More

    ಸ್ಮಾರ್ಟ್‌ಸಿಟಿ ಬೆಳಗಾವಿಯಲ್ಲೇ ಕುಗ್ರಾಮ!

    ಬೆಳಗಾವಿ: ಸ್ಮಾರ್ಟ್‌ಸಿಟಿ, ರಾಜ್ಯದ 2ನೇ ರಾಜಧಾನಿ ಎಂದು ಬೀಗುತ್ತಿರುವ ಬೆಳಗಾವಿ ನಗರದ ಮಧ್ಯೆಯೇ ಕುಗ್ರಾಮಕ್ಕಿಂತಲೂ ಕಡೆಯಾದ ಪ್ರದೇಶವೊಂದಿದೆ. ಇಲ್ಲಿ ವಾಸಿಸುವ ಜನರಿಗೆ ಬಯಲು ಶೌಚಗೃಹವೇ ಗತಿ. ಕುಡಿಯಲು ಟ್ಯಾಂಕರ್ ನೀರೇ ಅನಿವಾರ್ಯ. ಮಕ್ಕಳಿಗೆ ಅಂಗನವಾಡಿ, ಶಾಲೆಗಳು ಎಂದರೆ ಗೊತ್ತೇ ಇಲ್ಲ. ಪಡಿತರ ಆಹಾರ ಧಾನ್ಯಗಳಿಗಾಗಿ 2 ಕಿ.ಮೀ. ನಡೆದುಕೊಂಡು ಹೋಗಬೇಕು. ವಿದ್ಯುತ್ ಸೌಲಭ್ಯ ಇಲ್ಲದ್ದರಿಂದ ಕಗ್ಗತ್ತಿನಲ್ಲಿಯೇ ವಾಸ.

    ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್-2ರಲ್ಲಿನ ಉದ್ಯಮಬಾಗ್‌ದಲ್ಲಿರುವ ವಾಲ್ಮೀಕಿ ನಗರ (ಸ್ಲಂ ಪ್ರದೇಶ)ದ ದುಸ್ಥಿತಿ ಇದು. ಸ್ವಾತಂತ್ರೃ ಬಂದು ಏಳು ದಶಕ ಕಳೆದರೂ ವಾಲ್ಮೀಕಿ ನಗರದ ಜನರಿಗೆ ಕನಿಷ್ಠ ಸೌಲಭ್ಯವೂ ಇಲ್ಲದೆ ಕುಗ್ರಾಮಕ್ಕಿಂತಲೂ ಕಡೆಯಾದ ಈ ಪ್ರದೇಶದಲ್ಲಿ ಜನರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶದ ಸುತ್ತಮುತ್ತ ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ದಿನದ 24 ಗಂಟೆ ಕುಡಿಯುವ ನೀರು, ವಿದ್ಯುತ್, ಸಾರಿಗೆ, ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ಸ್ಲಂ ಪ್ರದೇಶಕ್ಕೆ ಮಾತ್ರ ಯಾವುದೇ ಸೌಲಭ್ಯಗಳು ಇಲ್ಲ.

    1980ರಿಂದಲೇ ಸ್ಲಂ ಪ್ರದೇಶದಲ್ಲಿ 85ಕ್ಕೂ ಅಧಿಕ ಕುಟುಂಬಗಳ 350ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಇವರೆಲ್ಲರೂ ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಕೊಪ್ಪಳ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದ ಉದ್ಯೋಗ ಹುಡುಕಿಕೊಂಡು ಬಂದು ಇಲ್ಲಿಯೇ ವಾಸಿಸುತ್ತಿದ್ದಾರೆ. ಮಹಾನಗರ ಪಾಲಿಕೆಯು ಈ ಪ್ರದೇಶದ ವಿಳಾಸದಲ್ಲೇ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾನ ಚೀಟಿ ನೀಡಿದೆ. ಆದರೆ, ಸೌಲಭ್ಯ ಮಾತ್ರ ಮರೀಚಿಕೆಯಾಗಿವೆ.

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ ಇಲ್ಲಿನ ಜನರಿಗೆ ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲ. ವಾರಕ್ಕೆ ಒಂದು ಬಾರಿ 1000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ಮೂಲಕ ಕುಡಿಯುವ ನೀರು ಬರುತ್ತದೆ. ಅದು ಕೆಲವರಿಗೆ ಸಿಗುತ್ತದೆ. ಇನ್ನೂ ಕೆಲವರಿಗೆ ಸಿಗುವುದಿಲ್ಲ. ಕುಡಿಯವ ನೀರಿಗಾಗಿ 2 ಕಿ.ಮೀ. ದೂರ ಹೋಗಿ ಖಾಸಗಿ ಕೊಳವೆ ಬಾವಿ ಇಲ್ಲವೇ ಕೈಗಾರಿಕೆಗಳಲ್ಲಿನ ನೀರು ತೆಗೆದುಕೊಂಡು ಬರಬೇಕು. ಇವರಿಗಾಗಿ ಪಾಲಿಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಿಕೊಡದಿರುವುದು ದುರ್ದೈವ.

    ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಪ್ರದೇಶದಲ್ಲಿ 250ಕ್ಕೂ ಅಧಿಕ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಪುಟ್ಟ ಪುಟ್ಟ ಗುಡಿಸಲು, ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲ. ನಿತ್ಯ ಸೀಮೆ ಎಣ್ಣೆ, ಇಲ್ಲವೆ ಅಡುಗೆ ಎಣ್ಣೆ ದೀಪದ ಬೆಳಕಿನಲ್ಲಿ ಇಲ್ಲಿನ ನಿವಾಸಿಗಳು ದಿನ ಕಳೆಯುತ್ತಿದ್ದಾರೆ.

    ಮಕ್ಕಳಲ್ಲಿ ಅಪೌಷ್ಟಿಕತೆ

    ಉದ್ಯಮಬಾಗ್‌ದಲ್ಲಿರುವ ವಾಲ್ಮೀಕಿ ನಗರ (ಸ್ಲಂ ಪ್ರದೇಶ) ದಲ್ಲಿ 1ವರ್ಷದಿಂದ 6 ವರ್ಷದ ಒಳಗಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಆಹಾರ, ಆರೋಗ್ಯ ಸೌಲಭ್ಯ ಸಿಗದಿರುವ ಹಿನ್ನೆಲೆಯಲ್ಲಿ ಮಕ್ಕಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಈ ಪ್ರದೇಶಕ್ಕೆ ಯಾವುದೇ ಆಹಾರ ಧಾನ್ಯಗಳನ್ನೂ ನೀಡಿಲ್ಲ . ಅಂಗನವಾಡಿ ಕೇಂದ್ರಗಳು, ಶಾಲೆಗಳ ಸೌಲಭ್ಯ ಇಲ್ಲದಿರುವ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

    ಖಾಲಿ ಪ್ರದೇಶವೇ ಶೌಚಗೃಹ

    ಉದ್ಯಮಬಾಗ್‌ದಲ್ಲಿರುವ ವಾಲ್ಮೀಕಿ ನಗರ (ಸ್ಲಂ ಪ್ರದೇಶ) ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಶೌಚಗೃಹಗಳ ಸೌಲಭ್ಯಗಳು ಇಲ್ಲ.ವಾಸಿಸುವ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಖಾಲಿ ಪ್ರದೇಶವೇ ಶೌಚಗೃಹವಾಗಿದೆ. ಮಹಿಳೆಯರು ರಾತ್ರಿ ವೇಳೆಯೇ ಶೌಚಕ್ಕೆ ಹೋಗುವಂತಾಗಿದೆ. ಇಂಥ ಸಂದರ್ಭದಲ್ಲಿ ಹಾವು ಕಚ್ಚಿ ಮಕ್ಕಳು ಮೃತಪಟ್ಟ ಉದಾಹರಣೆಗಳೂ ಇವೆ. ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು, ಜಿಲ್ಲಾ ಉಸ್ತುವಾರು ಸಚಿವರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ನಿವಾಸಿ ಕಮಲವ್ವ ಬಾಳಪ್ಪ ನಾಯಕ, ಬಾಳಪ್ಪ ನಾಯಕ, ಬಾಳಪ್ಪ ಬಸಲಿಂಗಪ್ಪ ಕಾಳೆ ದೂರಿದ್ದಾರೆ.

    ಉದ್ಯಮಬಾಗ್‌ದಲ್ಲಿರುವ ವಾಲ್ಮೀಕಿ ನಗರಕ್ಕೆ ಕುಡಿಯುವ ನೀರು, ಶೌಚಗೃಹ, ವಿದ್ಯುತ್ ಸಂಪರ್ಕ ಸೇರಿ ಮೂಲ ಸೌಕರ್ಯ ಕಲ್ಪಿಸುವ ಕುರಿತು ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು.
    | ಎಂ.ಜಿ.ಹಿರೇಮಠ ಪಾಲಿಕೆ ಆಡಳಿತಾಧಿಕಾರಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts