More

    ಹುಬ್ಬಳ್ಳಿ ಪಾಲಿಕೆ ಸಭಾಭವನ ಮತ್ತೆ ನವೀಕರಣ

    ಸಂತೋಷ ವೈದ್ಯ ಹುಬ್ಬಳ್ಳಿ

    ಸ್ಥಿರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಅನುಮಾನ ವ್ಯಕ್ತಪಡಿಸಲಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿಯ ಸಭಾಭವನ ಕಟ್ಟಡದ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ 15-20 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಆಗಸ್ಟ್ ತಿಂಗಳಿನಿಂದ ಪಾಲಿಕೆಯ ಸಾಮಾನ್ಯ ಸಭೆ ಹುಬ್ಬಳ್ಳಿಯಲ್ಲಿಯೇ ನಡೆಯಲಿದೆ.

    ಸ್ಥಿರತೆ ಬಗ್ಗೆ ಪರೀಕ್ಷೆ ನಡೆಸಿದ್ದ ಬೆಂಗಳೂರು ಮೂಲದ ಬ್ಯುರೋ ವೆರಿಟಾಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆ, ಸಭಾಭವನ ಕಟ್ಟಡ ಸುರಕ್ಷಿತವೆಂದು ವರದಿ ನೀಡಿದೆ. ಇದರ ಆಧಾರದ ಮೇಲೆ 50 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    1977ರಲ್ಲಿ ನಿರ್ವಣಗೊಂಡ ಪಾಲಿಕೆಯ ಸಭಾಭವನ ಕಟ್ಟಡವು ನೆಲ ಮಹಡಿ ಸೇರಿ 3 ಅಂತಸ್ತು ಹೊಂದಿದೆ. 2ನೇ ಮಹಡಿಯಲ್ಲಿ 130 ಆಸನ ಸಾಮರ್ಥ್ಯದ ಸಭಾಭವನವಿದೆ. 2016ರಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ಇದೇ ಸಭಾಭವನವನ್ನು ನವೀಕರಿಸಲಾಗಿತ್ತು. ಹಳೆಯದಾದ ಖುರ್ಚಿ, ಟೇಬಲ್, ಇಲೆಕ್ಟ್ರಿಕಲ್ ವೈರಿಂಗ್ ಬದಲಾಯಿಸಿ ಹೊಸದನ್ನು ಅಳವಡಿಸಲಾಗಿತ್ತು. 10 ಏರ್ ಕಂಡಿಷನರ್ ಹಾಕಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ರೂಪಿಸಿ ಸಭಾಭವನಕ್ಕೆ ಹೊಸ ರೂಪ ನೀಡಲಾಗಿತ್ತು.

    ಈಗಿನ ಬದಲಾವಣೆ: ಈಗ ಖುರ್ಚಿ, ಟೇಬಲ್, ಡೋರ್, ಏರ್ ಕಂಡಿಷನರ್, ಮೈಕ್ ಸಿಸ್ಟಮ್ ಯಾವುದೇ ಪೀಠೋಪಕರಣ ಬದಲಾಯಿಸುತ್ತಿಲ್ಲ. ಹಳೇ ಮ್ಯಾಟ್ ಫ್ಲೋರಿಂಗ್ ತೆಗೆದು ನೆಲಕ್ಕೆ ವೆಟ್ರಿಫೈಡ್ ಟೈಲ್ಸ್ ಹಾಕಲಾಗಿದೆ. ಮಳೆಗಾಲದಲ್ಲಿ ಗೋಡೆಗಳು ತೇವಾಂಶ ಹೀರಿಕೊಳ್ಳದಂತೆ ವಾಟರ್ ಪ್ರೂಪಿಂಗ್ ಮಾಡಿ ವಾಲ್ ಪೆನಲಿಂಗ್ ಮಾಡಲಾಗಿದೆ. ಸಭಾಭವನದ ಹೊರ ಗೋಡೆಗೆ ಮಳೆ ನೀರು ಬಡಿಯದಂತೆ ಹೊರಗಿನ ಸಿಮೆಂಟ್ ಸಜ್ಜಾ ವಿಸ್ತರಣೆ ಮಾಡಲಾಗಿದೆ. ಸೀಲಿಂಗ್ ಮತ್ತು ಇಲೆಕ್ಟ್ರಿಕಲ್ ವೈರಿಂಗ್ ಹೊಸದಾಗಿ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ಆಸನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಭಾಭವನದ ಹಿಂದಿನ ಕೊಠಡಿಗೂ ಹೊಸ ರೂಪ ನೀಡಲಾಗುತ್ತಿದೆ.

    ಹು-ಧಾ ಮಹಾನಗರ ಪಾಲಿಕೆಯ ಸದಸ್ಯರ ಸಂಖ್ಯೆಯನ್ನು 67ರಿಂದ 82ಕ್ಕೆ ಏರಿಕೆ ಮಾಡಿ, 2021ರ ಸೆಪ್ಟೆಂಬರ್​ನಲ್ಲಿ ಚುನಾವಣೆ ನಡೆಸಲಾಗಿತ್ತು. ಆದರೆ, ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ 2022ರ ಮೇ 28ರಂದು ಜರುಗಿತ್ತು. ನಡುವಿನ 7-8 ತಿಂಗಳುಗಳ ಅವಧಿಯಲ್ಲಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಸಭಾಭವನದ ಕಟ್ಟಡವನ್ನು ವಿಸ್ತರಿಸುವ ಪ್ರಸ್ತಾವನೆ ಇದ್ದವು. ಆದರೆ, ಸಭಾಭವನದ ಒಂದು ಗೋಡೆಯನ್ನು ಕೆಡವಿ ಮತ್ತೊಂದು ಕಟ್ಟಡಕ್ಕೆ ಸ್ಟೀಲ್ ಗರ್ಡರ್ ಅಳವಡಿಸಿ ವಿಸ್ತರಿಸುವುದು ಯೋಜನೆ ಅಪಾಯಕಾರಿ ಎಂದು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪರಿಣಿತರು ವರದಿ ನೀಡಿದ್ದರು.

    ಆಮೇಲೆ 3 ತಿಂಗಳು ಪಾಲಿಕೆಯ ಸಾಮಾನ್ಯ ಸಭೆ ಇದೇ ಸಭಾಭವನದಲ್ಲಿ ನಡೆದಿತ್ತು. ಒಮ್ಮೆ ಸಭಾಭವನದಲ್ಲಿ ಒಳಗೆ ನೀರು ಸೋರಿಕೆಯಾಗಿದ್ದರಿಂದ ಹಾಗೂ ಕಟ್ಟಡದ ಮೇಲ್ಭಾಗದ ಸಿಮೆಂಟ್ ತುಂಡುಗಳು ಉದುರಿ ಬಿದ್ದ ಪರಿಣಾಮ ಧಾರವಾಡ ಸತ್ತೂರಿನ ಎಸ್​ಡಿಎಂ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಪರಿಣಿತರಿಂದ ಕಟ್ಟಡ ಸ್ಥಿರತೆ ಪರೀಕ್ಷೆ ನಡೆಸಲಾಗಿತ್ತು. ಅವರು ಈ ಕಟ್ಟಡದಲ್ಲಿ ಸಭೆ ನಡೆಸುವುದು ಯೋಗ್ಯವಲ್ಲ ಎಂದು ವರದಿ ನೀಡಿದ್ದರು.

    ಸ್ಥಿರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಕಟ್ಟಡ ಸದೃಢವಾಗಿರುವ ಕುರಿತು ಅತ್ಯಾಧುನಿಕ ನಿಖರತೆಯ ಪರೀಕ್ಷೆಗಳನ್ನು ನಡೆಸುವಂತೆ ಬೆಂಗಳೂರಿನ ಬ್ಯುರೋ ವೆರಿಟಾಸ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ಸಂಸ್ಥೆಗೆ 2022ರ ಡಿಸೆಂಬರ್​ನಲ್ಲಿ ಪತ್ರ ಬರೆಯಲಾಗಿತ್ತು. ಅವರು, ರಿಬಾಂಡ್ ಹ್ಯಾಮರ್ ಟೆಸ್ಟ್, ಕ್ವಾಲಿಟಿ ಆಫ್ ಕಾಂಕ್ರೀಟ್, ಕೋರ್ ಟೆಸ್ಟ್, ಪ್ರೊಪೋಮೀಟರ್, ಇತ್ಯಾದಿ ಪರೀಕ್ಷೆಗಳನ್ನು ನಡೆಸಿ ಸಕಾರಾತ್ಮಕ ವರದಿ ನೀಡಿದ್ದಾರೆ.

    2022ರ ಸೆಪ್ಟೆಂಬರ್​ನಿಂದ 2023ರ ಜೂನ್ ತಿಂಗಳವರೆಗೆ ಪಾಲಿಕೆಯ ಸಾಮಾನ್ಯ ಸಭೆಗಳು ಧಾರವಾಡದಲ್ಲಿರುವ ಪಾಲಿಕೆಯ ಅಮೃತ ಮಹೋತ್ಸವ ಸಭಾಭವನದಲ್ಲಿ ನಡೆದಿವೆ. ಜುಲೈ ತಿಂಗಳ ಸಾಮಾನ್ಯ ಸಭೆಯೂ ಧಾರವಾಡದಲ್ಲಿಯೇ ನಡೆಯಲಿದೆ. ಆಗಸ್ಟ್​ನಲ್ಲಿ ಹುಬ್ಬಳ್ಳಿಯ ನವೀಕೃತ ಸಭಾಭವನದಲ್ಲಿ ನಡೆಸಲು ಸಿದ್ಧತೆಗಳು ನಡೆದಿವೆ.

    ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಸಭಾಭವನ ಕಟ್ಟಡ ಮುಂದಿನ 20 ವರ್ಷಗಳ ಕಾಲ ಸುರಕ್ಷಿತವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆಗಸ್ಟ್ ತಿಂಗಳಿಂದ ಇದೇ ಸಭಾಭವನ ಕಟ್ಟಡದಲ್ಲಿ ಪಾಲಿಕೆಯ ಸಾಮಾನ್ಯ ಸಭೆ ನಡೆಸಲಾಗುವುದು.

    | ವೀಣಾ ಬರದ್ವಾಡ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts