More

    ಸೌಹಾರ್ದತೆ ಮಾತುಗಳು ವೇದಿಕೆಗೆ ಸೀಮಿತ ಆಗಬಾರದು; ಎಲ್ಲ ಧರ್ಮಕ್ಕಿಂತ ಮಾನವ ಧರ್ಮಶ್ರೇಷ್ಠ: ಫಾದರ್ ವೀರೇಶ್ ವಿ.ಮೋರಾಸ್

    ರಿಪ್ಪನ್‌ಪೇಟೆ: ದೈವಸೃಷ್ಟಿ ಸಮಾಜದಲ್ಲಿ ಸರ್ವರಲ್ಲಿಯೂ ಸೌಹಾರ್ದತೆ ಇರಬೇಕೆಂಬ ಮಾತುಗಳು ಕೆಲವೊಮ್ಮೆ ವೇದಿಕೆಗೆ ಮಾತ್ರ ಸೀಮಿತವಾಗುತ್ತಿವೆ ಎಂದು ಶಿವಮೊಗ್ಗ ಗುಡ್‌ಶಫರ್ಡ್ ಧರ್ಮಕೇಂದ್ರದ ಫಾದರ್ ವೀರೇಶ್ ವಿ.ಮೋರಾಸ್ ಹೇಳಿದರು.
    ಪಟ್ಟಣದ ಮೊಹಿಯುದ್ದೀನ್ ಜುಮ್ಮಾ, ಮಕ್ಕಾ ಜುಮ್ಮಾ ಮಸ್ಜೀದ್ ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಲಾದ ಇಲಲ್ ಅಭೀಬ್ ಮಿಲಾದ್ ಕಾನ್ಫರೆನ್ಸ್‌ನ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ವ್ಯಾಪಿಸಿದ್ದ ಸಂಕಷ್ಟದ ಕಾಲ ನಮಗೆ ಹಲವು ಪಾಠಗಳನ್ನು ಹೇಳಿದೆ. ಮಂದಿರ, ಮಸೀದಿ, ಚರ್ಚ್‌ಗಳ ಬಾಗಿಲು ಹಾಕಿದ್ದವು. ಮನುಷ್ಯತ್ವವನ್ನು ಮರೆತು ಪರಸ್ಪರ ಕಚ್ಚಾಡಿಕಟ್ಟಿದ ಪ್ರಾರ್ಥನಾ ಆರಾಧನಾ ಶ್ರದ್ಧಾ ಕೇಂದ್ರಗಳಲ್ಲಿ ನಮಗೆ ಪ್ರವೇಶವಿಲ್ಲವಾಯಿತು. ಪವಿತ್ರ ಧರ್ಮಗ್ರಂಥಗಳಲ್ಲಿ ನಮ್ಮ ಕೈಗಳು ಸ್ಪರ್ಶಿಸದಂತೆ ನಿರ್ಬಂಧವಾಗಿತ್ತು. ಆಗ ಜನರ ಅರಿವಿಗೆ ಮತ್ತೊಮ್ಮೆ ಬಂದಿರುವುದೇ ಎಲ್ಲ ಧರ್ಮಕ್ಕಿಂತ ಮಾನವ ಧರ್ಮಶ್ರೇಷ್ಠ ಎಂಬುದ ಎಂದರು.
    ಸಮಾಜಕ್ಕೆ ಕೆಡಕನ್ನು ಬಯಸದ ಧರ್ಮಗಳಲ್ಲಿ ನಾನೇ ಶ್ರೇಷ್ಠ ಎಂಬ ಭಾವ ಬಿತ್ತಿದವರಾರು. ಧರ್ಮದಲ್ಲಿಲ್ಲದ ಆಚರಣೆ ಯಾಕೆ ಬೇಕು ಬುದ್ಧಿಜೀವಿಗಳಾದ ನಾವು ಹುಟ್ಟಿದ ಧರ್ಮದ ಬಗ್ಗೆ ಆಳವಾಗಿ ತಿಳಿಯುವುದು, ಇತರರ ಧರ್ಮವನ್ನು ಪ್ರೀತಿಸಿ ಅದರ ಸಾರವನ್ನು ತಿಳಿಯಲು ಆಸಕ್ತಿ ವಹಿಸುವುದು, ಧಾರ್ಮಿಕ ಆಚರಣೆಗಳ ಬಗ್ಗೆ ಹಾಗೂ ಅವುಗಳ ಹಿನ್ನೆಲೆಯನ್ನು ಅರಿಯುವುದು. ಸರ್ವರೊಂದಿಗೆ ನಿತ್ಯ ಜೀವನ ಕ್ರಮ ಸುಧಾರಣೆ, ದೈನಂದಿನ ಕ್ರಿಯೆಗಳಲ್ಲಿ ನಮ್ಮ ಪಾತ್ರವನ್ನು ಪ್ರಚುರಪಡಿಸಿದಾಗ ಯಾವುದೇ ಧರ್ಮದಲ್ಲಿ ನಮಗೆ ಅಸಮಾನತೆ ಕಾಣುವುದಿಲ್ಲ. ಮನುಷ್ಯರ ಮಧ್ಯೆ ಗೋಡೆಗಳನ್ನು ಎಬ್ಬಿಸುವ ಪಾಠ ಮಕ್ಕಳಿಗೆ ಮನೆಯಲ್ಲಿ ಹೇಳದೆ ಇದ್ದರೆ ಸಮಾಜದಲ್ಲಿ ಸೌಹಾರ್ದತೆ ಸಾಧ್ಯ. ಪ್ರಸ್ತುತ ಕಾಲಘಟ್ಟಕ್ಕೆ ಇದು ಅನಿವಾರ್ಯವೂ ಆಗಿದೆ ಎಂದು ಪ್ರತಿಪಾದಿಸಿದರು.
    ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ ಯಾವುದೇ ಧರ್ಮದಲ್ಲಿ ಹಿಂಸೆಗೆ ಪ್ರಚೋದನೆ ಹೇಳಲಾಗಿಲ್ಲ. ಹಾಗಾದರೆ ಧರ್ಮಗಳ ಮಧ್ಯೆ ಜಗಳ ಸೃಷ್ಟಿದವರ‌್ಯಾರು? ಒಬ್ಬರ ಮುಖ ಇನ್ನೊಬ್ಬರು ನೋಡದಂತೆ ಸಮಸ್ಯೆ ಸೃಷ್ಟಿಸಿದವರ‌್ಯಾರು? ಸ್ವಹಿತಾಸಕ್ತಿಯ ಕೆಲವರು ಧರ್ಮ ಸಿದ್ಧಾಂತಗಳನ್ನು ಸರಿಯಾಗಿ ಅಧ್ಯಯನ ಮಾಡದೆ ಸಮಾಜದಲ್ಲಿ ಅಸಮಾನತೆಯನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಎಲ್ಲ ಧರ್ಮಗುರುಗಳು ಅವರ ಧರ್ಮದ ಜಾಗೃತಿ, ಇತರ ಧರ್ಮದ ಪ್ರೀತಿ ಹೇಳಿಕೊಟ್ಟರೆ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts