More

    ಹಳಿಗೆ ಮರಳದ ವಸ್ತ್ರೋದ್ಯಮ

    ಕಲಬುರಗಿ: ಕರೊನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್ಡೌನ್ ಸಡಿಲಿಕೆ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿದೆಯಾದರೂ ಉದ್ಯಮ ಕ್ಷೇತ್ರದಲ್ಲಿ ಚೇತರಿಕೆ ಕಾಣದಾಗಿದೆ. ಅದರಲ್ಲೂ ವಿಶೇಷವಾಗಿ ಸದಾ ಗ್ರಾಹಕರಿಂದ ಗಿಜಿಗುಡುತ್ತಿದ್ದ ವಸ್ತ್ರದ ಶೋರೂಂ, ಮಳಿಗೆಗಳ ವಹಿವಾಟು ಮಾಮೂಲಿನಂತೆ ಹಳಿಗೆ ಬರುವ ಲಕ್ಷಣ ಗೋಚರಿಸುತ್ತಿಲ್ಲ.
    ಮೂರು ತಿಂಗಳ ಲಾಕ್ಡೌನ್ನಿಂದಾಗಿ ಕೈಯಲ್ಲಿ ಕೆಲಸವಿಲ್ಲದ ಕಾರಣ ಬಟ್ಟೆ ಖರೀದಿಸಲು ಬಹುತೇಕ ಜನರು ಮುಂದೆ ಬರುತ್ತಿಲ್ಲ. ಇದರೊಂದಿಗೆ ಅಂಗಡಿ, ಶೋರೂಂ ಅಥವಾ ಮಾರ್ಕೆಟ್ ಪ್ರದೇಶಕ್ಕೆ ಹೋದಾಗ ಎಲ್ಲಿ ಚೀನಾ ವೈರಸ್ ಅಂಟಿಕೊಳ್ಳುತ್ತದೋ ಎಂಬ ಭಯವೂ ಕಾಡುತ್ತಿರುವುದರಿಂದ ಗ್ರಾಹಕರಿಲ್ಲದೆ ಬಟ್ಟೆ ಮಳಿಗೆಗಳು ಭಣಗುಡುತ್ತಿವೆ.
    ಬೆಳಗ್ಗೆ ಶೆಟರ್ ಮೇಲಕ್ಕೆತ್ತುವ ಬಟ್ಟೆ ವ್ಯಾಪಾರಸ್ಥರು ರಾತ್ರಿವರೆಗೂ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಬರದೆ ಖಾಲಿ ಕುಳಿತುಕೊಳ್ಳುತ್ತಿರುವುದು ಬಹುತೇಕ ಕಡೆ ಕಾಣುತ್ತಿದೆ. ಮಹಾನಗರದಲ್ಲಿ ಸಣ್ಣ ಪುಟ್ಟ ಮತ್ತು ದೊಡ್ಡದು ಸೇರಿ 4000ಕ್ಕೂ ಅಧಿಕ ಬಟ್ಟೆ ಅಂಗಡಿಗಳಿವೆ. ಲಾಕ್ಡೌನ್ ಕೊನೆಗೊಂಡು ತಿಂಗಳು ಸಮೀಪಿಸುತ್ತಿದ್ದರೂ ಖರೀದಿ ಪ್ರಕ್ರಿಯೆ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದುಕೊಂಡಿಲ್ಲ.
    ಸಣ್ಣ ಮತ್ತು ಮಧ್ಯಮ ಗಾತ್ರದ ಅಂಗಡಿಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ನಡೆಯುತ್ತಿದೆ. ದೊಡ್ಡ ಅಂಗಡಿ, ಮದುವೆಯಂಥ ದೊಡ್ಡ ಸಮಾರಂಭಗಳಿಗೆ ಬೇಕಿರುವ ಬಟ್ಟೆ ಮಾರಾಟ ಮಾಡುವ ಶೋರೂಮ್ಗಳಲ್ಲಿ ವಹಿವಾಟು ಇಲ್ಲವಾಗಿದೆ. ಕರೊನಾ ಲಾಕ್ಡೌನ್ ತೆರವು ಬಳಿಕವೂ ಕೊಡು-ಕೊಳ್ಳುವಿಕೆ ಇಲ್ಲದೆ ಅಂಗಡಿ ಮಾಲೀಕರು ಚಿಂತಾಕ್ರಾಂತರಾಗಿದ್ದಾರೆ.
    ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಕೊಡುವಷ್ಟು ಕೂಡ ವ್ಯಾಪಾರ ಆಗದಿರುವುದು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದರೊಂದಿಗೆ ಮಳಿಗೆಗಳ ಬಾಡಿಗೆ, ವಿದ್ಯುತ್ ಬಿಲ್ ತುಂಬುವುದಾದರೂ ಹೇಗೆ ಎಂದು ಬಟ್ಟೆ ವ್ಯಾಪಾರಿಗಳು ಗೋಳು ತೋಡಿಕೊಳ್ಳುತ್ತಿದ್ದಾರೆ. ಯಾವಾಗ ವಹಿವಾಟು ಸಹಜ ಸ್ಥಿತಿಗೆ ಮರಳುತ್ತದೋ ಎಂದು ಕಾದು ಕುಳಿತುಕೊಳ್ಳುವಂತಾಗಿದೆ.

    ಬಟ್ಟೆಗಳನ್ನು ಸಾಲದ ರೂಪದಲ್ಲಿ ತರಿಸುತ್ತೇವೆ. ಮದುವೆ ಸೀಸನ್ನಲ್ಲಿ ವ್ಯಾಪಾರವಾದ ನಂತರ ಅವರಿಗೆ ಹಣ ನೀಡುತ್ತೇವೆ. ಈ ಸಲ ವ್ಯಾಪಾರವಾಗಿಲ್ಲ. ಕೊಡಲು ಹಣವೂ ಇಲ್ಲ. ವ್ಯಾಪಾರದಲ್ಲಿ ಚೇತರಿಕೆ ಕಾಣದೆ ಬಟ್ಟೆ ಉದ್ಯಮದಲ್ಲಿ ತೊಡಗಿದವರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
    | ರಾಮಕೃಷ್ಣ ಸುತ್ರಾವೆ
    ದೇವಾನಂದ ಫ್ಯಾಷನ್ ಲೇನ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts