More

    ಹಿಡಿಮುಂಡಿಗೆ ರೋಗಕ್ಕೆ ಮರಗಳ ಬಲಿ

    ಶಿರಸಿ: ಅರೆಮಲೆನಾಡಾದ ತಾಲೂಕಿನ ಬನವಾಸಿ ಹೋಬಳಿಯಲ್ಲಿ ಅಡಕೆ ತೋಟಕ್ಕೆ ಅಡರಿದ ರೋಗದಿಂದ ಬೆಳೆಗಾರರು ಹೈರಾಣಾಗಿದ್ದಾರೆ. ತೋಟಗಾರಿಕೆ ವಿಜ್ಞಾನಿಗಳಿಂದಲೂ ಔಷಧೋಪಚಾರ ದೊರೆಯದ ಪರಿಣಾಮ ಬೆಳೆಗಾರರು ಅಡಕೆ ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ.

    ಬನವಾಸಿ ಭಾಗದ ಪ್ರಮುಖ ವಾಣಿಜ್ಯ ಬೆಳೆ ಶುಂಠಿ, ಅನಾನಸ್ ಆಗಿದ್ದರೂ ಬೆಲೆಯ ಅಸ್ಥಿರತೆ, ವಿವಿಧ ರೋಗ ಬಾಧೆಯಿಂದಾಗಿ ಅಡಕೆ ಬೆಳೆಯತ್ತ ಮುಖ ಮಾಡಿದ ಹೋಬಳಿಯ ರೈತರು ಕಳೆದ ಎರಡು ದಶಕಗಳಿಂದೀಚೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಅಡಕೆ ಬೆಳೆದಿದ್ದಾರೆ. ಆದರೆ, ಹೋಬಳಿ ವ್ಯಾಪ್ತಿಯ ಅಡಕೆ ತೋಟಗಳಲ್ಲಿ ಹಿಡಿಮುಂಡಿಗೆ ರೋಗಕ್ಕೆ ಅಡಕೆ ಮರಗಳ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ದಶಕದಿಂದ ಈಚೆಗೆ ಈ ರೋಗ ಹೋಬಳಿಯ ತೋಟಗಳಲ್ಲಿ ವಿಸ್ತರಿಸುತ್ತಿದ್ದು, ಈ ಬಾರಿ ವ್ಯಾಪಕವಾಗಿ ಅಡಕೆ ಮರಗಳು ನಾಶವಾಗಿವೆ. ಆದರೆ, ತೋಟಗಾರಿಕೆ ಇಲಾಖೆಯಿಂದ ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಕುರಿತು ಸರಿಯಾದ ಮಾಹಿತಿ ಇನ್ನೂ ಬೆಳೆಗಾರರಿಗೆ ದೊರೆತಿಲ್ಲ. ಇದರಿಂದ ಅಡಕೆ ಬೆಳೆಗಾರರು ಮುಂಗಾಣದಂತಾಗಿದ್ದಾರೆ.
    ತೋಟವೇ ನಾಶ: ರೋಗ ಬಂದ ಅಡಕೆ ಮರಗಳ ಕಾಂಡ, ಸುಳಿಗಳು ಸಣ್ಣದಾಗುತ್ತ ಕ್ರಮೇಣ ಸಾಯುತ್ತಿವೆ. ರೈತರು ಸಾಕಷ್ಟು ಔಷಧ ಸಿಂಪಡಿಸಿದರೂ ಮರಗಳು ಸಾಯುವುದು ಮಾತ್ರ ನಿಂತಿಲ್ಲ. ಅಡಕೆ ಫಸಲು ಬರಲು ಆರಂಭಿಸಿದಾಗಿನಿಂದ 10-12 ವರ್ಷ ಉತ್ತಮ ಫಸಲು ಪಡೆದ ಬೆಳೆಗಾರರಿಗೆ ಕ್ರಮೇಣ ಮರಗಳು ರೋಗಕ್ಕೆ ತುತ್ತಾಗುತ್ತಿರುವುದರಿಂದ ನಿರ್ವಹಣೆಯ ವೆಚ್ಚ ಕೂಡ ಇಮ್ಮಡಿಯಾಗಿದೆ. ಬನವಾಸಿ ಭಾಗದಲ್ಲಿ ಪ್ರತಿ ಬೆಳೆಗಾರನೂ 200ಕ್ಕಿಂತ ಹೆಚ್ಚಿನ ಮರಗಳನ್ನು ಈ ರೋಗದಿಂದ ಕಳೆದುಕೊಂಡಿದ್ದಾನೆ. ಕೆಲವೆಡೆಯಂತೂ ಎಕರೆಗಳಷ್ಟು ಅಡಕೆ ತೋಟ ಸಂಪೂರ್ಣ ನಾಶವಾಗುತ್ತಿದ್ದು, ಪರಿಹಾರ ಏನು ಎಂದು ದಿಕ್ಕು ತೋಚದಂತಾಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ 1 ಸಾವಿರ ಎಕರೆಗೂ ಹೆಚ್ಚು ಅಡಕೆ ಪ್ರದೇಶವಿದ್ದು, ಪ್ರತಿ ಎಕರೆಗೆ 100ರಿಂದ 150 ಮರಗಳು ನಾಶವಾಗಿವೆ. ಬನವಾಸಿ ಹೋಬಳಿಯ ಅಂಡಗಿ, ರಾಮಾಪುರ, ಹೆಬ್ಬತ್ತಿ, ಸಂತೊಳ್ಳಿ, ಕಲಕರಡಿ, ಮಧುರವಳ್ಳಿ, ಗುಡ್ನಾಪುರ, ಬಂಕನಾಳ, ಕಂಡ್ರಾಜಿ, ಸುಗಾವಿ, ಕೋರ್ಲಕಟ್ಟಾ, ಮಾಳಂಜಿ, ಗುಡ್ನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಡಕೆ ಮರಗಳು ಈ ರೋಗಕ್ಕೆ ತುತ್ತಾಗುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಲಾದ ಅಡಕೆ ತೋಟ ಪೂರ್ತಿ ನಾಶವಾಗುತ್ತಿರುವುದು ಬೆಳೆಗಾರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಈ ಭಾಗದ ಅಡಕೆ ಬೆಳೆಗಾರರು.

    ಬನವಾಸಿ ಹೋಬಳಿಯ ಹಲವು ಪ್ರದೇಶಗಳಲ್ಲಿ ಮಣ್ಣಿನ ಗುಣದ ಕಾರಣಕ್ಕೆ 15 ವರ್ಷ ಮೇಲ್ಪಟ್ಟ ಅಡಕೆ ಮರಗಳು ನಿಧಾನವಾಗಿ ಸಾಯುತ್ತವೆ. ಇದಕ್ಕೆ ಯಾವುದೇ ರೋಗ ಬರದಿದ್ದರೂ ಈ ಮರಗಳ ಆಯಸ್ಸು ಕಡಿಮೆಯೇ ಆಗಿದೆ. ಹೀಗೆ ನಾಶವಾದ ಮರಗಳ ಬುಡದಲ್ಲಿ ಬೇರೆ ಸಸಿ ನಾಟಿ ಮಾಡುವುದೊಂದೇ ಪರಿಹಾರ.
    | ವಿ.ಎಂ. ಹೆಗಡೆ ಹಾರ್ಟಿ ಕ್ಲೀನಿಕ್ ವಿಷಯ ತಜ್ಞ
    ಬರಗಾಲ, ವಿದ್ಯುತ್ ವೋಲ್ಟೇಜ್ ಮತ್ತಿತರ ಸಮಸ್ಯೆಗಳಿಂದ ಬೆಳೆ ಒಣಗುತ್ತಿರುವುದರ ನಡುವೆ ಅಡಕೆ ಮರಗಳು ರೋಗದಿಂದ ಸಾಯುತ್ತಿರುವುದು ಬೆಳೆಗಾರರ ಆತ್ಮಸ್ಥೈರ್ಯಕ್ಕೆ ಕೊಡಲಿಯೇಟು ನೀಡಿದಂತಾಗುತ್ತಿದೆ. ಸಾವಿರಾರು ರೂಪಾಯಿ ವ್ಯಯಿಸಿ ಔಷಧ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಮಣ್ಣಿನ ಗುಣದಿಂದ ಈ ರೀತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ. ರೋಗ ನಿಯಂತ್ರಣೋಪಾಯಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಲಹೆ ದೊರೆತಿಲ್ಲ.
    | ಸುದರ್ಶನ ನಾಯ್ಕ ಅಂಡಗಿ ಅಡಕೆ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts