More

    ಹಳ್ಳಿಗಳಿಗೂ ಹಬ್ಬಿದ ಕರೊನಾ ಸೋಂಕು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ಇದೀಗ ಗ್ರಾಮೀಣ ಭಾಗಕ್ಕೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

    ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ಮತ್ತು ಆಳ್ನಾವರ ಹಸಿರು ವಲಯಗಳಾಗಿದ್ದು, ಉಳಿದಂತೆ ಧಾರವಾಡ ಜಿಲ್ಲೆ ಗ್ರಾಮೀಣ ಭಾಗದಲ್ಲಿ ಬರೊಬ್ಬರಿ 62 ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಕಲಘಟಗಿ, ಕುಂದಗೋಳ, ಅಣ್ಣಿಗೇರಿ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಅತಿ ಹೆಚ್ಚು (42) ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬ ಮೃತಪಟ್ಟಿದ್ದಾನೆ. ಗುಡಿಸಾಗರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ 6, ಬಿ ಗುಡಿಹಾಳದಲ್ಲಿ 2 ಹಾಗೂ ಮುತ್ತಗಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಅಣ್ಣಿಗೇರಿ ತಾಲೂಕಿನ ಮಣಕವಾಡ ಹಾಗೂ ಸಾಸ್ವಿಹಳ್ಳಿಯಲ್ಲಿ ತಲಾ 1 ಪ್ರಕರಣ, ಕುಂದಗೋಳದ ತರ್ಲಘಟ್ಟದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅಂಚಟಗೇರಿಯಲ್ಲಿ 2, ನೂಲ್ವಿ 2, ರಾಯನಾಳ 2 ಹಾಗೂ ಇಂಗಳಹಳ್ಳಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

    ಗ್ರಾಮೀಣ ಭಾಗದ ಬಹುತೇಕ ಜನರು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಸೋಂಕು ಕಾಣಿಸಿಕೊಂಡ ಗ್ರಾಮಗಳ ಸೀಲ್​ಡೌನ್ ಪ್ರದೇಶದ ರೈತರ ಕೃಷಿ ಕೆಲಸಗಳು ಕುಂಠಿತವಾಗುತ್ತಿವೆ. ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದ್ದರೆ ಮತ್ತೊಂದೆಡೆ ಕರೊನಾ ಭೀತಿ ಶುರುವಾಗಿದೆ.

    ಹಳ್ಳಿಗಳ ಜನರು ಮುಗ್ಧ್ದು. ಅವಿಭಕ್ತ ಕುಟುಂಬಗಳು ಹೆಚ್ಚು. ಎಲ್ಲರೂ ಒಂದಾಗಿ ಬಾಳುವ ಕುಟುಂಬಗಳಲ್ಲಿ ಕರೊನಾ ಸೋಂಕು ಹರಡುವ ವೇಗ ಹೆಚ್ಚಾದರೆ ನಿಯಂತ್ರಣ ಕಷ್ಟಸಾಧ್ಯ ಎಂಬುದು ಆತಂಕಕಾರಿಯಾಗಿದೆ.

    ಜಾಗೃತಿ, ಮುನ್ನೆಚ್ಚರಿಕೆ

    ಸೋಂಕು ಕಾಣಿಸಿಕೊಂಡ ಗ್ರಾಮಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಕಂಟೇನ್ಮೆಂಟ್ ಪ್ರದೇಶದ ಜನರು ಮನೆ ಬಿಟ್ಟು ಹೊರಗೆ ಬಾರದಂತೆ, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಸುರಕ್ಷತೆ ಕ್ರಮ ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಕೆಲವೆಡೆ ಪೊಲೀಸರು ಧ್ವನಿವರ್ದಕದ ಮೂಲಕ ತಿಳಿವಳಿಕೆ ನೀಡುತ್ತಿದ್ದಾರೆ.

    ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅಂಚಟಗೇರಿ, ನೂಲ್ವಿ, ರಾಯನಾಳದಲ್ಲಿ ತಲಾ 2 ಹಾಗೂ ಇಂಗಳಹಳ್ಳಿಯಲ್ಲಿ 1 ಕರೊನಾ ಪ್ರಕರಣ ಪತ್ತೆಯಾಗಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ ಸೀಲ್​ಡೌನ್ ಮಾಡಲಾಗಿದೆ. ಆಯಾ ಪಿಡಿಒಗಳನ್ನು ಕಮಾಂಡರ್ ಅಧಿಕಾರಿಯನ್ನಾಗಿ ನೇಮಿಸಿ ಅಗತ್ಯ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

    | ಪ್ರಕಾಶ ನಾಶಿ, ತಹಸೀಲ್ದಾರ್, ಹುಬ್ಬಳ್ಳಿ ಗ್ರಾಮೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts