More

    ಹಳ್ಳಿಗಳಲ್ಲಿ ಕರೊನಾ ಜಾಗೃತಿ


    ಮುಂಡರಗಿ: ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಮತ್ತು ಅವರ ತಂಡದವರು ನಿತ್ಯ ಬೆಳಗಿನಜಾವ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಕರೊನಾ ಮುಂಜಾಗ್ರತೆ ಕುರಿತು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಟಗಿಯವವರ ತಂಡಕ್ಕೆ ಪುರಸಭೆ ಸದಸ್ಯರಾದ ನಾಗರಾಜ ಹೊಂಬಳಗಟ್ಟಿ, ಪವನ ಮೇಟಿ, ಸಾಮಾಜಿಕ ಕಾರ್ಯಕರ್ತರಾದ ರಾಜು ಅಸುಂಡಿ, ರಫೀಕ್ ವಡ್ಡಟ್ಟಿ, ಧ್ರುವಕುಮಾರ ಹೂಗಾರ, ಇತರರು ಕೈಜೋಡಿಸಿದ್ದಾರೆ. ಲಾಕ್​ಡೌನ್ ಘೊಷಣೆಯಾದಂದಿನಿಂದ ಪ್ರತಿದಿನ ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಕರೊನಾಕ್ಕೆ ಮುಂಜಾಗ್ರತೆಯೊಂದೇ ಮದ್ದು. ಪ್ರತಿಯೊಬ್ಬರೂ ಮನೆಯಲ್ಲಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ಹೆಮ್ಮಾರಿಯನ್ನು ನಿಯಂತ್ರಿಸಬಹುದು. ಅದರಂತೆ ಸರ್ಕಾರ ನೀಡಿರುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

    ಉಪಾಹಾರ, ದಿನಸಿ ಪೂರೈಕೆ

    ಪಟ್ಟಣದ ಸಾಮಾಜಿಕ ಕಾರ್ಯಕರ್ತರು, ಪುರಸಭೆ ಸದಸ್ಯರು ಬಡವರಿಗೆ ಬೆಳಗ್ಗೆ ಉಪಾಹಾರ ಮತ್ತು ದಿನಸಿ ಸಾಮಗ್ರಿ ಪೂರೈಸುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಅಶ್ವಿನಿ ಗೌಡರ ಅವರು ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ನಗರದ ಪ್ರತಿ ಮನೆಗೆ 1 ಕೆಜಿ ಸಕ್ಕರೆ, ಉಪ್ಪು, ಎಣ್ಣೆ ಮೊದಲಾದ ದಿನಸಿ ಸಾಮಗ್ರಿಗಳನ್ನು ಒಟ್ಟು 30 ಬಡ ಕುಟುಂಬಗಳಿಗೆ ಪೂರೈಸಿದರು. ಶ್ರೀ ಸಾಯಿ ಇಡ್ಲಿ ಸೆಂಟರ್ ಮಾಲೀಕ ನಾಗರಾಜ ಕೊರ್ಲಹಳ್ಳಿ ಅವರು ಕರ್ತವ್ಯ ನಿರತ ಪೊಲೀಸರು, ಪೌರಕಾರ್ವಿುಕರಿಗೆ ಉಪಾಹಾರ ಪೂರೈಸಿದರು. ಇನ್ನು ಅನೇಕರು ಅಲೆಮಾರಿಗಳಿಗೆ, ಬಡವರಿಗೆ ಉಪಾಹಾರ, ದಿನಸಿ ಆಹಾರ ಪೂರೈಸುತ್ತಿದ್ದಾರೆ.

    ಸಿಎಂ ಪರಿಹಾರ ನಿಧಿಗೆ ದೇಣಿಗೆ

    ಮುಂಡರಗಿ: ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಟ್ಟಣದ ವರ್ತಕ ಶ್ರೀನಿವಾಸ ಉಪ್ಪಿನಬೆಟಗೇರಿ ಅವರು ಸೋಮವಾರ 1 ಲಕ್ಷ ರೂ. ದೇಣಿಗೆ ನೀಡಿದರು. ಅದೇ ರೀತಿ ಪಟ್ಟಣದ ವರ್ತಕ, ಪ್ರಗತಿಪರ ರೈತ ಎಸ್.ವಿ. ಪಾಟೀಲ ಅವರು ಮಂಗಳವಾರ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

    ಕಾರ್ವಿುಕರನ್ನು ಕರೆಸಿಕೊಳ್ಳಲು ಮನವಿ

    ಗದಗ: ದೇಶದ ವಿವಿಧೆಡೆ ವಾಸವಿರುವ ಜಿಲ್ಲೆಯ ಸಾವಿರಾರು ಜನರನ್ನು ಸ್ವಗ್ರಾಮಕ್ಕೆ ಕರೆಸಿಕೊಳ್ಳಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಒತ್ತಾಯಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 8 ರಿಂದ 10 ಸಾವಿರ ಜನರು ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ದುಡಿಯಲು ಹೋಗಿದ್ದಾರೆ. ಅವರೆಲ್ಲರನ್ನು ವಾಪಸ್ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮನೆಯಲ್ಲಿದ್ದೇ ಮಹಾಮಾರಿ ಹೊಡೆದೊಡಿಸೋಣ

    ಲಕ್ಷ್ಮೇಶ್ವರ: ಮನುಕುಲಕ್ಕೆ ಕಂಟಕವಾಗಿರುವ ಕರೊನಾ ವೈರಾಣುವಿನಿಂದ ನಮ್ಮ ಕುಟುಂಬ, ರಾಜ್ಯ, ರಾಷ್ಟ್ರದ ರಕ್ಷಣೆಗಾಗಿ ಇರುವ ಏಕೈಕ ಮಾರ್ಗವೆಂದರೆ ಎಲ್ಲರೂ ಮನೆಯಲ್ಲಿಯೇ ಇರುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಶಿಸ್ತು, ಸಂಯಮ, ಜವಾಬ್ದಾರಿಯುತವಾಗಿ ಪಾಲಿಸುವ ಮೂಲಕ ಈ ಹೆಮ್ಮಾರಿಯನ್ನು ಹೊಡೆದೋಡಿಸುವ ತಾರಕಶಕ್ತಿಯಾಗಿ ನಿಲ್ಲಬೇಕಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದರು.

    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಕರೊನಾ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಯಾರೊಬ್ಬರೂ ಹೋಗದಂತಹ ಪರಿಸ್ಥಿತಿ ನಮ್ಮ ಕಣ್ಣ ಮುಂದಿದೆ. ಈ ಮಹಾಮಾರಿ ಹರಡದಂತೆ ತಡೆಯಲು ಆರೋಗ್ಯ ಇಲಾಖೆ, ಪೊಲೀಸ್, ಸ್ಥಳೀಯ ಆಡಳಿತ ಹಗಲು ರಾತ್ರಿ ಎನ್ನದೆ, ತಮ್ಮನ್ನೇ ಸಮರ್ಪಿಸಿಕೊಂಡಿದೆ. ಜೀವ ಉಳಿದರೆ ಭವಿಷ್ಯದ ದಿನಗಳಲ್ಲಿ ನಾವು ಅಂದುಕೊಂಡಂತೆ ಬದುಕಬಹುದು. ಆದ್ದರಿಂದ ಎಲ್ಲರೂ ಆಸೆ, ಆಸಕ್ತಿ, ಅವಶ್ಯಕತೆ, ಹಿತಾಸಕ್ತಿಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಂಡು ನಮ್ಮವರ ಉಳಿವಿಗಾಗಿ ಸಂಕಲ್ಪ ಮಾಡಬೇಕಿದೆ. ಇಷ್ಟಾಗಿಯೂ ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ ಮುಂದಿನ ದಿನಗಳಲ್ಲಿ ಬದುಕು ಕಷ್ಟಕರವಾಗಿ ನಮ್ಮವರ ಅಂತ್ಯಕ್ಕೆ ನಾವೇ ಕಾರಣೀಕರ್ತರಾಗುತ್ತೇವೆ ಎಂದು ತಿಳಿಸಿದ್ದಾರೆ.

    ಖಾಸಗಿ ವೈದ್ಯರಿಗೂ ಸುರಕ್ಷಾ ಕವಚ ಒದಗಿಸಿ

    ಮುಳಗುಂದ: ಜಗತ್ತನ್ನೇ ಹೆಮ್ಮಾರಿಯಾಗಿ ಕಾಡುತ್ತಿರುವ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ವೈದ್ಯರಂತೆ ಖಾಸಗಿ ವೈದ್ಯರಿಗೂ ಸುರಕ್ಷಾ ಕವಚ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸಬೇಕು ಎಂದು ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ. ಚವಡಿ ತಿಳಿಸಿದರು.

    ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಖಾಸಗಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಭಾಗದ ಜನಸಾಮಾನ್ಯರಂತೆ ಖಾಸಗಿ ವೈದ್ಯರನ್ನೂ ಸರ್ಕಾರ ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಬೇಕು. ಸರ್ಕಾರಿ ವೈದ್ಯರಂತೆ ಖಾಸಗಿ ವೈದ್ಯರಿಗೂ ದಿನನಿತ್ಯ ನಡೆಯುವ ಎಲ್ಲ ವಿದ್ಯಾಮಾನಗಳನ್ನು ಅಪ್​ಡೇಟ್ ಮಾಡಬೇಕು. ಅಲ್ಲದೆ, ವಿಮಾ ಸೌಲಭ್ಯ ನೀಡಬೇಕು. ಈ ಬಗ್ಗೆ ಈವರೆಗೂ ಜಿಲ್ಲಾಡಳಿತ ಕರೊನಾ ಕಾಯಿಲೆ ತೊಲಗಿಸುವಲ್ಲಿ ಖಾಸಗಿ ವೈದ್ಯರನ್ನು ಸಂಪರ್ಕ ಮಾಡಿಲ್ಲ. ಅಲ್ಲದೆ, ಯಾವುದೇ ವೈದ್ಯರಿಗೂ ತರಬೇತಿ ನೀಡಿಲ್ಲ. ವೈದ್ಯರಾದ ನಾವು ವೃತ್ತಿ ಬಿಟ್ಟು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ನಾವು ವೃತ್ತಿಗೆ ಅಪಚಾರ ಮಾಡಿದಂತಾಗುತ್ತದೆ ಎಂದರು. ಡಾ. ಆಯ್.ಸಿ. ಪಾಟೀಲ, ಡಾ. ಸಂಜೀವರಡ್ಡಿ ಮಲ್ಲರಡ್ಡಿ, ಡಾ. ಪಿ.ಎಸ್. ಜಕ್ಕನಗೌಡ್ರ, ಡಾ. ಎಸ್.ಎಸ್. ಮಟ್ಟಿ, ಡಾ. ಎನ್.ಆಯ್. ಬದಾಮಿ ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts