More

    ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ

    ಗದಗ: ಕರೊನಾ ಸೋಂಕನ್ನು ಸರ್ಕಾರದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಸಹ ಅತ್ಯಗತ್ಯವಾಗಿದೆ. ಜನರು ಸೋಂಕು ನಿಯಂತ್ರಣ ಕ್ರಮಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿನಾಕಾರಣ ಗುಂಪು ಸೇರುವುದು, ಅನಗತ್ಯ ತಿರುಗಾಟ ಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಹೆಚ್ಚುತ್ತಿರುವ ಕೋವಿಡ್ ದೃಢಪಟ್ಟ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ಸೋಂಕಿನ 2ನೇ ಅಲೆಯ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ರ್ಚಚಿಸಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಔಷಧ ಸಂಗ್ರಹ, ಪಿಪಿಇ ಕಿಟ್, ಮಾಸ್ಕ್ ಸ್ಯಾನಿಟೈಸರ್, ವೈದ್ಯಕೀಯ ಉಪಕರಣಗಳ ಲಭ್ಯತೆ ಹಾಗೂ ಸಂಗ್ರಹಣೆ ಕುರಿತು ರ್ಚಚಿಸಲಾಯಿತು ಎಂದರು.

    ರೋಣ ವಸತಿ ಶಾಲೆಯಲ್ಲಿ ಒಟ್ಟು 26 ಜನರಿಗೆ ಸೋಂಕು ದೃಢಪಟ್ಟಿದ್ದು ಎಲ್ಲರಿಗೂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ವಸತಿ ಶಾಲೆಯ ಮಕ್ಕಳನ್ನು ಪಕ್ಕದ ವಸತಿ ನಿಲಯಕ್ಕೆ ಸ್ಥಳಾಂತರ ಮಾಡಲಾಗಿದ್ದು ಪಾಲಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆಯಿಂದ ಸಿದ್ಧಪಡಿಸಲಾದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳ ಕಿಟ್ ಅನ್ನು ಸರ್ಕಾರಿ ವಸತಿ ಶಾಲೆಯ ಮಕ್ಕಳಿಗೆ ಸಚಿವರು ಸಾಂಕೇತಿಕವಾಗಿ ವಿತರಿಸಿದರು.

    ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸುಂದರೇಶಬಾಬು, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಇದ್ದರು.

    127 ಕೇಂದ್ರಗಳಲ್ಲಿ ಲಸಿಕೆ: ಜಿಲ್ಲೆಯ 57 ಕೇಂದ್ರಗಳಲ್ಲಿ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಏ. 1ರಿಂದ 127 ಹೊಸ ಕೇಂದ್ರಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಜಿಲ್ಲೆಯಾದ್ಯಂತ ಶೇ.39ರಷ್ಟು ಲಸಿಕೆ ನೀಡಿಕೆಯಾಗಿದೆ. ಲಸಿಕೆ ನೀಡಿಕೆಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ.

    ಕರೊನಾ ಲಸಿಕೆ ಕುರಿತು ಅನುಮಾನ ಬೇಡ. ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ವಿಶ್ವಾಸಾರ್ಹವಾಗಿವೆ.
    |ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಗದಗ

    ಅಗತ್ಯ ಸಿದ್ಧತೆ ಮಾಡಿಕೊಳ್ಳಿ

    ಗದಗ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ಅಬ್ಬರ ಅಷ್ಟೊಂದು ಇಲ್ಲದಿರುವುದು ಸಮಾಧಾನದ ಸಂಗತಿಯಾಗಿದೆ. ಹಾಗಂತ, ಅಧಿಕಾರಿಗಳು ನಿಷ್ಕಾಳಜಿ ತೋರದೆ 2ನೇ ಅಲೆಯ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಬಿರುಸಿನಿಂದ ಸಾಗಿದ್ದು ಕಳವಳಕಾರಿ. ಜನರು ಸರ್ಕಾರದ ಆದೇಶ, ಸೂಚನೆಗಳನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗಲುವ ಸಾಧ್ಯತೆಗಳಿದ್ದು ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪಾಲನೆಯಾಗುವಂತೆ ಕ್ರಮ ವಹಿಸಬೇಕು ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೋವಿಡ್ ಹಬ್ಬುತ್ತಿರುವ ಸ್ಥಳಗಳನ್ನು ಗುರುತಿಸಿ ತೀವ್ರಗತಿಯಲ್ಲಿ ಲಸಿಕೆ ಹಾಕುವುದು ಅಗತ್ಯವಾಗಿದೆ. ಕೋವಿಡ್ ಸೋಂಕಿನ ಪರೀಕ್ಷೆಗಾಗಿ ಗಂಟಲ ದ್ರವ ಸಂಗ್ರಹ ಹಾಗೂ ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆಗಳನ್ನು ಆಸ್ಪತ್ರೆಯ ಒಂದೇ ಕೊಠಡಿಯಲ್ಲಿ ಮಾಡುವುದು ಬೇಡ. ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

    ಜಿಲ್ಲಾಧಿಕಾರಿ ಸುಂದರೇಶ ಬಾಬು ಮಾತನಾಡಿ, ಮುಂಜಾಗ್ರತೆ ಕ್ರಮವಾಗಿ ಜಿಮ್ಸ್​ನಲ್ಲಿ 100 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 50 ಬೆಡ್​ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯವಿದ್ದರೆ ವಸತಿ ನಿಲಯಗಳನ್ನು ಕೋವಿಡ್ ಸೋಂಕಿತರ ಹಾಗೂ ಶಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಪಂ ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts