More

    ಹಸಿ ಅಡಕೆ ಟೆಂಡರ್ ವರದಾನ

    ರಾಜೇಂದ್ರ ಶಿಂಗನಮನೆ ಶಿರಸಿ

    ಅಡಕೆ ಕೊಯ್ಲು ಮತ್ತು ಸಂಸ್ಕರಣೆ ಮಾಡುವಲ್ಲಿ ಕೂಲಿ ಕಾರ್ವಿುಕರ ಸಮಸ್ಯೆ ಸದಾ ಕಾಡುತ್ತದೆ. ಮಲೆನಾಡು ಅಡಕೆ ಬೆಳೆಗಾರರ ಬಹುಕಾಲದ ಈ ಸಮಸ್ಯೆಗೆ ಸಹಕಾರಿ ಸಂಸ್ಥೆಗಳು ಈಗ ಪರಿಹಾರ ಸೂಚಿಸಿವೆ. ಹಸಿ ಅಡಕೆ ಖರೀದಿಗೆ ವೇದಿಕೆ ಒದಗಿಸುವ ಮೂಲಕ ಬೆಳೆಗಾರರ ಹಿತ ಕಾಪಾಡುತ್ತಿವೆ.

    ಅಡಕೆ ಕೊಯ್ಲು ಮಾಡಲು ಕೊನೆಗೌಡರು ಸಿಗದೆ ತೋಟಿಗರು ಹೈರಾಣಾಗುತ್ತಿದ್ದಾರೆ. ಅವರಿಗೆ ನೀಡುವ ಕೂಲಿಯೂ ದುಬಾರಿಯಾಗುತ್ತಿದೆ. ದಿನಕ್ಕೆ ಒಂದೂವರೆ ಸಾವಿರ ಕೊಟ್ಟರೂ ಕಾರ್ವಿುಕರು ಸಿಗುತ್ತಿಲ್ಲ. ಅಡಕೆ ಸುಲಿಯಲು, ಬೇಯಿಸಲು ಮತ್ತು ಒಣಗಿಸಲು ಕೂಡ ಹಲವರು ಹರಸಾಹಸಪಡಬೇಕಿದೆ. ಹೀಗಾಗಿ, ಹಸಿ ಅಡಕೆಯನ್ನೇ ಮಾರಾಟ ಮಾಡುವವರ ಸಂಖ್ಯೆ ಅಧಿಕವಾಗಿದೆ. ಬೆಳೆಗಾರರ ಈ ಅಸಹಾಯಕತೆಯನ್ನು ಫಸಲು ಗುತ್ತಿಗೆದಾರರು ದುರ್ಬಳಕೆ ಮಾಡಿಕೊಂಡು ದರ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದರು. ಇದನ್ನು ಮನಗಂಡ ಹಲವು ಸಹಕಾರಿ ಸಂಸ್ಥೆಗಳು ಹಸಿ ಅಡಕೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿವೆ. ಇಷ್ಟು ವರ್ಷ ಸೀಮಿತ ಸಂಸ್ಥೆಗಳು ಈ ವ್ಯವಸ್ಥೆ ಅಳವಡಿಸಿಕೊಂಡಿದ್ದವು. ಈ ವರ್ಷ ನಗರ, ಗ್ರಾಮೀಣ ಭಾಗದ ಬಹುತೇಕ ಸಹಕಾರಿ ಸಂಸ್ಥೆಗಳು ಹಸಿ ಅಡಕೆ ಖರೀದಿಯಲ್ಲಿ ನಿರತವಾಗಿವೆ. ಇದಕ್ಕೆ ಬೆಳೆಗಾರರಿಂದ ಉತ್ತಮ ಸ್ಪಂದನೆ ಕೂಡ ಲಭಿಸುತ್ತಿದೆ.

    ರೈತರನ್ನು ಆಕರ್ಷಿಸಿದ ದರ: ಕದಂಬ ಮಾರ್ಕೆಟಿಂಗ್ ಟ್ರಸ್ಟ್ ಹತ್ತು ವರ್ಷಗಳ ಹಿಂದೆ ಹಸಿ ಅಡಕೆಯನ್ನು ಹರಾಜು ಮೂಲಕ ಖರೀದಿಸುವ ಪ್ರಕ್ರಿಯೆ ಪರಿಚಯಿಸಿತ್ತು. ಇದೀಗ ಟಿಎಸ್​ಎಸ್., ಟಿಎಂಎಸ್ ಸೇರಿದಂತೆ ತಾಲೂಕಿನ 25ಕ್ಕೂ ಹೆಚ್ಚು ಸೊಸೈಟಿಗಳಲ್ಲಿ ಇದು ಯಶಸ್ವಿಯಾಗಿ ನಡೆಯುತ್ತಿದೆ. ಹಸಿ ಅಡಕೆಗೆ ಈ ಬಾರಿ ಆರಂಭದಲ್ಲಿ ಉತ್ತಮ ದರವು ಸಿಗುತ್ತಿದೆ. ಹಸಿ ಅಡಕೆ ಸರಾಸರಿ ಪ್ರತಿ ಕ್ವಿಂಟಾಲ್​ಗೆ 4,700 ರೂ. ದರ ಪಡೆದುಕೊಂಡಿದ್ದು, ಗರಿಷ್ಠ 5,108 ವರೆಗೂ ಇದೆ. ಗೋಟು ಅಡಕೆ (ಹಣ್ಣು) ಸರಾಸರಿ 5,400 ರೂ. ದರ ಪಡೆದುಕೊಂಡಿದೆ. ಗರಿಷ್ಠ 6,009 ರೂ. ದರವಿದೆ. ಈ ದರ ರೈತರನ್ನು ಆಕರ್ಷಿಸಿದೆ. ನ. 5ರಿಂದ ಖರೀದಿ ಆರಂಭಗೊಂಡಿದ್ದು ಈವರೆಗೆ 10 ಸಾವಿರ ಕ್ವಿಂಟಾಲ್​ಗೂ ಅಧಿಕ ಅಡಕೆ ಮಾರಾಟ ಕಂಡಿದೆ. ಹಳ್ಳಿಗಳಿಂದ ದಿನವೂ ಹಸಿ ಅಡಕೆ ತುಂಬಿಕೊಂಡ ವಾಹನಗಳು ಪೇಟೆಯತ್ತ ಧಾವಿಸುತ್ತಿವೆ.

    ಯಾರು ಫಲಾನುಭವಿಗಳು?
    ಕೊಯ್ಲು ಹಾಗೂ ಸಂಸ್ಕರಣೆಗೆ ಕೂಲಿ ಕಾರ್ವಿುಕರ ಕೊರತೆ ಜತೆ ಮನೆಯಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುವ ಕೈಗಳಿಲ್ಲದ ಬಹುತೇಕ ಮನೆಯವರು ಹಸಿ ಅಡಕೆ ಟೆಂಡರ್ ಫಲಾನುಭವಿಗಳಾಗಿದ್ದಾರೆ. ಶಿರಸಿ ತಾಲೂಕೊಂದರಲ್ಲೇ ಶೇ.30ರಷ್ಟು ಅಡಕೆ ಬೆಳೆಗಾರರು ಈ ವ್ಯವಸ್ಥೆಗೆ ತೆರೆದುಕೊಂಡಿದ್ದಾರೆ. ಚಾಲಿ ಹಾಗೂ ಕೆಂಪಡಕೆಗೆ ಕ್ವಿಂಟಾಲ್ ಒಂದಕ್ಕೆ ಮಾರುಕಟ್ಟೆಯಲ್ಲಿ ಸರಾಸರಿ 38ರಿಂದ 40 ಸಾವಿರ ರೂ. ದರವಿರುವ ಕಾರಣ ಹಸಿಅಡಕೆ, ಗೋಟು ಅಡಕೆಗೆ ಅಂದಾಜು 4ರಿಂದ 5 ಸಾವಿರ ರೂ. ಲಭಿಸುತ್ತಿದೆ. ಕೂಲಿ ಮೊತ್ತ ಲೆಕ್ಕ ಹಾಕಿದರೆ ಈ ದರ ಲಾಭವೇ ಆಗಿದೆ.

    ಫಸಲು ಗುತ್ತಿಗೆದಾರರು ಕಂಗಾಲು
    ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಹಸಿ ಅಡಕೆ ಟೆಂಡರ್​ನಿಂದ ಫಸಲು ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಬೇಕಾಬಿಟ್ಟಿ ದರಕ್ಕೆ ಬೆಳೆಗಾರರ ಬಳಿ ವ್ಯವಹಾರ ಮಾಡುತ್ತಿದ್ದ ಗುತ್ತಿಗೆದಾರರು ಈಗ ಮಾರುಕಟ್ಟೆ ಮೌಲ್ಯಕ್ಕೇ ಅಡಕೆ ಖರೀದಿಸುವ ಅನಿವಾರ್ಯತೆಯಲ್ಲಿದ್ದಾರೆ. ಹೆಚ್ಚಿನ ಅಡಕೆ ಬೆಳೆಗಾರರು ಸಹಕಾರಿ ಸಂಘಗಳ ಸದಸ್ಯರಿರುವ ಕಾರಣ ಪ್ರತ್ಯೇಕ ಗುತ್ತಿಗೆ ನೀಡದೆ ನೇರವಾಗಿ ಸಂಘದಲ್ಲಿನ ವ್ಯವಸ್ಥೆಗೆ ಅಡಕೆ ಹಾಕುತ್ತಿದ್ದಾರೆ. ಇದರಿಂದ ಉತ್ತಮ ದರದ ಜತೆ ತೂಕದಲ್ಲಿಯೂ ನಷ್ಟವಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

    ಹಸಿ ಅಡಕೆ ವ್ಯವಸ್ಥೆಯಡಿ ಅಡಕೆ ಮಾರುವುದರಿಂದ ಸುಲಿಯುವ, ಸಂಸ್ಕರಣೆ ಮಾಡುವ ಗೋಜು ಕಡಿಮೆಯಾಗುತ್ತದೆ. ಮೂರ್ನಾಲ್ಕು ಕೂಲಿ ಕಾರ್ವಿುಕರನ್ನು ಇಟ್ಟುಕೊಂಡು ಇಡೀ ಕೊನೆ ಕೊಯ್ಲು ಮಾಡಲು ಸಾಧ್ಯವಿದೆ.
    | ಗಣಪತಿ ಹೆಗಡೆ ಅಡಕೆ ಬೆಳೆಗಾರ

    ಹಸಿ ಅಡಕೆ ಟೆಂಡರ್ ಪ್ರಕ್ರಿಯೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೂಲಿ ಸಮಸ್ಯೆ ನಡುವೆ ನಗರ ಹಾಗೂ ಗ್ರಾಮೀಣ ಭಾಗದ ಸಹಕಾರಿ ಸಂಘಗಳು ಇಂಥ ಹೆಜ್ಜೆ ಇಟ್ಟಿರುವುದು ವಿಶೇಷವಾಗಿದೆ. ಟಿಎಸ್​ಎಸ್ ಸಂಸ್ಥೆಯೊಂದರಲ್ಲೇ ಪ್ರತಿದಿನ ಸರಾಸರಿ 400ರಿಂದ 500 ಕ್ವಿಂಟಾಲ್ ಅಡಕೆ ವಹಿವಾಟು ನಡೆಯುತ್ತಿದೆ. ಈ ವ್ಯವಸ್ಥೆಯಡಿ ತಾಲೂಕಿನಲ್ಲಿ ಅಂದಾಜು ನಿತ್ಯ 2500 ಕ್ವಿಂ.ಗೂ ಅಧಿಕ ಅಡಕೆ ಮಾರಾಟವಾಗುತ್ತಿದೆ. ಹಸಿ ಅಡಕೆ ಖರೀದಿಯಿಂದ ಸಂಸ್ಥೆಗೆ ಹೆಚ್ಚಿನ ಲಾಭವಿಲ್ಲ. ಆದರೆ, ಸಂಸ್ಥೆಯ ಸದಸ್ಯರಿಗೆ ಎದುರಾಗುವ ಸಮಸ್ಯೆ ನಿವಾರಣೆಯಾಗುತ್ತದೆ.
    | ರವೀಶ ಹೆಗಡೆ
    ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts