More

    ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಯೋಜನೆ ಸಹಕಾರಿ; ಜಡೆ ಶ್ರೀಗಳ ಅಭಿಮತ

    ಸೊರಬ: ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಟ್ಟಕಡೆಯ ವ್ಯಕ್ತಿ ಕೂಡ ಸ್ವಾವಲಂಬಿ ಬದುಕು ಸಾಗಿಸುವಂತಹ ಯೋಜನೆಗಳನ್ನು ರೂಪಿಸಿ ಸಮಾಜಕ್ಕೆ ನೀಡಿದ್ದಾರೆ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.
    ಪಟ್ಟಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸೊರಬ ವಲಯ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
    ಜನಸಾಮಾನ್ಯರ ನಿತ್ಯದ ಬದುಕನ್ನು ಗಮನಿಸಿದ ವೀರೇಂದ್ರ ಹೆಗ್ಗಡೆ ಅವರು ಜನರಿಗೆ ಸಹಕಾರ ನೀಡುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಯಕದಲ್ಲಿ ಭಗವಂತನ ಹೆಸರನ್ನು ಸೇರಿಸಿ ದುಡಿಮೆ ಹಾಗೂ ಸಂಸ್ಕಾರ ನೀಡುವಂಥ ಮಹತ್ವದ ಯೋಜನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮಂಜುನಾಥ ಸ್ವಾಮಿಯನ್ನು ಕಾಯಕದಲ್ಲಿ ಪ್ರತ್ಯಕ್ಷವಾಗಿ ನೋಡುತ್ತ ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
    ಸೃಷ್ಟಿಕರ್ತ ಎಲ್ಲ ಅವಕಾಶಗಳನ್ನೂ ನೀಡಿದ್ದಾನೆ. ಪ್ರಾಮಾಣಿಕ ದುಡಿಮೆಯಿಂದ ಸಂಪತ್ತನ್ನು ಗಳಿಸಿ ಉಳಿದ ಸಂಪತ್ತನ್ನು ದಾನ, ಧರ್ಮ, ಪರೋಪಕಾರ ಮಾಡುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಹೆತ್ತ ತಂದೆ, ತಾಯಿ, ಗುರುಹಿರಿಯರನ್ನು ನಿಕೃಷ್ಟವಾಗಿ ಕಾಣದೆ ಪೋಷಿಸಿ ಮುಕ್ತಿ ಕಾಣಿಸುವ ಮೂಲಕ ಅವರ ಸೇವೆ ಮಾಡಬೇಕು. ಆತ್ಮವಿಶ್ವಾಸ ಹಾಗೂ ಪ್ರಾಮಾಣಿಕವಾಗಿ ನಡೆದುಕೊಂಡು ಮನುಷ್ಯ ಜೀವನ ಸಾರ್ಥಕಗೊಳಿಸಬೇಕು. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗುವಂತೆ ಮಾಡಬೇಕು ಎಂದು ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆನ್ನುವುದು ವೀರೇಂದ್ರ ಹೆಗ್ಗಡೆ ಅವರ ಚಿಂತನೆಯಾಗಿದೆ. ಇದಕ್ಕಾಗಿ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದ್ದಾರೆ. ಅವರ ಅಭಿವೃದ್ಧಿ ಪರ ಚಿಂತನೆ, ಯೋಜನೆಗಳು ಸಾಕಾರಗೊಳ್ಳಲು ಪ್ರತಿಯೊಬ್ಬರ ಸಹಕಾರವೂ ಅಗತ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts