More

    ಹಳೇಹುಬ್ಬಳ್ಳಿಯಲ್ಲಿ ನೀರಿನ ಸಮಸ್ಯೆ ನಿತ್ಯನೂತನ

    ಹುಬ್ಬಳ್ಳಿ: ನಗರವನ್ನು ಹಳೇ ಹುಬ್ಬಳ್ಳಿ ಹಾಗೂ ನವ ಹುಬ್ಬಳ್ಳಿಯನ್ನಾಗಿ ಪ್ರತ್ಯೇಕಿಸುವ ಸಾಕಷ್ಟು ಸಂಗತಿಗಳಿವೆ. ಹುಬ್ಬಳ್ಳಿಗೆ ‘ವಾಣಿಜ್ಯ ನಗರಿ’ಯ ಪಟ್ಟ ಸಿಕ್ಕಿದ್ದು ನವ ಹುಬ್ಬಳ್ಳಿಯಿಂದ. ಇತ್ತೀಚೆಗೆ ಸಾಕಷ್ಟು ಸುಧಾರಣೆ ಕಂಡರೂ ಹಳೇ ಹುಬ್ಬಳ್ಳಿ ಭಾಗ ಈಗಲೂ ಹಿಂದುಳಿದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಹೊಸ್ತಿಲಲ್ಲಿ ಹಳೇ ಹುಬ್ಬಳ್ಳಿ ಭಾಗದ ಅಭಿವೃದ್ಧಿ ವಿಷಯವು ಮುನ್ನೆಲೆಗೆ ಬಂದಿದೆ.

    ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 69ರಿಂದ 75ರವರೆಗಿನ ಪ್ರದೇಶದಲ್ಲಿ ಸಿಮೆಂಟ್ ರಸ್ತೆ, ಗಟಾರ್ ನಿರ್ವಣವನ್ನು ಚುನಾಯಿತ ಪ್ರತಿನಿಧಿಗಳು ‘ಸುಧಾರಣೆ’ ಎಂದು ಹೇಳಿಕೊಳ್ಳುತ್ತಾರೆ. ಈ ಭಾಗದ ಜನರನ್ನು ಬಹುಕಾಲ ಕಾಡಿರುವುದು ಕುಡಿಯುವ ನೀರಿನ ಸಮಸ್ಯೆ. ಈಗಲೂ ನವಅಯೋಧ್ಯಾನಗರ, ಸದರಸೋಫಾ, ಇಂದಿರಾನಗರ, ಸರಸ್ವತಿನಗರ, ಕಸಬಾಪೇಟ, ಇನ್ನಿತರ ಕಡೆ ಪ್ರತಿ 5-6 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

    3-4 ವರ್ಷಗಳ ಹಿಂದೆ ಪ್ರತಿ 8-10 ದಿನಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಕಾರಣಕ್ಕೆ ಸದ್ಯ ಪ್ರತಿ 5-6 ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದನ್ನೇ ಕೆಲವರು ಪ್ರಗತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ನೀರಸಾಗರ ಜಲಾಶಯ ಭರ್ತಿಯಾಗಿರುವುದು ಹಾಗೂ 28 ಕೋಟಿ ರೂಪಾಯಿ ವ್ಯಯಿಸಿ ಒಂದೂವರೆ ವರ್ಷದ ಹಿಂದೆ ಸವದತ್ತಿಯಲ್ಲಿ ಮಲಪ್ರಭಾ ನದಿಯಿಂದ ನೀರೆತ್ತುವ ಸಾಮರ್ಥ್ಯ ಹೆಚ್ಚಿಸಿಕೊಂಡ ಬಳಿಕ ಅವಳಿ ನಗರದ ಎಲ್ಲರಿಗೂ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಹೇಳಿದ್ದರು. ಹೀಗೆ ಕೆಲವೇ ದಿನ ಮಾತ್ರ 3 ದಿನಗಳ ಆವರ್ತನೆ ಇದ್ದದ್ದು ಈಗ 5-6 ದಿನಕ್ಕೊಮ್ಮೆ ಬಂದು ನಿಂತಿದೆ. ಈ ಮಳೆಗಾಲದಲ್ಲಿಯೇ ಹೀಗಾದರೆ ಬೇಸಿಗೆಯಲ್ಲಿ ಹೇಗೆ ಎಂಬುದು ಮತದಾರರ ಪ್ರಶ್ನೆಯಾಗಿದೆ.

    ನವ ಹುಬ್ಬಳ್ಳಿ ಭಾಗದ ಜನರಿಗೆ ನಿತ್ಯ ನೀರು, ನಿರಂತರ ನೀರು ಸೌಲಭ್ಯವಿದೆ. ಎಲ್ಲ 82 ವಾರ್ಡ್​ಗಳಿಗೆ ನಿರಂತರ ನೀರು ಸೌಲಭ್ಯ ವಿಸ್ತರಿಸುವ ಯೋಜನೆ ಕಾಮಗಾರಿ ಈಗ ತಾನೇ ಆರಂಭಗೊಂಡಿದೆ. ಅದು ಪೂರ್ಣಗೊಂಡು ಅನುಷ್ಠಾನಕ್ಕೆ ಬರುವ ವೇಳೆ ಪಾಲಿಕೆಯ ನೂತನ ಸದಸ್ಯರ 5 ವರ್ಷಗಳ ಅವಧಿ ಮುಗಿದಿರುತ್ತದೆ.

    ವೀರಾಪುರ ಓಣಿ, ಕೆ.ಬಿ.ನಗರ, ಗಾರ್ಡನ್​ಪೇಟ, ವಾಳ್ವೇಕರ ಹಕ್ಕಲ, ಶಿಕ್ಕಿಲಗಾರ ತಾಂಡಾ, ಪಡದಯ್ಯನಹಕ್ಕಲ, ಸದರಸೋಪಾ- ಇವು ಸಾಕಷ್ಟು ಜನಸಾಂದ್ರತೆಯ ಪ್ರದೇಶಗಳು. ಇಕ್ಕಟಾದ ರಸ್ತೆಗೆ ಹೊಂದಿಕೊಂಡು ಮನೆಗಳಿವೆ. ಕಾರವಾರ ರಸ್ತೆ ಕೆಂಪಗೇರಿ ಕೆರೆ ಇನ್ನೂ ಸುಧಾರಣೆ ಹಂತದಲ್ಲಿದೆ.

    ತೀವ್ರ ಹಣಾಹಣಿ

    ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 69ರಿಂದ 75ರವರೆಗಿನ ವಾರ್ಡ್​ಗಳಿಂದ ಪಾಲಿಕೆ ಸದಸ್ಯರಾಗಲು ತೀವ್ರ ಹಣಾಹಣಿ ಕಂಡು ಬಂದಿದೆ. ಕೆಲ ವಾರ್ಡ್​ಗಳಲ್ಲಿ 8-10 ಜನ ಸ್ಪರ್ಧಿಸಿದ್ದಾರೆ. ವಾ. ನಂ. 71ರಲ್ಲಿ 10, 74ರಿಂದ 8 ಹಾಗೂ 75ರಿಂದ 10 ಜನರ ನಾಮಪತ್ರಗಳು ಕ್ರಮಬದ್ಧವಾಗಿವೆ.

    69ನೇ ವಾರ್ಡ್​ನಲ್ಲಿ ಕಾಂಗ್ರೆಸ್​ನಿಂದ ಕಮಲಾ ಬೆಳದಡಿ, ಬಿಜೆಪಿಯಿಂದ ಅನುಷಾ ಜಾಧವ, ಎಐಎಂಐಎಂನಿಂದ ಲಕ್ಷ್ಮೀ ಗುಂಟ್ರಾಳ ಸ್ಪರ್ಧಿಸಿದ್ದಾರೆ. 70ರಲ್ಲಿ ಬಿಜೆಪಿಯಿಂದ ಮಾಜಿ ಕಾಪೋರೇಟರ್ ಶಾಂತಾ ಚನ್ನೋಜಿ, ಕಾಂಗ್ರೆಸ್​ನಿಂದ ಗೀತಾ ಹೊಸಮನಿ, ಆಪ್​ನಿಂದ ಲತಾ ವೈಶಾಖ ವರ್ಮನ್ ಕಣದಲ್ಲಿದ್ದಾರೆ.

    71ರಲ್ಲಿ ಬಿಜೆಪಿಯಿಂದ ಜಗನ್ನಾಥ ಪವಾರ, ಕಾಂಗ್ರೆಸ್​ನಿಂದ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಪುತ್ರ ಮಹಮ್ಮದ ಹಳ್ಳೂರು, ಆಪ್​ನಿಂದ ಫಯಾಜ್ ಸೌದಾಗರ ಸ್ಪರ್ಧಿಸಿದ್ದಾರೆ. ನಜೀರ್ ಹೊನ್ಯಾಳ ಎಐಎಂಐಎಂ ಅಭ್ಯರ್ಥಿಯಾಗಿದ್ದಾರೆ. ವಾ.ನಂ. 72ರಲ್ಲಿ ಕಮಲ ಪಕ್ಷದಿಂದ ಸುಮಿತ್ರಾ ಗುಂಜಾಳ, ಕಾಂಗ್ರೆಸ್​ನಿಂದ ಫರೀದಾಬಾನು ಮಾರ್ಕರ್, ಆಪ್​ನಿಂದ ಫರವೀನಾಬಾನು ಇನಾಂದಾರ ಸ್ಪರ್ಧಿಸಿದ್ದಾರೆ.

    73ರಲ್ಲಿ ಬಿಜೆಪಿಯಿಂದ ಶೀಲಾ ಕಾಟಕರ, ಕಾಂಗ್ರೆಸ್​ನಿಂದ ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ ಅವರ ಪತ್ನಿ ಶೋಭಾ ಕಣದಲ್ಲಿದ್ದಾರೆ. ವಾ.ನಂ. 74ರಲ್ಲಿ ಕಮಲ ಪಡೆಯಿಂದ ಮಾಜಿ ಕಾಪೋರೇಟರ್ ಹೊನ್ನವ್ವ ಅರಕೇರಿ, ಕಾಂಗ್ರೆಸ್​ನಿಂದ ಬೀಬಿ ಮುಲ್ಲಾ, ಜೆಡಿಎಸ್​ನಿಂದ ಹಜರಾಂಬಿ ಬೆಟಗೇರಿ, ಆಪ್​ನಿಂದ ಹೇಮಾ ಸಾತಪತಿ ಸ್ಪರ್ಧಿಸಿದ್ದಾರೆ. 75ನೇ ವಾರ್ಡ್​ನಲ್ಲಿ ಬಿಜೆಪಿಯಿಂದ ಚಿನ್ನಿ ಭಾವನಾ, ಕಾಂಗ್ರೆಸ್​ನಿಂದ ಮನ್ಸೂರಾ ಮುದಗಲ್, ಆಪ್​ನಿಂದ ಬಸವರಾಜೇಶ್ವರಿ ಬುಗಡಿ ಸ್ಪರ್ಧಿಸಿದ್ದಾರೆ. ಜೆಡಿಎಸ್​ನಿಂದ ಶೋಭಾ ಫಾಲವೈ ಟಿಕೆಟ್ ಪಡೆದಿದ್ದಾರೆ.

    ಇಲ್ಲಿಯ ವೈಶಿಷ್ಟ್ಯ

    ಬ್ರಿಟಿಷರ ಕಾಲದಲ್ಲಿ ಅಪರಾಧಿಗಳಿಗೆ ಕೂಡಿ ಇಡುತ್ತಿದ್ದ ಕಾರಣಕ್ಕೆ ಐತಿಹಾಸಿಕ ಮಹತ್ವ ಇರುವ ಸೆಟ್ಲಮೆಂಟ್ ಪ್ರದೇಶ ಇಲ್ಲಿದೆ. ಈಗ ಸೆಟ್ಲಮೆಂಟ್ ಗಂಗಾಧರನಗರ ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರಸಿದ್ಧಿ ಪಡೆದಿದೆ. ಹಳೇ ಹುಬ್ಬಳ್ಳಿ ಮಾರುಕಟ್ಟೆ, ಅಕ್ಕಸಾಲಿಗರ ಓಣಿ, ಅಕ್ಕಿಪೇಟ ಪ್ರದೇಶಗಳು ಮೊದಲಿನ ಹುಬ್ಬಳ್ಳಿಯ ವ್ಯಾಪಾರಿ ಸ್ಥಳಗಳು.

    ಮತದಾರರ ವಿವರ

    ವಾರ್ಡ್ ನಂ.—ಮತದಾರರ ಸಂಖ್ಯೆ

    69–10050

    70– 9527

    71–10714

    72– 8931

    73– 8207

    74–10984

    75– 7588

    75ನೇ ವಾರ್ಡ್​ನಲ್ಲಿ ರಸ್ತೆ, ಗಟಾರ ವ್ಯವಸ್ಥೆ ತಕ್ಕಮಟ್ಟಿಗೆ ಇದೆ. ಪ್ರತಿ 5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಹಿಂದೆ ಕೆಲ ದಿನ ಪ್ರತಿ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿದ್ದರು. ಈಗ ಐದು ದಿನಗಳಿಗಾಗುವಷ್ಟು ನೀರು ಸಂಗ್ರಹ ಮಾಡಿಟ್ಟುಕೊಳ್ಳಬೇಕಾಗಿದೆ.

    | ಕಲ್ಯಾಣಪ್ಪ ಬೂರಶೆಟ್ಟಿನಾವರ್, ಸರಸ್ವತಿನಗರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts