More

    ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ?

    ಕಾರವಾರ: ಗೊಂದಲ ನಿವಾರಣೆಯಾಗುವವರೆಗೆ ಜಿಲ್ಲೆಯ ನೋಂದಣಿಯ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್ ಫೀ ಆಕರಣೆ ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಐಆರ್​ಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಐಆರ್​ಬಿ ಅಧಿಕಾರಿಗಳು ಅದಕ್ಕೆ ಒಪ್ಪಿಕೊಂಡಿದ್ದು, ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ರಾಜ್ಯಗಳ ವಾಹನಗಳಿಗೆ ಟೋಲ್ ಶುಲ್ಕ ವಸೂಲಿಯನ್ನು ಶೀಘ್ರದಲ್ಲೇ ಪ್ರಾರಂಭಿಸುವ ಸಾಧ್ಯತೆ ಇದೆ.

    ಫೆ.9 ರಿಂದ ಐಆರ್​ಬಿ ಜಿಲ್ಲೆಯ ಮೂರು ಕಡೆ ಟೋಲ್ ಶುಲ್ಕ ವಸೂಲಿ ಪ್ರಾರಂಭಿಸುವುದಾಗಿ ಪ್ರಕಟಣೆ ನೀಡಿತ್ತು. ಅದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರಾವಳಿಯ ಶಾಸಕರೂ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಶನಿವಾರ ಬನವಾಸಿಗೆ ಐಆರ್​ಬಿ ಅಧಿಕಾರಿಗಳನ್ನು ಕರೆಸಿ ಅನೌಪಚಾರಿಕ ಸಭೆ ನಡೆಸಿದ್ದಾರೆ.

    ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್​ಎಚ್​ಎಐ) ಹಾಗೂ ಐಆರ್​ಬಿ ಕಂಪನಿ ನಡುವೆ ಒಪ್ಪಂದವಾದ ಹಿನ್ನೆಲೆಯಲ್ಲಿ ಟೋಲ್ ಪ್ರಾರಂಭಿಸಬೇಡಿ ಎಂದು ಹೇಳುವ ಅಧಿಕಾರ ನಮಗಿಲ್ಲ. ಆದರೆ, ಜಿಲ್ಲೆಯಲ್ಲಿ ಶೇ. 75 ರಷ್ಟು ಚತುಷ್ಪಥ ಕಾಮಗಾರಿ ಮುಗಿದಿಲ್ಲ ಎಂಬ ದೂರಿದೆ. ಸ್ಥಳೀಯ ವಾಹನಗಳಿಗೆ ಶುಲ್ಕ ಪಡೆಯಬಾರದು ಎಂಬ ಬೇಡಿಕೆ ಇದೆ. ಅಲ್ಲದೆ, ಪ್ರತಿ ದಿನ ನಾಲ್ಕಾರು ಬಾರಿ ಓಡಾಡುವ ಒಂದು ವಾಹನಕ್ಕೆ ಎಲ್ಲ ಬಾರಿಯೂ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂಬ ಆತಂಕ ಪ್ರಯಾಣಿಕರಲ್ಲಿದೆ. ಈ ಕುರಿತು ಸ್ಪಷ್ಟಪಡಿಸಬೇಕು. ಆ ನಂತರವಷ್ಟೇ ಜಿಲ್ಲೆಯಲ್ಲಿ ನೋಂದಣಿಯಾದ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸಿ ಎಂದು ಸೂಚಿಸಿದರು ಎನ್ನಲಾಗಿದೆ.

    ಸಭೆಯಲ್ಲಿ ಸಚಿವ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹಾಗೂ ಐಆರ್​ಬಿ ಅಧಿಕಾರಿಗಳು ಇದ್ದರು.

    ಸ್ಥಳೀಯರಲ್ಲಿ ಗೊಂದಲ ನಿವಾರಣೆಯಾಗುವವರೆಗೆ ಜಿಲ್ಲೆಯ ನೋಂದಣಿಯ ವಾಹನಗಳಿಗೆ ಶುಲ್ಕ ಆಕರಿಸದಂತೆ ಉಸ್ತುವಾರಿ ಸಚಿವರು ಐಆರ್​ಬಿ ಕಂಪನಿಗೆ ಸೂಚಿಸಿದ್ದು, ಅದಕ್ಕೆ ಕಂಪನಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಐಆರ್​ಬಿ ಮತ್ತು ಎನ್​ಎಚ್​ಎಐ ನಡುವೆ ಆದ ಒಪ್ಪಂದದಂತೆ ಒಟ್ಟಾರೆ ಗುತ್ತಿಗೆಯ ಶೇ. 75 ರಷ್ಟು ಕಾಮಗಾರಿ ಮುಕ್ತಾಯವಾಗಿರುವ ಬಗ್ಗೆ ಏಕಾಂ ಎಂಬ ಮೂರನೇ ಏಜೆನ್ಸಿ ಖಚಿತ ಮಾಡಿದೆ. ಇದರಿಂದ ಟೋಲ್ ಪ್ರಾರಂಭಿಸಲು ಕಾನೂನಿನಲ್ಲಿ ಅವಕಾಶವಿದೆ. ಗಲಾಟೆಗಳು ಉಂಟಾಗದಂತೆ ತಡೆಯಲು ಐಆರ್​ಬಿ ಪೊಲೀಸ್ ರಕ್ಷಣೆ ಕೇಳಿತ್ತು. ಅದನ್ನು ನೀಡಲು ಎಸ್​ಪಿ ಶಿವಪ್ರಕಾಶ ಅವರಿಗೆ ಸೂಚಿಸಿದ್ದೇನೆ. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ

    ಹೆದ್ದಾರಿಯಲ್ಲಿ ಟೋಲ್ ಶುಲ್ಕ ವಸೂಲಿ ಸಂಬಂಧ ಸಿಎಂ ಆಗಲಿ ನಾನಾಗಲಿ ಸಭೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಭೆ ಮಾಡಿದ್ದಾರೆ. ಅವರೇ ಅದನ್ನು ನೋಡಿಕೊಳ್ಳುತ್ತಾರೆ. | ಶಿವರಾಮ ಹೆಬ್ಬಾರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts