More

    ಸೋಂಕಿತ ಮಕ್ಕಳಿಗೆ ಪ್ರತ್ಯೇಕ ವಾರ್ಡ್

    ಹಾವೇರಿ: ಕೋವಿಡ್ ಬಾಧಿತ ಮಕ್ಕಳಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದವರ ಚಿಕಿತ್ಸೆಗಾಗಿ 15 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಶಂಕಿತ ಏಳು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿನ ಕುರಿತು ಲ್ಯಾಬ್​ಗೆ ಮಾದರಿ ಕಳುಹಿಸಲಾಗಿದೆ ಎಂದರು.

    ಬ್ಲ್ಯಾಕ್ ಫಂಗಸ್​ಗೆ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಅಂಫೋಟೊರಿಸೀನ್ ಔಷಧ ಪೂರೈಕೆಯಾಗಿದೆ. ಇದು ಸಂಪರ್ಕದಿಂದ ಹರಡುವ ಸೋಂಕಲ್ಲ. ಸೂಕ್ತ ಚಿಕಿತ್ಸೆಯಿಂದ ಬ್ಲ್ಯಾಕ್ ಫಂಗಸ್ ಸೋಂಕು ನಿವಾರಣೆಯಾಗಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಬೆಡ್​ಗಳ ಸಮಸ್ಯೆಯಿಲ್ಲ. ಹೆಚ್ಚುವರಿಯಾಗಿ 240ಕ್ಕೂ ಅಧಿಕ ಆಕ್ಸಿಜನ್ ಸಹಿತ ಬೆಡ್​ಗಳನ್ನು ಸಿದ್ಧಪಡಿಸಲಾಗಿದೆ. ವೆಂಟಿಲೇಟರ್ ಹಾಗೂ ಐಸಿಯು ವ್ಯವಸ್ಥೆಯ ಬೆಡ್​ಗಳ ಸಂಖ್ಯೆಯನ್ನು ಜಿಲ್ಲಾಸ್ಪತ್ರೆಯಲ್ಲಿ 53ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 22 ಬೆಡ್​ಗಳನ್ನು ಸಾರಿ ಪ್ರಕರಣಗಳಿಗೆ ಮೀಸಲಿರಿಸಲಾಗಿದೆ ಎಂದರು.

    ರಾಣೆಬೆನ್ನೂರನಲ್ಲಿ 22 ಆಕ್ಸಿಜನ್ ಬೆಡ್ ಹೆಚ್ಚಿಸಲಾಗಿದೆ. ಹಿರೇಕೆರೂರಗೆ 13 ಆಕ್ಸಿಜನ ಬೆಡ್ ಹೆಚ್ಚಿಸಲಾಗಿದೆ ಹಾಗೂ 3 ಐಸಿಯು ಸಹಿತ ಬೆಡ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಡಗಿಗೆ 17 ಬೆಡ್ ಒದಗಿಸಿ ಪ್ರತ್ಯೇಕ ಕೋವಿಡ್ ವಾರ್ಡ್ ಆರಂಭಿಸಲಾಗಿದೆ. ಬ್ಯಾಡಗಿ ಕ್ರೀಡಾಂಗಣ ಭವನದಲ್ಲಿ 10 ಬೆಡ್​ಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಲಾಗಿದೆ. ಮೋಟೆಬೆನ್ನೂರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾನಗಲ್ಲ ತಾಲೂಕಾಸ್ಪತ್ರೆಯಲ್ಲಿ 20 ಬೆಡ್​ಗಳನ್ನು ಆಕ್ಸಿಜನ್ ವ್ಯವಸ್ಥೆಯೊಂದಿಗೆ ಸಿದ್ಧಪಡಿಸಲಾಗಿದೆ. ಸವಣೂರ ಹಾಗೂ ಶಿಗ್ಗಾಂವಿ ಆಸ್ಪತ್ರೆಗೆ ತಲಾ 20 ಆಕ್ಸಿಜನ್ ಬೆಡ್​ಗಳನ್ನು ಹೆಚ್ಚಿಸಲಾಗಿದೆ. ಬಂಕಾಪುರದಲ್ಲಿ 10 ಆಕ್ಸಿಜನ್ ಬೆಡ್​ಗಳನ್ನು ಆರಂಭಿಸಿ, ಮಾರ್ಟೆಬಲ್ ಎಕ್ಸರೇ ಒದಗಿಸಲಾಗಿದೆ. 35ಕೆವಿ ಜನರೇಟರ್ ಖರೀದಿಗೆ ಆದೇಶಿಸಲಾಗಿದೆ. ಅಕ್ಕಿಆಲೂರಿಗೆ 10 ಹಾಗೂ ರಟ್ಟಿಹಳ್ಳಿಗೆ ನಾಲ್ಕು ಹೆಚ್ಚುವರಿ ಆಕ್ಸಿನ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ಜಿಲ್ಲಾ ಸರ್ವೆಕ್ಷಣಾಧಿಕಾರಿಗಳು ಬೆಡ್ ಹಂಚಿಕೆ ಕಾರ್ಯನಿರ್ವಹಿಸಲಿದ್ದಾರೆ. ತರಬೇತಿ ಪೂರ್ಣಗೊಂಡ ನಂತರ ಕೇಂದ್ರೀಕೃತ ಆಸ್ಪತ್ರೆ ಬೆಡ್ ಹಂಚಿಕೆ ವ್ಯವಸ್ಥೆ ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ಇದಕ್ಕೆ ಅಗತ್ಯವಾದ ಜಿಲ್ಲಾ ವಾರ್ ರೂಂ ಬಲಪಡಿಸಲಾಗಿದೆ. ದಿನದ 24 ತಾಸು ಕಾರ್ಯನಿರ್ವಹಿಸುವಂತೆ 40ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ವಾರ್ ರೂಂನಲ್ಲಿ 10 ಟೆಲಿಫೋನ್ ಸಂಪರ್ಕಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ ಎಂದರು. ಕೋವಿಡ್ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 600 ಪಾಕೇಟ್ ಪೌಡರನ್ನು ಅನ್ನಪೂರ್ಣ ಟ್ರಸ್ಟ್ ಹಾಗೂ ವೆಂಕೋಬಾ ಚಿಕನ್, 500 ಪಾಕೇಟ್ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ಹಾಗೂ ಸಂಗೂರ ಸಕ್ಕರೆ ಕಾರ್ಖಾನೆಯಿಂದ 500 ಕಿಟ್​ಗಳನ್ನು ನೀಡಲಾಗಿದೆ. ಇವುಗಳನ್ನು ಕೋವಿಡ್ ಸೋಂಕಿತ ಬಡ ಕುಟುಂಬಗಳಿಗೆ ಹಾಗೂ ಅಂಗವಿಕಲರಿಗೆ ನೀಡಲು ಕ್ರಮವಹಿಸಲಾಗಿದೆ ಎಂದರು.

    ಸಭೆಯಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts