More

    ಹನಿ ನೀರಾವರಿ, ರೈತರಿಗೆ ದುಬಾರಿ

    ಬೆಳಗಾವಿ: ನೀರಾವರಿ ಸೌಲಭ್ಯದ ಮೂಲಕ ರೈತರ ಆದಾಯ ಹೆಚ್ಚಿಸಲು ಪೂರಕವಾಗಿದ್ದ ಹನಿ ನೀರಾವರಿ ಪದ್ಧತಿ ಈಗ ಅನ್ನದಾತನ ಜೇಬಿಗೆ ಹೊರೆಯಾಗತೊಡಗಿದೆ. ಸಣ್ಣ ಮತ್ತು ಮಧ್ಯಮ ಹಿಡುವಳಿದಾರ ರೈತರ ಅನುಕೂಲಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ‘ಹನಿ ನೀರಾವರಿ’ ಯೋಜನೆ ದುಬಾರಿಯಾಗಿದ್ದು, ಸಬ್ಸಿಡಿ ಹೊರತುಪಡಿಸಿ ಆಯಾ ಕಂಪನಿಗಳಿಗೆ ರೈತರು ಹೆಚ್ಚುವರಿ ಹಣ ತೆರುವಂತಾಗಿದೆ.

    ಕೃಷಿ ಜಮೀನಿನಲ್ಲಿ ಬೆಳೆ ಬೆಳೆಯುವಾಗ ಪೋಲಾಗುತ್ತಿದ್ದ ನೀರು ಸಂರಕ್ಷಿಸಲು ಮತ್ತು ಮಿತಬಳಕೆಯೊಂದಿಗೆ ಹೆಚ್ಚುವರಿ ಇಳುವರಿ ಪಡೆಯುವ ನಿಟ್ಟಿನಲ್ಲಿ ಸರ್ಕಾರವು ತುಂತುರು, ಹನಿ ನೀರಾವರಿ ಯೋಜನೆ ಜಾರಿಗೆ ತಂದಿದೆ. ಅಲ್ಲದೆ, ಎಲ್ಲ ವರ್ಗದ ರೈತರಿಗೆ ಶೇ.90 ಸಬ್ಸಿಡಿ ನೀಡುತ್ತಿದೆ. ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ರೈತರು ಸಂಪರ್ಕ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ವರ್ಷ ಕಳೆದರೂ ರೈತರಿಗೆ ಹನಿ ನೀರಾವರಿಯ ಸಬ್ಸಿಡಿ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ.

    ಕ್ರಮ ಕೈಗೊಳ್ಳದ ಅಧಿಕಾರಿಗಳು: ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ರೈತರಲ್ಲಿ ಹಿರಿತನದ ಆಧಾರದ ಮೇಲೆ ಸಬ್ಸಿಡಿ ಸೌಲಭ್ಯ ಸಿಗುತ್ತಿವೆ. ಆದರೆ, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ಆಯಾ ಕಂಪನಿಗಳ ಡೀಲರ್‌ಗಳೇ ರೈತರ ಹೆಸರಿನಲ್ಲಿ ಅರ್ಜಿ ಹಾಕುತ್ತಾರೆ. ಈ ಯೋಜನೆಯಡಿ 5 ಎಕರೆ ಒಳಗಿನ ಪ್ರದೇಶಕ್ಕೆ ಶೇ.90 ಸಬ್ಸಿಡಿ, ಅದರ ಮೇಲ್ಪಟ್ಟು 12.5 ಎಕರೆ ಯವರೆಗೂ ಶೇ.45 ಸಬ್ಸಿಡಿ ಸಿಗುತ್ತದೆ. ಯೋಜನೆಗೆ ರೈತರಿಂದ ಪ್ರತಿ ಎಕರೆಗೆ 8 ಸಾವಿರ ರೂ. ವರೆಗೆ ಹೆಚ್ಚುವರಿ ಹಣ ಪಾವತಿಸಿಕೊಳ್ಳುತ್ತಿದ್ದಾರೆ. ಇದು ಕೃಷಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.

    2 ಲಕ್ಷ ಹೆಕ್ಟೇರ್ ಬಾಕಿ: ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 2.70 ಲಕ್ಷ ಹೆಕ್ಟೇರ್ ಕಬ್ಬಿನ ಪ್ರದೇಶದ ಪೈಕಿ 70 ಸಾವಿರ ಹೆಕ್ಟೇರ್ ಹನಿ ನೀರಾವರಿ ಸೌಲಭ್ಯ ಹೊಂದಿದ್ದು, 2 ಲಕ್ಷ ಪ್ರದೇಶ ಬಾಕಿ ಉಳಿದುಕೊಂಡಿದೆ. ಸರ್ಕಾರವು ಕಬ್ಬಿನ ಬೆಳೆಗೆ ಹನಿ ಮತ್ತು ತುಂತುರು ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳುವ ಎಲ್ಲ ವರ್ಗದ ರೈತರಿಗೆ ಶೇ. 90 ಸಬ್ಸಿಡಿ ನೀಡುತ್ತಿದೆ. ಪ್ರತಿ ಹೆಕ್ಟೇರ್ (5 ಎಕರೆ)ಗೆ ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲು ಸುಮಾರು 1.25 ಲಕ್ಷ ರೂ. ಖರ್ಚಾಗುತ್ತದೆ. ಜಿಲ್ಲೆಯಿಂದ ವಾರ್ಷಿಕ ಸುಮಾರು 45 ಕೋಟಿ ರೂ. ವರೆಗೆ ಸಬ್ಸಿಡಿಯನ್ನು ಸರ್ಕಾರ ಪಾವತಿಸುತ್ತಿದೆ ಎಂದು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳೇಕರ ತಿಳಿಸಿದ್ದಾರೆ.

    ಸರ್ಕಾರವು ಹನಿ ನೀರಾವರಿಗೆ ಶೇ.90 ಸಬ್ಸಿಡಿ ಸೌಲಭ್ಯ ನೀಡುತ್ತಿದೆ. ಆದರೆ, ಆಯಾ ಕಂಪನಿಗಳ ಡೀಲರ್‌ಗಳು, ಅಂಗಡಿಕಾರರು ಪ್ರತಿ ಹೆಕ್ಟೇರ್‌ಗೆ ಅಥವಾ ಎಕರೆಗೆ 15 ಸಾವಿರಕ್ಕೂ ಹೆಚ್ಚು ಹಣ ಪಡೆಯುತ್ತಿದ್ದಾರೆ. ಹನಿ ನೀರಾವರಿಯ ಸಲಕರಣೆ ದರ ಪಟ್ಟಿಯನ್ನು ಆಯಾ ರೈತ ಸಂಪರ್ಕ ಕೇಂದ್ರಗಳ ಆವರಣದಲ್ಲಿ ಪ್ರಕಟಿಸುವಂತೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಪ್ರಕಟಿಸಿಲ್ಲ. ಸಬ್ಸಿಡಿ ಇದ್ದರೂ ರೈತರಿಗೆ ಹನಿ ನೀರಾವರಿ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ.
    | ರವಿ ಸಿದ್ದಮ್ಮನವರ ಜಿಲ್ಲಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ

    ಬೆಳಗಾವಿ ಜಿಲ್ಲೆಯಲ್ಲಿ ಹನಿ, ತುಂತುರು ನೀರಾವರಿ ಸೌಲಭ್ಯಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ರೈತರು ಅರ್ಜಿ ಸಲ್ಲಿಸುತ್ತಿದ್ದಾರೆ. ಆಯಾ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿಯೇ ಸಲಕರಣೆಗಳ ದರ ಪಟ್ಟಿ ಪ್ರಕಟಿಸಲು ಕಂಪನಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಸಬ್ಸಿಡಿ ಹೊರತುಪಡಿಸಿ ಹೆಚ್ಚುವರಿ ಹಣ ಕಟ್ಟಿಸಿಕೊಳ್ಳುತ್ತಿರುವ ಕುರಿತು ರೈತರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
    | ಶಿವನಗೌಡ ಪಾಟೀಲ ಜಿಲ್ಲಾ ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts