More

    ಹಾವೇರಿಗೆ ದೊರಕೀತೆ ನುಡಿಜಾತ್ರೆ ಆತಿಥ್ಯ

    ಹಾವೇರಿ: ಸಂತರ, ದಾರ್ಶನಿಕರ, ಸಾಹಿತಿಗಳ ತವರೂರಾದ ಹಾವೇರಿ ಜಿಲ್ಲೆಗೆ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಗಲಿದೆಯೇ ? ಎಂಬ ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ರ್ಚಚಿತವಾಗುತ್ತಿದೆ.

    ತ್ರಿಪದಿ ಕವಿ ಸರ್ವಜ್ಞ, ಭಕ್ತ ಕನಕದಾಸ, ಅಂಬಿಗರ ಚೌಡಯ್ಯ, ಸಂತ ಶಿಶುನಾಳ ಶರೀಫ ಶಿವಯೋಗಿ, ಪಂಚಾಕ್ಷರ ಗವಾಯಿ, ಪಂಡಿತ ಪುಟ್ಟರಾಜ ಕವಿ ಗವಾಯಿ, ಕಾದಂಬರಿ ಪಿತಾಮಹ ಗಳಗನಾಥರಂಥ ದಾರ್ಶನಿಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ. ಗೋಕಾಕ, ನಾಡೋಜ ಪಾಟೀಲ ಪುಟ್ಟಪ್ಪ, ಚಂಪಾ, ಪ್ರಥಮ ಕನ್ನಡ ನಿಘಂಟು ರಚನೆಯಲ್ಲಿ ಮಹತ್ತರ ಪಾತ್ರ ವಹಿಸಿದ ರಾಕು, ಡಾ. ಮಹಾದೇವ ಬಣಕಾರ ಸೇರಿ ಹಲವು ಪ್ರಮುಖ ಸಾಹಿತಿಗಳನ್ನು ನಾಡಿಗೆ ನೀಡಿದ ಕೀರ್ತಿ ಹಾವೇರಿ ಜಿಲ್ಲೆಯದ್ದು.

    ಆದರೆ, ಇದುವರೆಗೂ ಹಾವೇರಿ ಜಿಲ್ಲೆಗೆ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸುವ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಫೆ. 5ರಿಂದ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಲ್ಲಿ ಫೆ. 6ರಂದು ಮುಂದಿನ ಸಮ್ಮೇಳನ ನಡೆಯುವ ಸ್ಥಳದ ಘೊಷಣೆಯಾಗಲಿದೆ. ಹೀಗಾಗಿ ಈ ಬಾರಿಯಾದರೂ ಹಾವೇರಿ ಜಿಲ್ಲೆಗೆ ಸಮ್ಮೇಳನ ನಡೆಸುವ ಅವಕಾಶ ಒಲಿಯಲಿದೆಯೇ ಎಂಬ ನಿರೀಕ್ಷೆ ಸಾಹಿತ್ಯಾಭಿಮಾನಿಗಳಲ್ಲಿ ಗರಿಗೆದರಿದೆ.

    ಕೈ ಗೆ ಬಂದ ತುತ್ತು ಬಾಯಿಗಿಲ್ಲದಂತಾಗಿತ್ತು…

    ರಾಜ್ಯದಲ್ಲಿ ಇದುವರೆಗೆ 85 ಸಾಹಿತ್ಯ ಸಮ್ಮೇಳನಗಳಾಗಿದ್ದು, ಹಾವೇರಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಸಮ್ಮೇಳನಗಳನ್ನು ನಡೆಸಲಾಗಿದೆ. ಆದರೆ, ಜಿಲ್ಲೆ ಮಾತ್ರ ಸಾಹಿತ್ಯ ಜಾತ್ರೆಯಿಂದ ವಂಚಿತವಾಗಿರುವುದು ಸ್ಥಳೀಯ ಸಾಹಿತ್ಯಾಸಕ್ತರಲ್ಲಿ ಬೇಸರ ಮೂಡಿಸಿದೆ. ಚಿತ್ರದುರ್ಗದಲ್ಲಿ 2009ರಲ್ಲಿ ನಡೆದ ಸಮ್ಮೇಳನದಿಂದ ಹಾವೇರಿ ಜಿಲ್ಲೆಯಲ್ಲಿ ಸಮ್ಮೇಳನ ನಡೆಸಬೇಕು ಎಂಬ ಕೂಗು, ಪ್ರಯತ್ನ ನಡೆಯುತ್ತಲೇ ಇತ್ತು. ಸಮ್ಮೇಳನಕ್ಕಾಗಿ ಜಿಲ್ಲೆಯ ಸಾಹಿತ್ಯಾಸಕ್ತರು ಸಾಹಿತ್ಯ ಪರಿಷತ್​ಗೆ 10,000 ಪತ್ರಗಳನ್ನು ಬರೆದಿದ್ದರು. ಜಿಲ್ಲೆಯಲ್ಲಿ ನಡೆದ ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಹಾವೇರಿ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಮಾಡಿಕೊಡಬೇಕೆಂಬ ನಿರ್ಣಯಗಳನ್ನು ಕೈಗೊಳ್ಳುತ್ತಲೇ ಬರಲಾಗಿತ್ತು. ಇದೆಲ್ಲದ ಫಲವಾಗಿ 2014ರಲ್ಲಿ ಕೊಡಗು ಜಿಲ್ಲೆಯಲ್ಲಿ ಆಯೋಜಿಸಿದ್ದ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಹಾವೇರಿ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ವಹಿಸುವ ಭಾಗ್ಯ ಒದಗಿಬಂದಿತ್ತು. ಆದರೆ, ಮುಂದೆ ಹಾವೇರಿ ಹಾಗೂ ರಾಣೆಬೆನ್ನೂರನ ನಡುವೆ ಸ್ಥಳ ಗೊಂದಲದ ಪರಿಣಾಮ ಸಮ್ಮೇಳನದ ಆತಿಥ್ಯ ಕೈತಪ್ಪಿ ಶ್ರವಣಬೆಳಗೊಳಕ್ಕೆ ಹೋಗಿತ್ತು.

    ಮತ್ತೆ ಚಿಗುರೊಡೆದ ಕನಸು: ಸ್ಥಳ ನಿಗದಿ ಗೊಂದಲದ ನಂತರ ಕಳೆದ 5 ವರ್ಷದಿಂದ ಜಿಲ್ಲೆಯ ಕಸಾಪ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾಹಿತಿಗಳು ಮತ್ತೆ ಜಿಲ್ಲೆಗೆ ಸಮ್ಮೇಳನದ ಆತಿಥ್ಯ ಕೇಳುವುದನ್ನೇ ಕೈಬಿಟ್ಟಿದ್ದರು. ಆದರೆ, ಇತ್ತೀಚೆಗೆ ಹಾವೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರು ಓಲೇಕಾರ, ಬಿ.ಸಿ. ಪಾಟೀಲ ಇತರರು ನಾವೆಲ್ಲ ಸಹಕಾರ ನೀಡುತ್ತೇವೆ. ಮುಂದಿನ ಬಾರಿ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸೋಣ. ಅದಕ್ಕೆ ಪೂರಕ ಪ್ರಯತ್ನಗಳನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದರು. ಇದರಿಂದ ಐದು ವರ್ಷಗಳ ನಂತರ ಮತ್ತೆ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕನಸು ಚಿಗುರೊಡೆದಿದೆ. ಜಿಲ್ಲಾ ಕಸಾಪ ಪದಾಧಿಕಾರಿಗಳು ಕೇಂದ್ರ ಕಸಾಪ ಸಮಿತಿಯ ಎದುರು ನಮಗೆ ಈ ಬಾರಿ ಅವಕಾಶ ಕೊಡಿ ಎಂದು ಹಕ್ಕು ಮಂಡಿಸಲು ಸಜ್ಜಾಗಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು ಕಸಾಪ ರಾಜ್ಯಾಧ್ಯಕ್ಷರೊಂದಿಗೂ ಈ ಕುರಿತು ರ್ಚಚಿಸಿದ್ದಾರೆ.

    ಪ್ರಭಾವ ಬೀರುವುದೇ ಜನಪ್ರತಿನಿಧಿಗಳ ಶಿಫಾರಸು: ಕಸಾಪ ಸ್ವಾಯತ್ತ ಸಂಸ್ಥೆಯಾಗಿದೆ. ಪದಾಧಿಕಾರಿಗಳು ಕೈಗೊಳ್ಳುವ ನಿರ್ಣಯವೇ ಅಂತಿಮವಾಗಿದೆ. ಜಿಲ್ಲೆಯ ಸಚಿವರು, ಶಾಸಕರು ಈ ಬಾರಿ ಹಾವೇರಿಗೆ ಸಮ್ಮೇಳನ ನೀಡಲು ಮನು ಬಳಿಗಾರ ಅವರ ಮೇಲೆ ಒತ್ತಡ ಹಾಕಿದ್ದಾರೆ. ಅವರ ಒತ್ತಡ ಪ್ರಭಾವ ಬೀರುವುದೇ ಎಂಬುದನ್ನು ಕಾಯ್ದುನೋಡಬೇಕಿದೆ.

    ಮತ್ತೆ ಆರಂಭಗೊಂಡಿದೆ ಸ್ಥಳದ ಕ್ಯಾತೆ: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಚಿವರು, ಶಾಸಕರು ಈ ಬಾರಿ ಹಾವೇರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ತರಲು ಪ್ರಯತ್ನಿಸುವುದಾಗಿ ಭರವಸೆ ನೀಡುತ್ತಿದ್ದಂತೆ ಮತ್ತೆ ಸ್ಥಳದ ಕ್ಯಾತೆ ಆರಂಭಗೊಂಡಿದೆ. ರಾಣೆಬೆನ್ನೂರ ತಾಲೂಕು ಕಸಾಪ ಘಟಕದವರು ಸಭೆ ನಡೆಸಿ ರಾಣೆಬೆನ್ನೂರಿಗೆ ಆತಿಥ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನುಳಿದ ತಾಲೂಕಿನವರು ಹಾವೇರಿಗೆ ಕೊಡುವುದಕ್ಕೆ ಸಮ್ಮತಿಸಿದ್ದಾರೆ. ರಾಣೆಬೆನ್ನೂರ ಕಸಾಪ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನವನ್ನು ಜಿಲ್ಲೆಗೆ ತರಲು ಕಸಾಪ ಪದಾಧಿಕಾರಿಗಳು ಶ್ರಮಿಸಬೇಕಿದೆ.

    ಈ ಬಾರಿ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ನೀಡುವಂತೆ ಕಸಾಪದ ಎಲ್ಲ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ಇದುವರೆಗೆ ಸಮ್ಮೇಳನ ನಡೆದಿಲ್ಲ. ಅದಕ್ಕಾಗಿ ಅವಕಾಶ ನೀಡುವಂತೆ ಕೇಳಿದ್ದೇವೆ. ಜಿಲ್ಲೆಯ ಸಚಿವರು, ಶಾಸಕರು ಮುಂದೆ ನಿಂತು ಯಶಸ್ವಿಯಾಗಿ ಸಮ್ಮೇಳನ ನಡೆಸುವ ಭರವಸೆ ನೀಡಿದ್ದಾರೆ. ಅದನ್ನು ರಾಜ್ಯಾಧ್ಯಕ್ಷರ ಗಮನಕ್ಕೂ ತಂದಿದ್ದೇವೆ. ಈ ಬಾರಿ ಸಮ್ಮೇಳನವನ್ನು ಹಾವೇರಿಗೆ ತರುವ ಶತ ಪ್ರಯತ್ನ ಮುಂದುರಿಸಿದ್ದೇವೆ.
    | ಎಚ್.ಬಿ. ಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts