More

    ಹಿಂಗಾರು ಬಿತ್ತನೆಗೆ ಮಳೆ ಅಡ್ಡಿ

    ನರೇಗಲ್ಲ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಕಾಲ ಮಳೆ ಸುರಿಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ಸಂಜೆ 4.30 ರವರೆಗೆ ಸುರಿಯಿತು.

    ಹೋಬಳಿಯ ಪ್ರಮುಖ ಹಿಂಗಾರಿ ವಾಣಿಜ್ಯ ಬೆಳೆಯಾದ ಕಡಲೆ ಬಿತ್ತನೆಗೆ ಸತತ ಮಳೆಯಿಂದ ಹಿನ್ನಡೆಯಾಗಿದೆ. ಈಗಾಗಲೇ ಕೆಲ ರೈತರು ಕಡಲೆ ಬಿತ್ತನೆ ಮಾಡಿದ್ದು, ಅತಿಯಾದ ತೇವಾಂಶದಿಂದ ಕಡಲೆ ಚಿಗುರು ಒಡೆಯಲು ಸಾಧ್ಯವಾಗಿಲ್ಲ. ಮಳೆಯಿಂದಾಗಿ ಜಮೀನು ಹದಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ. ಮುಂಗಾರಿನ ಬೆಳೆಗಳಾದ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳು ಶೇ.70 ರಷ್ಟು ಹಾಳಾಗಿವೆ. ಉಳ್ಳಾಗಡ್ಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ, ಸತತ ಮಳೆಯಿಂದಾಗಿ ಉಳ್ಳಾಗಡ್ಡಿಗೆ ಸಾಕಷ್ಟು ಸುಳಿ ರೋಗ ಬಿದ್ದು ಹಾಳಾಗಿದೆ.

    ಹಾಳಾಗಿರುವ ರಸ್ತೆಗಳು: ಪಟ್ಟಣದ ಬಹುತೇಕ ಜಮೀನುಗಳ ಸಂಪರ್ಕ ರಸ್ತೆಗಳು ಮಳೆಯಿಂದ ಹಾಳಾಗಿವೆ. ಈ ಹಿಂದೆ ‘ನಮ್ಮ ಹೊಲ, ನಮ್ಮ ರಸ್ತೆ’ ಯೋಜನೆಯಡಿ ಸಾಕಷ್ಟು ಅನುದಾನ ಬಂದರೂ ರಸ್ತೆಗಳು ಮಾತ್ರ ಅಭಿವೃದ್ಧಿ ಕಂಡಿಲ್ಲ. ಪ್ರತಿ ವರ್ಷ ಮಳೆಯಾಗದೆ ಬರಗಾಲವಾದರೆ, ಈ ಬಾರಿ ಹೆಚ್ಚು ಮಳೆಯಾಗಿ ಬೆಳೆ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಕಳೆದ ವರ್ಷ ಉಳ್ಳಾಗಡ್ಡಿಗೆ ಬಂಪರ್ ಬೆಲೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿತ್ತು. ಈಗ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಉತ್ತಮ ಬೆಲೆ ಇದೆ. ಆದರೆ, ಸತತ ಮಳೆಯಿಂದ ಉಳ್ಳಾಗಡ್ಡಿ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆದ್ದರಿಂದ, ಜಿಲ್ಲಾಡಳಿತ ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಬೇಕು.

    | ಚಂದ್ರು ಲಕ್ಕನಗೌಡ್ರ, ನರೇಗಲ್ಲ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts