More

    ಹಳ್ಳಿಗಳಲ್ಲಿ ನೀರಿನ ಘಟಕಗಳ ದುರಸ್ತಿ ಮರೀಚಿಕೆ

    ತುಮಕೂರು: ಜಿಲ್ಲೆಯ ಹಳ್ಳಿಗಳಲ್ಲಿ ಕೈಕೊಟ್ಟಿರುವ ಶುದ್ಧ ನೀರಿನ ಘಟಕಗಳ ದುರಸ್ತಿ ಇನ್ನೂ ಮರೀಚಿಕೆಯಾಗಿದೆ. ಘಟಕ ನಿರ್ವಹಣೆಗೆ ಹೊಸ ಟೆಂಡರ್ ಆಹ್ವಾನಿಸಲಾಗಿದೆ ಎಂಬ ಅಧಿಕಾರಿಗಳ ಸಿದ್ಧ ಉತ್ತರಕ್ಕೆ ಜಿಪಂ ಅಧ್ಯಕ್ಷೆ ಲತಾ ತಲೆಯಾಡಿಸಿ, ಸುಮ್ಮನಾದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಒ ಘಟಕಗಳ ಬಗ್ಗೆ ಜಿಲ್ಲೆಯಾದ್ಯಂತ ಕೇಳಿಬರುತ್ತಿ ರುವ ದೂರುಗಳ ಬಗ್ಗೆ ಅಧ್ಯಕ್ಷೆ ಲತಾ ಅಸಮಾಧಾನ ಹೊರಹಾಕಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಉತ್ತರಿಸಿ, ಕೆಆರ್‌ಐಡಿಎಲ್ ಸಂಸ್ಥೆ ವತಿಯಿಂದ 54 ಘಟಕ ಹಾಗೂ ತುರುವೇಕೆರೆ ತಾಲೂಕಿನ 24, ಕೊರಟಗೆರೆ 4, ತಿಪಟೂರು ತಾಲೂಕಿನ 4 ಘಟಕ ಆಯಾ ಗ್ರಾಪಂಗೆ ಹಸ್ತಾಂತರಿಸಲಾಗಿದೆ ಎಂದರು.

    ಇಒಗಳಿಗೆ ಸೂಚನೆ: ಜಿಪಂ ಸಿಇಒ ಶುಭಾಕಲ್ಯಾಣ್ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವ ಆರ್‌ಒ ಪ್ಲಾಂಟ್‌ಗಳನ್ನು ಪಂಚಾಯಿತಿ ಅನುದಾನದಡಿ ದುರಸ್ಥಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇಒಗಳಿಗೆ ಸೂಚಿಸಿದರು. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳಲ್ಲಿ ನೋಡಲ್ ಅಧಿಕಾರಿ ನೇಮಿಸಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದರು.

    ಮಧುಗಿರಿ ತಾಲೂಕು ವೆಂಗಳಮ್ಮನಹಳ್ಳಿ ಗ್ರಾಮದಲ್ಲಿ ಲೋಟಸ್ ಪೌಟ್ರಿ ಫಾರಂನಲ್ಲಿ ಕೆಲಸಕ್ಕೆ ಹೊರರಾಜ್ಯದಿಂದ ಬಂದಿರುವ 80 ಮಕ್ಕಳು ಶಾಲೆಗೆ ದಾಖಲಾಗದ ಬಗ್ಗೆ ಉತ್ತರಿಸಿದ ಡಿಡಿಪಿಐ, 80 ಕುಟುಂಬಗಳು ವಾಸವಾಗಿದ್ದು, 2 ತಿಂಗಳ ನಂತರ ಬೇರೆಡೆ ವಲಸೆ ಹೋಗುತ್ತಾರೆ. ಶಾಲೆಗೆ ದಾಖಲು ಮಾಡಲು ಭಾಷೆಯ ಸಮಸ್ಯೆಯಾಗಿದೆ ಎಂದರು. ಸಭೆಯಲ್ಲಿ ಜಿಪಂ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಬಾಬು, ಅಕ್ಕಮಹಾದೇವಿ ಮತ್ತಿತರರು ಇದ್ದರು.

    ಚಿರತೆ ಹಾವಳಿ ನಿಯಂತ್ರಿಸಿ: ತುಮಕೂರು ತಾಲೂಕು ಬನ್ನಿಕುಪ್ಪೆ ಹಾಗೂ ಕಣಕುಪ್ಪೆ ಭಾಗದ ಚಿರತೆ ಹಾವಳಿ ನಿಯಂತ್ರಣಕ್ಕೆ ಜಿಪಂ ಉಪಾಧ್ಯಕ್ಷೆ ಶಾರದಾ ಸೂಚಿಸಿದರು. ಆರ್‌ಎಫ್‌ಒ ಮುನಿರಾಜು ಉತ್ತರಿಸಿ, ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿರುವ ವಿಶೇಷ ಹುಲಿ ಸಂರಕ್ಷಣಾ ದಳದ 30 ಜನ ಸಿಬ್ಬಂದಿಯ 4 ತಂಡಗಳಾಗಿ ರಚಿಸಿ ದೊಡ್ಡಮಳಲವಾಡಿ, ಹೆಬ್ಬೂರು ಬ್ಲಾಕ್, ಸಿ.ಎಸ್.ಪುರ ಬ್ಲಾಕ್ ಮತ್ತು ಮಣಿಕುಪ್ಪೆ ಬ್ಲಾಕ್‌ಗಳಿಗೆ ನಿಯೋಜಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts