More

    ಸ್ಥಳೀಯ ಬೆಳ್ಳುಳ್ಳಿಗೆ ಭಾರಿ ಡಿಮಾಂಡ್

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಈ ಬಾರಿ ಸ್ಥಳೀಯ ಬೆಳ್ಳುಳ್ಳಿಗೆ ಭಾರಿ ಡಿಮಾಂಡ್ ಬಂದಿದೆ. ನಗರದ ಎಪಿಎಂಸಿ ಮಾರುಕಟ್ಟೆಗೆ 1200ಕ್ಕೂ ಅಧಿಕ ಚೀಲದಷ್ಟು ಆವಕವಾಗುತ್ತಿದ್ದು, ಭರ್ಜರಿ ವ್ಯಾಪಾರ-ವಹಿವಾಟು ನಡೆಯುತ್ತಿದೆ.

    ಎಪಿಎಂಸಿಯಲ್ಲಿ ಪ್ರತಿ ಭಾನುವಾರ ಹಾಗೂ ಗುರುವಾರ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತದೆ. ದಪ್ಪ ಬೆಳ್ಳುಳ್ಳಿ ಒಂದು ಕ್ವಿಂಟಾಲ್​ಗೆ 14 ಸಾವಿರದಿಂದ 16 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದೆ. ಸಣ್ಣ ಬೆಳ್ಳುಳ್ಳಿಗೆ 9 ಸಾವಿರದಿಂದ 11 ಸಾವಿರ ರೂ. ವರೆಗೆ ಬೆಲೆಯಿದೆ.

    ಕಳೆದ ವಾರ ಒಂದು ಕ್ವಿಂಟಾಲ್ ದಪ್ಪ ಬೆಳ್ಳುಳ್ಳಿ 12 ಸಾವಿರದಿಂದ 14 ಸಾವಿರ ರೂ.ವರೆಗೆ ಮಾರಾಟವಾಗಿತ್ತು. ಆದರೀಗ ಬೆಳ್ಳುಳ್ಳಿ ಖರೀದಿಸಲು ದೂರದ ಬಳ್ಳಾರಿ, ಶಿವಮೊಗ್ಗ, ಕೊಪ್ಪಳ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ ಜಿಲ್ಲೆಗಳಿಂದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಕ್ವಿಂಟಾಲ್​ಗೆ 2 ಸಾವಿರ ರೂ. ಹೆಚ್ಚಳವಾಗಿದೆ ಎಂದು ರೈತರು ಹೇಳುತ್ತಾರೆ.

    ಸಂಗ್ರಹಿಸಿಟ್ಟ ರೈತರಿಗೆ ವರದಾನ: ಈ ಬಾರಿ ಸತತ ಮಳೆಯಿಂದಾಗಿ ಬೆಳೆ ನೀರು ಪಾಲಾದ ಕಾರಣ ಬೆಳ್ಳುಳ್ಳಿ ಕೊರತೆಯಿದೆ. ಹೀಗಾಗಿ, ಬೇಡಿಕೆ ಹೆಚ್ಚಾಗಿದೆ. ಬೇರೆ ಬೇರೆ ಜಿಲ್ಲೆಯಲ್ಲೂ ಮಳೆ ಹೆಚ್ಚು ಸುರಿದ ಪರಿಣಾಮ ಅಲ್ಲಿಯ ರೈತರ ಬಳಿಯೂ ಬೆಳ್ಳುಳ್ಳಿ ಸಿಗುತ್ತಿಲ್ಲ. ಆದರೆ, ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ ಹಾಗೂ ಗುತ್ತಲ ಭಾಗದ ರೈತರು ಮಳೆಯಿಂದ ಬೆಳ್ಳುಳ್ಳಿ ಬೆಳೆಯನ್ನು ರಕ್ಷಿಸಿ ಗೋದಾಮು, ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಈ ರೈತರು ಸದ್ಯ ಮಾರುಕಟ್ಟೆಗೆ ಬೆಳ್ಳುಳ್ಳಿ ತರುತ್ತಿದ್ದಾರೆ. ಬೆಳ್ಳುಳ್ಳಿ ಸಂಪೂರ್ಣ ಒಣಗಿರುವ ಹಿನ್ನೆಲೆಯಲ್ಲಿ 16 ಸಾವಿರ ರೂ.ವರೆಗೆ ಬೆಲೆ ಕೊಟ್ಟು ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ. ಇದು ಬೆಳ್ಳುಳ್ಳಿ ಸಂಗ್ರಹಿಸಿಟ್ಟುಕೊಂಡ ರೈತರಿಗೆ ವರದಾನವಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

    ಸಂಚಾರಕ್ಕೆ ತೀವ್ರ ತೊಂದರೆ: ನಗರದ ಪಿ.ಬಿ. ರಸ್ತೆ ಬದಿಯಿರುವ ಎಪಿಎಂಸಿ ಬೆಳ್ಳುಳ್ಳಿ, ಉಳ್ಳಾಗಡ್ಡಿ ಹಾಗೂ ತರಕಾರಿ ಹರಾಜು ಮಾರುಕಟ್ಟೆಗೆ ದೊಡ್ಡಪೇಟೆ, ಮೇಡ್ಲೇರಿ ರಸ್ತೆ, ನೆಹರು ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಚಿಲ್ಲರೆ ವ್ಯಾಪಾರಸ್ಥರು ಖರೀದಿಗಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯ ಎರಡೂ ಬದಿಯಲ್ಲಿ ಬೈಕ್, ಆಟೋಗಳನ್ನು ಪಾರ್ಕ್ ಮಾಡುತ್ತಿರುವ ಕಾರಣ ಲಾರಿ, ಟ್ರ್ಯಾಕ್ಟರ್, ಟಂಟಂ ಹಾಗೂ ಗೂಡ್ಸ್ ವಾಹನಗಳು ಒಳಗಡೆ ಹೋಗಲಾಗದೆ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸಂಚಾರ ಠಾಣೆ ಪೊಲೀಸರು ಭಾನುವಾರ, ಗುರುವಾರ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯವಾಗಿದೆ.

    ದೀಪಾವಳಿ ಹಬ್ಬದ ಸಮಯದಲ್ಲಿ ಬೆಳ್ಳುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತದೆ. ರೈತರಿಗೆ ಈ ಸಮಯದಲ್ಲಿ ಬೆಲೆಯೂ ಉತ್ತಮವಾಗಿ ದೊರೆಯುತ್ತದೆ. ಸಂಚಾರ ಸಮಸ್ಯೆ ಕುರಿತು ಸಂಚಾರ ಠಾಣೆ ಪೊಲೀಸರ ಗಮನಕ್ಕೆ ತಂದು ಸರಿಪಡಿಸಲಾಗುವುದು.

    | ಪರಮೇಶ ನಾಯ್ಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ನಿರಂತರ ಮಳೆ ನಡುವೆಯೂ ಬೆಳ್ಳುಳ್ಳಿ ಬೆಳೆಯನ್ನು ಸಂರಕ್ಷಿಸಿಟ್ಟಿದ್ದೇವು. 2019ರಲ್ಲಿ 1 ಕ್ವಿಂಟಾಲ್​ಗೆ 24 ಸಾವಿರ ರೂ.ವರೆಗೂ ಬೆಲೆ ಬಂದಿತ್ತು. ಈ ಬೆಲೆಗೆ ಹೋಲಿಸಿದರೆ, ಈಗಿರುವ ಬೆಲೆ ಕಡಿಮೆ. ಆದರೆ, ಸದ್ಯ 16 ಸಾವಿರ ರೂ. ಉತ್ತಮ ಬೆಲೆ ಎಂದುಕೊಂಡು ಮಾರಾಟ ಮಾಡುತ್ತಿದ್ದೇವೆ. 2019ರ ಬೆಲೆ ಮತ್ತೆ ಬಂದರೆ ಬೆಳ್ಳುಳ್ಳಿ ಬೆಳೆಗಾರರಿಗೆ ಇನ್ನೂ ಅನುಕೂಲವಾಗಲಿದೆ.

    | ಕೊಟ್ರಪ್ಪ ಊರ್ವಿು, ಬೆಳ್ಳುಳ್ಳಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts