಯುತ್ತಿದೆ. ಕಾಂಗ್ರೆಸ್ ತನ್ನ ಸೋಲನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಸ್ವೀಕಾರ ಮಾಡಿದ್ದೇವೆ ಎಂದರು.
    ರಾಜ್ಯದಲ್ಲಿ ಅಧಿಕಾರಲ್ಲಿರುವ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾಯುತ್ತಿದ್ದಾರೆ. ಸರ್ಕಾರ ಸೋಲಿನ ಭಯದಿಂದಾಗಿ ಜಿಪಂ ತಾಪಂ ಚುನಾವಣೆಯನ್ನು ನಡೆಸುತ್ತಿಲ್ಲ. ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುವುದೇ ಅದರ ಅಜೆಂಡಾ ಆಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಹೇಳಿದರು.
    ಪಾಲಿಕೆ ವಿಪಕ್ಷನಾಯಕ ಗಡಿಗುಡಾಳು ಮಂಜುನಾಥ ಮಾತನಾಡಿ ಕಾಂಗ್ರೆಸ್‌ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿ ಹಿಮಾಚಲ ಪ್ರದೇಶದಲ್ಲೇ ಎಡವಿದೆ. ಜಾತಿ-ಧರ್ಮದ ನಡುವೆ ವಿಷ ಬೀಜ ಬಿತ್ತುವವರಿಗೆ ಜನರು ಪಾಠ ಕಲಿಸಿದ್ದಾರೆ ಎಂದರು.
    ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್ ಮಾತನಾಡಿ ಚುನಾವಣೆ ದಿನವೇ ರ‌್ಯಾಲಿ ನಡೆಸಿ ಅಧಿಕಾರ ದುರುಪಯೋಗ ಮಾಡಿದ ಬಿಜೆಪಿ ಗುಜರಾತ್‌ನಲ್ಲಿ ಗೆದ್ದಿದೆ ಎಂದು ಆರೋಪಿಸಿದರು.
    ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಉದಯಕುಮಾರ್, ಅಬ್ದುಲ್ ಲತೀಫ್, ಮುಖಂಡರಾದ ಉಮೇಶ್, ಎಸ್.ಎಂ.ಜಯಪ್ರಕಾಶ್‌ಗೌಡ, ಸಲೀಮುಲ್ಲಾ, ಗಿರಿಧರ್, ಎಂ.ಎಚ್.ವೀರಭದ್ರಪ್ಪ, ಮಲ್ಲಿಕಾರ್ಜುನ ಇಂಗಳೇಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts