More

    ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹುದ್ದೆ ತ್ಯಜಿಸಲು ಸಿದ್ಧ

    ಕೋಲಾರ: ರಾಜಕಾರಣ ಮಾಡಲು ನಾನು ಎಂಎಲ್‌ಸಿ ಆಗಿಲ್ಲ, ನನಗೆ ರಾಜಕೀಯಕ್ಕಿಂತ ಜಿಲ್ಲೆಯ ಅಭಿವೃದ್ಧಿ ಮುಖ್ಯ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹುದ್ದೆ ತ್ಯಜಿಸಲು ಸಿದ್ಧ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ಸ್ಪಷ್ಟಪಡಿಸಿದರು.

    ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ಸೋಮವಾರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಮೊದಲಿನಿಂದಲೂ ನನ್ನದೇ ಸಿದ್ಧಾಂತ ಇಟ್ಟುಕೊಂಡು ಬದುಕುತ್ತಿದ್ದೇನೆ. ಎಳನೀರು, ಕಾಫಿ-ಟಿ ಹಾಗೂ ಕೋಳಿ ವ್ಯಾಪಾರ ಮಾಡಿ ಕಷ್ಟದಿಂದ ಮೇಲೆ ಬಂದಿರುವೆ, ನಮ್ಮ ಅಪ್ಪನ ಬಳಿ ಕೇವಲ 10ರಿಂದ 20 ಸಾವಿರ ರೂ. ಇದ್ದಿದ್ದರೆ ಐಎಎಸ್ ಅಧಿಕಾರಿಯಾಗುತ್ತಿದ್ದೆ ಎಂದು ಕಷ್ಟದ ದಿನಗಳನ್ನು ಮೆಲುಕು ಹಾಕಿದರು.

    ರಾಜಕೀಯ ಮುಖಂಡರು ಎಂಎಲ್‌ಎ-ಎಂಎಲ್‌ಸಿ ಸ್ಥಾನಕ್ಕೆ ಯಾಕೆ ಇಷ್ಟೊಂದು ಕಷ್ಟ ಪಡುತ್ತಾರೆ ಅನ್ನೋದು ನನಗೆ ಇಂದಿಗೂ ಅರ್ಥವಾಗುತ್ತಿಲ್ಲ, ಜನಪರ ಕೆಲಸ ಮಾಡಲು ಹೃದಯ ಚೆನ್ನಾಗಿರಬೇಕು, ಚಿಂತನೆಗಳು ಅಭಿವೃದ್ಧಿ ಪಥದತ್ತ ಇರಬೇಕು. ನಾನು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೆ ರಾಜಕಾರಣ ಮಾಡುವುದಿಲ್ಲ ಎಂದರು.

    ಜಿಲ್ಲೆಯ ಜನರು ಸ್ವಾಭಿಮಾನಿಗಳು, ಕಷ್ಟದ ದಿನದಲ್ಲೂ ಯಾರ ಮುಂದೆ ಹೋಗಿ ಕೈ ಚಾಚುವುದಿಲ್ಲ, ಎಲ್ಲೂ ವಲಸೆ ಹೋಗಿಲ್ಲ, ಏನೇ ಸಮಸ್ಯೆ ಬಂದರೂ ಧೈರ್ಯವಾಗಿ ಎದುರಿಸಿ ಬದುಕಿಗಾಗಿ ಹೋರಾಟ ಮಾಡುತ್ತಿದ್ದಾರೆ, ನನ್ನ ಜಿಲ್ಲೆಯ ಜನತೆಗೆ ಕೈಲಾದಷ್ಟು ಒಳ್ಳೆಯದ್ದನ್ನು ಮಾಡುವೆ ಎಂದರು.

    ಇಡೀ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಬಲಶಾಲಿಯಾಗಿದೆ. ನಮ್ಮಲ್ಲಿನ ಸಣ್ಣಪುಟ್ಟ ಗೊಂದಲ ನಿವಾರಿಸಿಕೊಂಡು ಹೋಗಿ ಸಂಘಟನೆಗೆ ಒತ್ತು ನೀಡಿದಾಗ ಎಲ್ಲ ಕ್ಷೇತ್ರಗಳಲ್ಲಿ ಮತ್ತಷ್ಟು ಅವಕಾಶ ಪಡೆಯಬಹುದು. ಕೋಲಾರ ನಗರದಲ್ಲಿ ಒಕ್ಕಲಿಗರ ಸಂಘಕ್ಕೆ ಸೇರಿದ ಜಾಗವಿದ್ದು ಅದರಲ್ಲಿ ಕಾಂಪ್ಲೆಕ್ಸ್ ಮಾಡಿ ಅದರಲ್ಲಿ ಬರುವ ಆದಾಯದಲ್ಲಿ ನಮ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡಬೇಕು ಎಂದರು.

    ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ ಮಾತನಾಡಿ, ಗೋವಿಂದರಾಜು ಸಕ್ರಿಯ ರಾಜಕಾರಣಿ ಅಲ್ಲ, ಅನೇಕ ರಾಜಕೀಯ ವ್ಯಕಿಗಳಿಗೆ ಸಹಾಯ ಮಾಡಿದ್ದಾರೆ, ಜನರ ಮಧ್ಯೆ ಇರುವ ವ್ಯಕ್ತಿ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ ಎಂದರು.

    ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿಸಪ್ಪಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಜಿಲ್ಲಾ ಘಟಕದ ನಿರ್ದೇಶಕರಾದ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ, ಪವನ್ ನಾರಾಯಣಸ್ವಾಮಿ, ಡಿ. ಕೃಷ್ಣಪ್ಪ. ಡಾ: ವೆಂಕಟಾಚಲ, ಬಿ.ಬೈಚಪ್ಪ, ಆ.ಮು ಲಕ್ಷ್ಮೀನಾರಾಯಣ್, ವಿಜಯಶಂಕರ್, ಹೊದಲವಾಡಿ ವೆಂಕಟೇಶಪ್ಪ, ವೀರ ವೆಂಕಟಪ್ಪ, ರಾಮಚಂದ್ರಪ್ಪ, ಡಿ. ವೆಂಕಟರಾಮೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬುಮೌನಿ, ಸಿಎಂಆರ್. ಶ್ರೀನಾಥ್, ಸಿ.ಆರ್. ಅಶೋಕ್, ಗೋಪಾಲರೆಡ್ಡಿ, ಯಲವಾರ ಸತೀಶ್, ಜಿಲ್ಲಾ ಒಕ್ಕಲಿಗರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೈಚಪ್ಪ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts