More

    ಹಿಂಗಾರು ಹಂಗಾಮು ವಿಳಂಬ

    ಹುಬ್ಬಳ್ಳಿ: ಅತಿವೃಷ್ಟಿ ಹಾಗೂ ಅಕ್ಟೋಬರ್​ನಲ್ಲೂ ಸತತವಾಗಿ ಸುರಿದ ಮಳೆಯ ಪರಿಣಾಮ ಈ ಬಾರಿ ಹಿಂಗಾರು ಹಂಗಾಮು ತಿಂಗಳುಗಟ್ಟಲೇ ವಿಳಂಬವಾಗಿ ಹೋಗಿದೆ.

    ಇದರ ಪರಿಣಾಮವಾಗಿ ಈ ಸಲ ಹಿಂಗಾರು ಹಂಗಾಮಿನ ಫಸಲುಗಳು ರೈತರ ಕೈ ಸೇರುವುದು ತಡವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ ಬಿಳಿಜೋಳ, ಗೋಧಿ, ಕಡಲೆ, ಕುಸುಬೆ ಹಿಂಗಾರಿನ ಪ್ರಮುಖ ಬೆಳೆಗಳಾಗಿವೆ. ವಾಣಿಜ್ಯ ಬೆಳೆಯಾದ ಕಡಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

    ಈ ಬಾರಿ ಹಿಂಗಾರಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು 2 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಸತತ ಮಳೆಯಿಂದಾಗಿ ಹದ ಸಿಗದೇ ಇರುವುದಕ್ಕೆ ಕೆಲವೆಡೆ ಈಗಷ್ಟೇ ಬಿತ್ತನೆ ನಡೆಯುತ್ತಿದೆ. ಇನ್ನೂ ಕೆಲವೆಡೆ ಬಿತ್ತಿದ ಜೋಳ, ಕಡಲೆ ಸರಿಯಾಗಿ ಹುಟ್ಟದೇ ಇರುವುದರಿಂದ ಮತ್ತೊಮ್ಮೆ ಬಿತ್ತನೆ ಮಾಡುವ ಅನಿವಾರ್ಯತೆ ಎದುರಾಗಿದೆ.

    ಪ್ರತಿ ವರ್ಷ ದೀಪಾವಳಿ ವೇಳೆಗೆ ಚೋಟುದ್ದ, ಗೇಣುದ್ದ ಬೆಳೆಗಳು ಬೆಳೆದು ನಿಲ್ಲುತ್ತಿದ್ದವು. ಆದರೆ, ಧಾರವಾಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈಗಷ್ಟೇ ನೆಲ ಬಿಟ್ಟು ಬೆಳೆಗಳು ಮೇಲೇಳುತ್ತಿವೆ. ಇನ್ನೊಂದೆಡೆ ಏಕಾಏಕಿ ಮಳೆ ಮಾಯವಾಗಿದ್ದರಿಂದ ಹೊಲಗಳಲ್ಲಿ ದೊಡ್ಡದೊಡ್ಡ ಹೆಂಡಿಗಳು ಏಳುತ್ತಿವೆ. ಬಿತ್ತನೆಗೆ ಸಾಕಷ್ಟು ತೇವಾಂಶ ಇದೆಯಾದರೂ ಮೇಲೆ ಒಂದಿಷ್ಟು ಮಳೆಯಾದರೆ ಸಂಪೂರ್ಣ ಬೀಜಗಳು ಮೊಳಕೆ ಒಡೆಯುತ್ತವೆ ಎನ್ನುತ್ತಾರೆ ರೈತರು.

    ಒಂದೊಮ್ಮೆ ಬಿತ್ತಿದ ಬೀಜ ಹುಟ್ಟಿಕೊಂಡರೆ ಸಾಕು ಕೇವಲ ಹವಾಗುಣ (ಚಳಿ)ದ ಮೇಲೆಯೇ ಬೆಳೆ ಬರುತ್ತವೆ. ಚಳಿ ಹೆಚ್ಚಾದಷ್ಟು ಹಿಂಗಾರು ಬೆಳೆಗಳಿಗೆ ಅನುಕೂಲ. ಹಾಗಾಗಿ ಮುಂಬರುವ ಹವಾಗುಣ ಉತ್ತಮವಾಗಿರಲಿ ಎಂಬುದೇ ಇದೀಗ ರೈತರ ಪ್ರಾರ್ಥನೆಯಾಗಿದೆ.

    ಸಕಾಲದಲ್ಲಿ ಹಿಂಗಾರು ಬಿತ್ತನೆಗೂ ಅಡ್ಡಿಪಡಿಸಿದ್ದ ಮಳೆರಾಯ ಈಗ ಒಂದೆರಡು ಹನಿ ಸುರಿಸುತ್ತಿಲ್ಲ. ಅಕ್ಟೋಬರ್ ಮೊದಲ ವಾರ ಬಿತ್ತನೆಯಾಗಬೇಕಿತ್ತು. ಈ ಬಾರಿ ನವೆಂಬರ್​ನಲ್ಲಿ ಬಿತ್ತನೆಯಾಗುತ್ತಿದೆ. ಇದೆಲ್ಲದರ ಪರಿಣಾಮ ಏನಾಗಲಿದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಹವಾಗುಣದ ಮೇಲೆ ಹಿಂಗಾರು ಬೆಳೆಗಳು ಬರುತ್ತವೆ ಎನ್ನುತ್ತಾರೆ ಕೃಷಿ ತಜ್ಞರು.

    ಕಳೆಯ ಕಾರುಬಾರು: ಅತಿವೃಷ್ಟಿಯಿಂದಾಗಿ ಈ ವರ್ಷ ಹೊಲದಲ್ಲಿ ಹೆಚ್ಚು ಕಳೆ ಬೆಳೆದಿತ್ತು. ಹೊಲ ಹಸನು ಮಾಡಿ ಬಿತ್ತನೆಗೆ ಹೋಗುವಷ್ಟರಲ್ಲಿ ರೈತರು ಹೈರಾಣಾಗಿ ಹೋಗಿದ್ದಾರೆ. ಆದಾಗ್ಯೂ ಅನ್ನದಾತ ಬಿತ್ತನೆ ಕಾರ್ಯ ಮುಗಿಸಿದ್ದಾನೆ. ಇನ್ನೆನಿದ್ದರೂ ಹವಾಮಾನದ ಆಶೀರ್ವಾದ ಬೇಕಾಗಿದೆ.

    ಈ ವರ್ಷ ಹಿಂಗಾರು ಹಂಗಾಮು 15- 20 ದಿನ ತಡವಾಗಲಿದೆ. ಬಹುತೇಕ ಬಿತ್ತನೆಯಾಗಿದ್ದು, ಈಗಷ್ಟೇ ಬೆಳೆಗಳು ಹುಟ್ಟಿಕೊಳ್ಳುತ್ತಿವೆ. ಮೇಲೆ ಒಂದಿಷ್ಟು ಮಳೆಯಾಗಿದ್ದರೆ ಮೊಳಕೆ ಪ್ರಮಾಣ ಹೆಚ್ಚಾಗುತ್ತಿತ್ತು. ಮಣ್ಣಿನ ಹೆಂಡಿಗಳು ಕರಗುತ್ತಿದ್ದವು. ಆದರೆ, ಈಗ ಮಳೆ ಲಕ್ಷಣಗಳು ಇಲ್ಲ. ಹಂಗಾಮು ವಿಳಂಬದಿಂದಾಗುವ ಪರಿಣಾಮಗಳನ್ನು ಕಾದು ನೋಡಬೇಕಿದೆ. | ರಾಜಶೇಖರ ಅಣಗೌಡರ ಸಹಾಯಕ ಕೃಷಿ ನಿರ್ದೇಶಕ, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts