More

    ಹತ್ತಿರವಾಗುತ್ತಿದೆ ಮಳೆ, ಮುಗಿಯುತ್ತಿಲ್ಲ ರಗಳೆ

    ಮಂಜುನಾಥ ಅಂಗಡಿ ಧಾರವಾಡ

    ಜಿಲ್ಲೆಯಲ್ಲಿ 2019ರ ಆಗಸ್ಟ್, ಅಕ್ಟೋಬರ್​ನಲ್ಲಿ ಸುರಿದ ಮಳೆಯ ಅವಾಂತರದಿಂದ ಹಾನಿಗೀಡಾದ ಮನೆಗಳ ನಿರ್ವಣ, ದುರಸ್ತಿಗೆ ತುರ್ತು ಆದ್ಯತೆ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ಜಿಲ್ಲೆಯಲ್ಲಿ ಎ ಬಿ ಸಿ ವರ್ಗಗಳ ಗೊಂದಲ ಮುಗಿದಿಲ್ಲ. ಹೊಸ ಮನೆಗಳ ನಿರ್ಮಾಣ ಪ್ರಗತಿ ಕಾಣುತ್ತಿಲ್ಲ.

    ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ್ದ ಸರ್ಕಾರ, ಎ ಮತ್ತು ಬಿ ವರ್ಗದ ಫಲಾನುಭವಿಗಳಿಗೆ 5 ಲಕ್ಷ ರೂ. ಪರಿಹಾರ ಘೊಷಿಸಿತ್ತು. ನಂತರ ಬಿ ವರ್ಗದವರಿಗೆ ಕೆಲ ಷರತ್ತು ವಿಧಿಸಿ ಪರಿಹಾರವನ್ನು 3 ಲಕ್ಷ ರೂ.ಗೆ ಇಳಿಸಿದೆ. ಆಗಸ್ಟ್​ನಲ್ಲಿ ಹಾನಿಯಾದ ಮನೆಗಳು ನಂತರದ ದಿನಗಳಲ್ಲಿ ಮತ್ತಷ್ಟು ಹಾನಿಗೀಡಾಗಿವೆ. ಮನೆ ಹಾನಿ ವರ್ಗಗಳ ಗೊಂದಲ ಹಾಗೂ ವ್ಯಾಜ್ಯಗಳನ್ನು ಪರಿಹರಿಸಲು ಜಿಲ್ಲಾಡಳಿತ ಪ್ರತಿ ಗ್ರಾ.ಪಂ.ಗೊಂದರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಆದಾಗ್ಯೂ ಹಲವೆಡೆ ವ್ಯಾಜ್ಯಗಳು ಬಗೆಹರಿಯುತ್ತಿಲ್ಲ.

    * ಪ್ರಮಾಣಪತ್ರ/ ಘೊಷಣೆ: ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಕಂದಾಯ, ಪಿಡಿಒಗಳು, ಇಂಜಿನಿಯರ್​ಗಳ ತಾಂತ್ರಿಕ ಸಹಯೋಗದೊಂದಿಗೆ ಮನೆ ಹಾನಿಗೆ ಅನುಗುಣವಾಗಿ ವರ್ಗ ನಿಗದಿಪಡಿಸಲಾಗಿದೆ. ಬಿ ವರ್ಗದವರಿಗೆ ದುರಸ್ತಿ ಅಥವಾ ಪುನರ್ ನಿರ್ವಣದ ಆಯ್ಕೆ ಇದೆ. ಕೇವಲ ದುರಸ್ತಿಗೆ ಇಚ್ಛಿಸಿದರೆ ತಹಸೀಲ್ದಾರರಿಗೆ ಪ್ರಮಾಣಪತ್ರ/ ಘೊಷಣೆ ನೀಡಿದರೆ ನಿಗಮದ ತಂತ್ರಾಂಶದಲ್ಲಿ 3 ಲಕ್ಷ ರೂ. ನಮೂದಾಗುತ್ತದೆ. ಮನೆ ನೆಲಸಮ ಮಾಡಿ ‘ಪುನರ್ ನಿರ್ವಣ’ಕ್ಕೆ ಒಪ್ಪಿಗೆ ನೀಡಿದರೆ ‘ಎ’ ವರ್ಗಕ್ಕೆ ಉನ್ನತೀಕರಣ ಮಾಡಲಾಗುತ್ತಿದೆ. ಅವರಿಗೆ 4 ಕಂತುಗಳಲ್ಲಿ 5 ಲಕ್ಷ ರೂ. ಪರಿಹಾರ ಸಿಗಲಿದೆ. ಬಿ ವರ್ಗದ 1,687 ಮನೆಗಳಲ್ಲಿ ಎ ವರ್ಗಕ್ಕೆ ಉನ್ನತೀಕರಿಸಲು 1,639 ಫಲಾನುಭವಿಗಳು ಘೊಷಣೆ ಪತ್ರ ನೀಡಿದ್ದಾರೆ. 51 ಫಲಾನುಭವಿಗಳ ಒಪ್ಪಿಗೆ ಬಾಕಿ ಇದೆ.

    ಅಕಾಲಿಕ ಮಳೆ ಭೀತಿ: ಜಿಲ್ಲೆಯ ಅಲ್ಲಲ್ಲಿ 2 ದಿನಗಳ ಹಿಂದೆ ಅಕಾಲಿಕ ಮಳೆಯಾಗಿದೆ. ಕಳೆದ ವರ್ಷದ ಮಳೆಯ ಅವಾಂತರ ಇನ್ನೂ ಮಾಸಿಲ್ಲ. ಮನೆಗಳ ನಿರ್ಮಾಣ ನಿಧಾನವಾದರೆ ಸಂತ್ರಸ್ತರು ಮತ್ತೊಂದು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.

    ಮನೆಗಳ ಹಾನಿ ವಿವರ: ಜಿಲ್ಲೆಯಲ್ಲಿ ಎ, ಬಿ, ಸಿ ವರ್ಗದ 21,089 ಮನೆಗಳು ಹಾನಿಗೀಡಾಗಿವೆ. ಈ ಪೈಕಿ 20,959 ಅಧಿಕೃತ, 130 ಮನೆಗಳು ಅನಧಿಕೃತ. 128 ಮನೆಗಳನ್ನು ಎ ವರ್ಗ ಎಂದು ಗುರುತಿಸಿ 5 ಲಕ್ಷ ರೂ. ಪರಿಹಾರಕ್ಕೆ ಅರ್ಹಗೊಳಿಸಲಾಗಿದೆ. ಈ ಪೈಕಿ 9 ಮನೆಗಳು ಅನಧಿಕೃತ ಇದ್ದು, ತಲಾ 1 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಿ ವರ್ಗದ 1,687 ಮನೆಗಳಲ್ಲಿ 1,684 ಅಧಿಕೃತ, 3 ಮನೆ ಅನಧಿಕೃತ ಎಂದು ಗುರುತಿಸಲಾಗಿದೆ. 19,274 ಮನೆ ಸಿ ವರ್ಗದಲ್ಲಿ ಗುರುತಿಸಿ 118 ಮನೆಗಳನ್ನು ಅನಧಿಕೃತಗೊಳಿಸಲಾಗಿದೆ.

    ಬಿ ವರ್ಗದ ಮನೆಗಳನ್ನು ಎ ವರ್ಗಕ್ಕೆ ಉನ್ನತೀಕರಣಗೊಳಿಸಿಕೊಳ್ಳಲು ಫಲಾನುಭವಿಗಳಿಗೇ ಆಯ್ಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಬಿಯಿಂದ ಎ ವರ್ಗಕ್ಕೆ 1,636 ಮನೆಗಳ ಉನ್ನತೀಕರಣವಾಗಿದೆ. ಕೇವಲ 51 ಫಲಾನುಭವಿಗಳ ದೃಢೀಕರಣ ಬಾಕಿ ಇದೆ. ಬೇರೆ ಜಿಲ್ಲೆಗಳ ಶೇಕಡವಾರು ಪ್ರಗತಿ ಹೋಲಿಸಿದರೆ ನಮ್ಮದು ಉತ್ತಮ ಸಾಧನೆ. ಮನೆ ನಿರ್ವಣದ ವಿವಾದ ವ್ಯಾಜ್ಯಗಳನ್ನು ತಹಸೀಲ್ದಾರರು, ನೋಡಲ್ ಅಧಿಕಾರಿಗಳು ಮೊದಲ ಆದ್ಯತೆ ನೀಡಿ ಪರಿಹರಿಸಲು ಸೂಚಿಸಲಾಗಿದೆ. – ದೀಪಾ ಚೋಳನ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts