More

    ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಜೆ.ಪಿ.ನಾರಾಯಣಸ್ವಾಮಿ

    ನಂಜನಗೂಡು: ಸಮಾಜದ ಅಶಕ್ತರು ಹಾಗೂ ಬಡವರ ಕಷ್ಟಕ್ಕೆ ಸ್ಪಂದಿಸುವ ಗುಣಹೊಂದಿದ್ದ ಉದ್ಯಮಿ ಜೆ.ಪಿ.ನಾರಾಯಣಸ್ವಾಮಿ ಭೌತಿಕವಾಗಿ ಮರೆಯಾಗಿದ್ದರೂ ಅವರ ಹೆಸರಿನಲ್ಲಿ ಈಗಲೂ ನಡೆಸಲಾಗುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳು ಸಂಕಷ್ಠದಲ್ಲಿರುವ ಜನರಿಗೆ ಆಸರೆಯಾಗುತ್ತಿದೆ ಎಂದು ಜೆಪಿಎನ್ ಪ್ರತಿಷ್ಠಾನ ಸಮಿತಿ ಸಂಚಾಲಕ ಎನ್.ಟಿ.ಗಿರೀಶ್ ಹೇಳಿದರು.


    ನಗರದ ಖಾಸಗಿ ಬಸ್ ನಿಲ್ದಾಣ ಬಳಿ ಗುರುವಾರ ಜೆಪಿಎನ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜೆ.ಪಿ.ನಾರಾಯಣಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.


    ಆತ್ಮವಿಶ್ವಾಸ, ಪರಿಶ್ರಮ ಹಾಗೂ ಸ್ನೇಹಪರ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಜೆ.ಪಿ.ನಾರಾಯಣಸ್ವಾಮಿ ತಮ್ಮ 66ನೇ ವಯಸ್ಸಿನಲ್ಲಿ ಅನಾರೋಗ್ಯದಿಂದಾಗಿ ಅಕಾಲಿಕವಾಗಿ ನಿಧನರಾದರು. ಅವರ ಕನಸುಗಳನ್ನು ನನಸು ಮಾಡಲು ಜೆಪಿಎನ್ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತಂದು ರಾಜ್ಯದಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕೋಟ್ಯಂತರ ರೂ.ಗಳ ನೆರವನ್ನು ನೀಡುತ್ತಿರುವುದು ಸಮಾಜದ ಅಶಕ್ತರಿಗೆ ನೆರವಾಗಿದೆ ಎಂದು ಹೇಳಿದರು.


    ತಾಲೂಕು ಈಡಿಗರ ಸಂಘದ ಉಪಾಧ್ಯಕ್ಷ ಜಿ.ಕೆ.ಮಂಜುನಾಥ್ ಮಾತನಾಡಿ, ಜೆ.ಪಿ.ನಾರಾಯಣಸ್ವಾಮಿ ತಮ್ಮ ಸ್ವಂತ ಪರಿಶ್ರಮದ ಮೂಲಕ ಬೃಹತ್ ಉದ್ಯಮವನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದರಲ್ಲದೆ ತಮ್ಮ ಜೀವಿತಾವಧಿಯ ಉದ್ದಕ್ಕೂ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಆಶಯಕ್ಕೆ ಪೂರಕವಾಗಿ ಜೆಪಿಎನ್ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದ್ದು ಕಡುಬಡತನದಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಂಗವಿಕಲರು, ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ನೆರವು, ಪರಿಸರ ಸಂರಕ್ಷಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.


    ನಟ ಪುನೀತ್ ರಾಜಕುಮಾರ್ ಪುಣ್ಯಸ್ಮರಣೆ ಸಂದರ್ಭ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದ ನೇತ್ರದಾನಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಜೆಪಿಎನ್ ಪ್ರತಿಷ್ಠಾನದ ಮುಖ್ಯ ಸಂಚಾಲಕ ಹುಲ್ಲಹಳ್ಳಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಸಿಂಧುವಳ್ಳಿ ಕೃಷ್ಣಕುಮಾರ್, ಈಡಿಗರ ಸಂಘದ ಖಜಾಂಚಿ ನಾರಾಯಣ್, ಹುರಾ ಕೃಷ್ಣಪ್ಪಗೌಡ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts