More

    ಹಿಂದು-ಮುಸ್ಲಿಂ ಭಾವೈಕ್ಯತೆಯ ಬೀಡು ನಿಜಗಲ್ ಸಿದ್ಧರಬೆಟ್ಟ, ಬೆಟ್ಟದ ತುದಿಯಲ್ಲಿದೆ ಸಿದ್ದಪ್ಪ ಸ್ವಾಮಿ ಸನ್ನಿಧಿ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧಾರ್ಮಿಕ ಭಾವೈಕ್ಯದ ಕೇಂದ್ರವಾಗಿ ಗಮನಸೆಳೆಯುತ್ತಿರುವ ನೆಲಮಂಗಲ ತಾಲೂಕು ಸೋಂಪುರ ಹೋಬಳಿ ನಿಜಗಲ್ ಸಿದ್ಧರಬೆಟ್ಟ (ನಿಜಗಲ್‌ದುರ್ಗ) ಜಿಲ್ಲೆಯ ಧಾರ್ಮಿಕ ಪ್ರವಾಸಿ ಕೇಂದ್ರ ಎನಿಸಿದೆ.

    ಜಿಲ್ಲೆಯಲ್ಲದೆ ನೆರೆ ರಾಜ್ಯದ ಭಕ್ತರನ್ನು ಸೆಳೆಯುತ್ತಿರುವ ಬೆಟ್ಟ ಪ್ರವಾಸೋದ್ಯಮ ತಾಣವಾಗಿಯೂ ಯಾತ್ರಿಕರನ್ನು ಸೆಳೆಯುತ್ತಿದೆ. ಮುಖ್ಯವಾಗಿ ಹನುಮಮಾಲಾಧಾರಿಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ.

    ಬೆಟ್ಟದ ಇತಿಹಾಸ: ನಿಜಗಲ್ಲು ಸಿದ್ಧರಬೆಟ್ಟ ಪೌರಾಣಿಕ, ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿದ್ದು, ಇದನ್ನು ರತ್ನಪುರಿ ಪಟ್ಟಣ, ಶೂರಗಿರಿ, ಉದ್ದಂಡಯ್ಯನ ಬೆಟ್ಟವೆಂತಲೂ ಕರೆಯುತ್ತಾರೆ. ಇದರ ಬಗ್ಗೆ ಕ್ರಿಶ 1288ರ ಹೊಯ್ಸಳರ ಕಾಲದ ಶಾಸನದಲ್ಲಿ ಉಲ್ಲೇಖವಿದೆ. ಇದರಲ್ಲಿ ನಿಜಗಲೀಪುರ ಎಂದು ಇದನ್ನು ಹೆಸರಿಡಲಾಗಿದೆ. ನಿಜ+ಕಲಿ ನಿಜಗಲಿ, ಶೂರರ ನಾಡಾಗಿದ್ದರಿಂದ ಶೂರರಗಿರಿ, ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವುದರಿಂದ ನಿಜ+ಕಲ್ಲು ನಿಜಗಲ್ಲು ಎಂಬುದಾಗಿ ಹೆಸರು ಪಡೆದುಕೊಂಡಿದೆ ಎಂಬ ಐತಿಹ್ಯವಿದೆ. ಹಿಂದೆ ಈ ಬೆಟ್ಟದಲ್ಲಿದ್ದ ಸಿದ್ದರು ಲೋಹಗಳನ್ನು ಬಂಗಾರವಾಗಿ ಪರಿವರ್ತಿಸುತ್ತಿದ್ದುದರಿಂದ ಈ ಬೆಟ್ಟಕ್ಕೆ ರಸಾಸಿದ್ದರ ಬೆಟ್ಟ ಎಂದೂ ಹೆಸರಿದೆ. ಅಕ್ಕ ತಂಗಿಯರ ದೊಣೆ, ಕಂಚಿನ ದೊಣೆ, ಸಿದ್ಧರ ದೊಣೆ, ಆನೆ ದೊಣೆಗಳಿವೆ.

    ಮುಸ್ಲಿಂ ದರ್ಗ: ಬೆಟ್ಟದ ಮೇಲೆ ಸೈಯದ್ ಬಾದ್‌ಷಾ ಮತ್ತು ಷಾ ಕರೀಂ ಅವರ ದರ್ಗಾಗಳಿದ್ದು ಹಿಂದು-ಮುಸ್ಲಿಂ ಸಮುದಾಯದ ಧಾರ್ಮಿಕ ಭಾವೈಕ್ಯದ ಬೀಡು ಎನಿಸಿದೆ. ಎರಡೂ ಕಡೆ ಗಣೇಶನ ದೇವಾಲಯ ನಿರ್ಮಿಸಲಾಗಿದೆ, ಇನ್ನು ಮಧ್ಯ ಭಾಗದಲ್ಲಿ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾದ ಬೃಹತ್ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಕಾಣಬಹುದಾಗಿದೆ. ಕೋಟೆಯ ಪೂರ್ವ ಭಾಗದಲ್ಲಿ ಗುಹಾಂತರ ದೇವಾಲಯವಿದ್ದು, ಇಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಆರಾಧನೆ ನಡೆಯುತ್ತದೆ. ಇಲ್ಲೇ ಬಂಡೆಯ ಮೇಲೆ ವೀರಭದ್ರ, ಗಾಯತ್ರಿ, ಕಾಲಭೈರವ, ಸುಬ್ರಮಣ್ಯದೇವರ ಉಬ್ಬು ಶಿಲ್ಪಗಳಿವೆ. ಈ ಗುಹಾಂತರ ದೇವಾಲಯವು ಸಿದ್ಧಗಂಗಾ ಮಠದ ಉದ್ದಾನ ಶಿವಯೋಗಿಗಳ ತಪೋ ಭೂಮಿಯಾಗಿದ್ದು, ಅವರು ಇಲ್ಲಿಯೇ ಬೇತಾಳ ಸಿದ್ದಿ ಸಾಧಿಸಿದರು ಎಂಬ ಐತಿಹ್ಯವಿದೆ.
    ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಆಂಜನೇಯನ ಉಬ್ಬು ಶಿಲ್ಪಗಳಿದ್ದು, ಕೋಟೆಯ ರಕ್ಷಣಾ ಪ್ರತೀಕವಾಗಿದೆ. ಬೆಟ್ಟದತುದಿಯಲ್ಲಿ ಶ್ರೀ ಸಿದ್ದಪ್ಪ ಸ್ವಾಮಿ ಸನ್ನಿಧಿಯಿದೆ.

    ಹನುಮ ಜಯಂತಿ ಸಂಭ್ರಮ: ಇತ್ತೀಚಿನ ವರ್ಷಗಳಲ್ಲಿ ಹನುಮ ಜಯಂತಿಯಂದು ವಿಶೇಷ ಆಚರಣೆ ಮೂಲಕ ಅಭಿವೃದ್ಧಿಗೆ ಚಾಲನೆ ನೀಡಿರುವುದು ಅಪಾರ ಭಕ್ತ ಸಮೂಹದಲ್ಲಿ ಸಂತಸ ಉಂಟುಮಾಡಿದೆ. ಅದಕ್ಕೆ ಕಾರಣ ಲೇಸರ್ ಲೈಟ್‌ಗಳ ಬೆಳಕಿನಿಂದ 3,562 ಅಡಿ ಎತ್ತರವಿರುವ ಇಡೀ ಬೆಟ್ಟವನ್ನು ಸಿಂಗರಿಸುವುದು. ಈ ನಿಟ್ಟಿನಲ್ಲಿ ಸಿದ್ಧರಬೆಟ್ಟ ಸೇವಾ ಸಮಿತಿ ಯಶಸ್ವಿಯಾಗಿದೆ.
    ಹನುಮ ಮಾಲಾಧಾರಿಗಳು ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ವಿವಿಧ ಜಿಲ್ಲೆಗಳಿಂದ ಹನುಮ ಜಯಂತಿಯಂದು ಬೆಟ್ಟಕ್ಕೆ ಭೇಟಿ ನೀಡಿ ಹನುಮ ಹಾಗೂ ಕ್ಷೇತ್ರದ ಆರಾಧ್ಯ ದೈವಸಿದ್ದಪ್ಪ ದೇವರ ದರ್ಶನ ಪಡೆಯುತ್ತಾರೆ.

    ಜಿಲ್ಲೆಯಲ್ಲೇ ಪ್ರಮುಖ ಧಾರ್ಮಿಕ ಸಾಮರಸ್ಯ ಸಾರುವ ನಿಜಗಲ್ ಬೆಟ್ಟದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಆಚರಣೆಯಾಗುವ ಹನುಮ ಜಯಂತಿಯಂದು ರಾಜ್ಯದ ಮೂಲೆಮೂಲೆಗಳಿಂದ ಹನುಮ ಮಾಲಾಧಾರಿಗಳು ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ.
    ಅಗಳಕುಪ್ಪೆ ಶಿವಕುಮಾರ, ಸಿದ್ಧರಬೆಟ್ಟ ಸೇವಾ ಸಮಿತಿ ಅಧ್ಯಕ್ಷ

    ನಮ್ಮ ದೇವಾಲಯಗಳನ್ನು ನಾವು ರಕ್ಷಿಸುತ್ತೇವೆ. ಆದ್ದರಿಂದ ದೇಗುಲ ಟ್ರಸ್ಟ್ ಮಾಡಿ ಇಲ್ಲಿನ ಅಭಿವೃದ್ಧಿಗೆ ಟೊಂಕ ಕಟ್ಟಿದ್ದೇವೆ. ಲಕ್ಷ್ಮೀ ವೆಂಕಟೇಶ್ವರ, ನಾಲ್ಕು ದಿಕ್ಕಿನಲ್ಲಿ ಆಂಜನೇಯ, ಗಣೇಶ ದೇವಸ್ಥಾನ ಸೇರಿ ಇಲ್ಲಿನ ಎಲ್ಲ ದೇಗುಲಗಳಿಗೂ ಕಾಯಕಲ್ಪ ಕಲ್ಪಿಸುವ ಚಿಂತನೆ ಇದೆ.
    ಜಗದೀಶ್ ಚೌಧರಿ, ಸಮಾಜ ಸೇವಕ

    ಮಾರ್ಗ: ರಾಷ್ಟೀಯ ಹೆದ್ದಾರಿ 48 ರ ತುಮಕೂರಿನಿಂದ 25 ಕಿ.ಮೀ, ದಾಬಸ್ ಪೇಟೆಯಿಂದ 2 ಕಿ.ಮೀ ಅಗಳಕುಪ್ಪೆ ಮುಖಾಂತರ ಹೋಗಬಹುದು, ಹಾಗೇಯೆ ರಾಷ್ಟೀಯ ಹೇದ್ದಾರಿ 48 ರ ರಿಲೆಯನ್ಸ್ ಮುಂಭಾಗ, ಹಳೇನಿಜಗಲ್‌ನಿಂದ ಹೋಗಬಹುದು, ಬೆಂಗಳೂರಿನಿಂದ 52 ಕಿ.ಮೀ ದೂರದಲ್ಲಿ ಬೆಟ್ಟವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts