More

    ಹಾವೇರಿ ಜಿಲ್ಲೆಗೆ ಬರುವವರ ಮೇಲೆ ನಿಗಾ

    ಹಾವೇರಿ: ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಅನ್ಯ ಮಾರ್ಗದಿಂದ ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಬೇಕು. ಇಂಥವರ ಮಾಹಿತಿ ಪಡೆದು ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್​ಗೆ ಒಳಪಡಿಸಬೇಕು ಎಂದು ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ತಹಸೀಲ್ದಾರ್​ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಹೋಮ್ ಕ್ವಾರಂಟೈನ್​ನಲ್ಲಿರುವ ಎಲ್ಲರ ಆರೋಗ್ಯದ ಮಾಹಿತಿಯನ್ನು ಪ್ರತಿನಿತ್ಯ ಪಡೆಯಬೇಕು. ಕ್ವಾರಂಟೈನ್ ವಾಚ್ ತಂತ್ರಾಂಶದಲ್ಲಿ ನಿತ್ಯದ ಆರೋಗ್ಯದ ಸ್ಥಿತಿಗತಿಯನ್ನು ಅವರ ಸೆಲ್ಪಿ ಪೋಟೋದೊಂದಿಗೆ ಅಪ್​ಲೋಡ್ ಮಾಡಬೇಕು ಎಂದರು.

    ಸೇವಾ ಸಿಂಧು ನೋಂದಣಿ ಪಾಸ್​ನೊಂದಿಗೆ ಜಿಲ್ಲೆಗೆ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಬೇರೆ ಮಾರ್ಗದಿಂದ ಜಿಲ್ಲೆಗೆ ಪ್ರವೇಶ ಮಾಡಿದವರ ಮಾಹಿತಿಯನ್ನು ಪಿಡಿಒಗಳ ಮೂಲಕ ಪಡೆಯಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸಿ ಕರೊನಾ ಪ್ರಕರಣಗಳು ಪತ್ತೆಯಾದಲ್ಲಿ ನೀವೇ ಜವಾಬ್ದಾರರು. ಗೋವಾ ರಾಜ್ಯದಿಂದ ಬಂದವರನ್ನು ತಪಾಸಣೆ ನಡೆಸಿ, ಅವರಲ್ಲಿ ಕರೊನಾ ಲಕ್ಷಣಗಳಿದ್ದರೆ ಕ್ವಾರಂಟೈನ್​ಗೆ ಕಳುಹಿಸಬೇಕಾಗುತ್ತದೆ ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಮನೆಮನೆ ಆರೋಗ್ಯ ಸರ್ವೆ ಮಾಹಿತಿಯನ್ನು ಹೆಲ್ತ್ ವಾಚ್ ತಂತ್ರಾಂಶದಲ್ಲಿ ಅಳವಡಿಸಬೇಕಾಗಿದೆ. ಈ ತಂತ್ರಾಂಶದ ಹೊಸ ವರ್ಷನ್ ಬಿಡುಗಡೆಗೊಳಿಸಿದ್ದು, ಎಲ್ಲ ಬಿಎಲ್​ಒಗಳು ಅಪ್​ಡೇಟ್ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು ಎಂದರು.

    ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಮರಳಿಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಮೇ ಕೊನೆಯ ವರೆಗೂ ಮುಂದುವರಿಯಬಹುದು. ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್​ಗಾಗಿ ಗುರುತಿಸಲಾಗಿರುವ ವಿದ್ಯಾರ್ಥಿ ನಿಲಯಗಳಲ್ಲಿ 3,018 ಜನರಿಗೆ ಮಾತ್ರ ಸ್ಥಳಾವಕಾಶವಿದೆ. ಹೆಚ್ಚು ಜನ ಬಂದರೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ಅನುಕೂಲವಾಗುವಂತೆ ಉತ್ತಮ ಖಾಸಗಿ, ಸರ್ಕಾರಿ ಶಾಲಾ-ಕಾಲೇಜ್ ಕಟ್ಟಡಗಳನ್ನು ಗುರುತಿಸಿ ಕಾಯ್ದಿರಿಸುವಂತೆ ತಹಸೀಲ್ದಾರ್​ಗಳಿಗೆ ತಿಳಿಸಿದರು.

    ಎಸಿ ಡಾ. ದಿಲೀಪ್ ಶಶಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕಾರ್ವಿುಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಇತರರಿದ್ದರು.

    ಜಿಲ್ಲೆಯಲ್ಲಿ ಹೊರಗಿನಿಂದ ಬಂದವರಲ್ಲಿ 4,508 ಜನರ ಪೈಕಿ 4,140 ಜನ ಹೋಮ್ ಕ್ವಾರಂಟೈನ್ ಹಾಗೂ 380 ಜನ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಹೋಮ್ ಕ್ವಾರಂಟೈನಲ್ಲಿರುವ 4,140 ಜನರ ಮೇಲೆ ನಿತ್ಯವೂ ನಿಗಾವಹಿಸಬೇಕು.
    | ರಮೇಶ ದೇಸಾಯಿ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts