More

    ಹಾಳಾಗಿದೆ ಅಘನಾಶಿನಿಯ ತಾರಿ ದಕ್ಕೆ ರಸ್ತೆ

    ಕುಮಟಾ: ತಾಲೂಕಿನ ಅಘನಾಶಿನಿಯ ತಾರಿ ದಕ್ಕೆಯ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ.

    ಅಘನಾಶಿನಿಯಲ್ಲಿ ಅಂಗಡಿಕೇರಿಯಿಂದ ತದಡಿಗೆ ಸಂಪರ್ಕ ಕಲ್ಪಿಸುವ ತಾರಿ ದಕ್ಕೆಗೆ ಅಳಿವೆಯಂಚಿನ ರಸ್ತೆಯೊಂದೇ ಕೊಂಡಿ. ಕೆಲ ವರ್ಷದ ಹಿಂದೆ ಇಲ್ಲಿ ವಾಹನ ಸಂಚರಿಸಬಹುದಾದಷ್ಟು ರಸ್ತೆ ಇರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇರುವ ರಸ್ತೆಯನ್ನೇ ಅಭಿವೃದ್ಧಿಪಡಿಸಿ ತಾರಿದಕ್ಕೆಯ ಬಾರ್ಜ್​ವರೆಗೆ ಬೈಕ್​ಗಳ ಓಡಾಟಕ್ಕೆ ಅನುಕೂಲವಾಗುವಂತೆ ಅಳಿವೆಯಂಚಿಗೆ ಮಣ್ಣು ಸುರಿದು ಶಿಲೆಕಲ್ಲಿನ ತಡೆಗೋಡೆ ನಿರ್ವಿುಸಲಾಗಿದೆ. ಸ್ಥಳೀಯರ ಪ್ರಕಾರ ಈ ಕೆಲಸ ಸರಿಯಾಗಿಲ್ಲ. ನಿತ್ಯ ಭರತ-ಇಳಿತದಿಂದ ಕೊರೆತವಾಗುವ ಜಾಗದಲ್ಲಿ ಕೆಂಪುಮಣ್ಣು ಸುರಿದಿದ್ದರಿಂದ ಹೆಚ್ಚು ದಿನ ತಾಳಿಕೆ ಬರುವಂಥ ಕೆಲಸವಾಗಿಲ್ಲ ಎಂದು ದೂರುತ್ತಿದ್ದಾರೆ.

    ಈಗ ಒಂದೆಡೆ ತಡೆಗೋಡೆ ಅಳಿವೆಗೆ ಜಾರುತ್ತಿದ್ದರೆ, ರಸ್ತೆಯ ಮಣ್ಣು ಕೊಚ್ಚಿ ಹೋಗುತ್ತಿದೆ. ರಸ್ತೆಯ ಮೇಲೆ ನೀರು ನಿಂತು ಗುಂಡಿಗಳು ನಿರ್ವಣವಾಗಿವೆ.

    ರಸ್ತೆ ಹದಗೆಟ್ಟ ಕಾರಣದಿಂದ ಬಾರ್ಜ್​ವರೆಗೆ ಬೈಕ್​ಗಳನ್ನು ಒಯ್ಯಲಾಗುತ್ತಿಲ್ಲ. ಬಾರ್ಜ್ ಕೂಡಾ ಓಡಾಟವಿಲ್ಲದೆ ನಿಂತು ಕೆಟ್ಟು ಹೋಗಿದೆ. ಅತ್ತ ರಸ್ತೆಯೂ ಇಲ್ಲ, ಇತ್ತ ಬಾರ್ಜ್ ಕೂಡಾ ಇಲ್ಲದೆ ಸ್ಥಳೀಯರಿಗೆ ಮಾತ್ರವಲ್ಲದೆ ನಿತ್ಯ ತದಡಿ-ಅಘನಾಶಿನಿ ನಡುವೆ ಸಂಚರಿಸುವ ಸಾವಿರಾರು ಜನರ ಗೋಳು ಹೇಳತೀರದಾಗಿದೆ. ಕಳೆದ ಎರಡು ತಿಂಗಳಿಂದ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ತಾತ್ಕಾಲಿಕ ದುರಸ್ತಿ ಕಾರ್ಯವನ್ನೂ ಮಾಡಿಲ್ಲ ಎಂದು

    ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕೂಡಲೆ ತಾರಿ ರಸ್ತೆಯನ್ನು ದುರಸ್ತಿ ಮಾಡಬೇಕು. ರಸ್ತೆ ಹಾಗೂ ತಡೆಗೋಡೆಗೆ ಕಾಂಕ್ರೀಟ್ ಮಾಡಿ ಶಾಶ್ವತವಾಗಿ ಸಮಸ್ಯೆ ಪರಿಹರಿಸಬೇಕು ಸ್ಥಳೀಯರಾದ ಕಾಮೇಶ್ವರ ಕೃಷ್ಣ ಅಂಬಿಗ, ಗಣಪತಿ ಜಿ. ಸಭಾಹಿತ, ಸೀತಾರಾಮ ಶಂಕರ ನಾಯ್ಕ, ಗಣ್ಯ ರಘುವೀರ ಶೆಟ್ಟಿ, ಮಂಜುನಾಥ ವಿ. ನಾಯ್ಕ, ಜನಾರ್ಧನ ರಘುವೀರ ನಾಯ್ಕ, ಜಿತೇಂದ್ರ ಪಟಗಾರ, ಕೃಷ್ಣಮೂರ್ತಿ ಗೋವಿಂದ ನಾವಡ , ಮೋಹನ ನಾಗಪ್ಪ ಲಕ್ಕುಮನೆ ಇತರರು ಆಗ್ರಹಿಸಿದ್ದಾರೆ.

    ಅಘನಾಶಿನಿಯಲ್ಲಿ ತಾರಿದಕ್ಕೆ ರಸ್ತೆ ಬಹಳ ಹಾಳಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕನಿಷ್ಠ 50 ಲಕ್ಷ ರೂ ಬೇಕು. ಇದು ಜಿಪಂ ವ್ಯಾಪ್ತಿಗೆ ಮೀರಿದ್ದು, ಸರ್ಕಾರ ಹೆಚ್ಚಿನ ಹಣಕಾಸು ಒದಗಿಸಬೇಕು. | ರತ್ನಾಕರ ನಾಯ್ಕ ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts