More

    ಸೋಂಕಿತ ಬಾಣಂತಿ ಕೋವಿಡ್ ಆಸ್ಪತ್ರೆಗೆ ದಾಖಲು

    ಅಕ್ಕಿಆಲೂರ: ಪಟ್ಟಣದ ಬಾಣಂತಿಯೊಬ್ಬರಿಗೆ ಕರೊನಾ ಸೋಂಕು ಗುರುವಾರ ದೃಢಪಟ್ಟಿದ್ದು, ಆಕೆ ದಾಖಲಾಗಿದ್ದ ಆಸ್ಪತ್ರೆ ಹಾಗೂ ವಾಸವಿದ್ದ ಮನೆಯ ಸುತ್ತಲಿನ ಎರಡು ಓಣಿಗಳನ್ನು ಸೀಲ್​ಡೌನ್ ಮಾಡಲಾಗಿದೆ.

    ಸವಣೂರಿನ ಪತಿಯ ಮನೆಯಿಂದ ಹೆರಿಗೆಗಾಗಿ ಸೋಮವಾರ ಪಟ್ಟಣದ ಕುಂಬಾರ ಓಣಿಯ ತವರು ಮನೆಗೆ ಬಂದಿದ್ದಾಳೆ. ಮಂಗಳವಾರ ಪಟ್ಟಣದ ವಿ.ಎಂ. ರಸ್ತೆಯ ಸಾವಿತ್ರಮ್ಮ ಮಾಳೋದೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಸವಣೂರಿನಿಂದ ಬಂದ ಕಾರಣ ಕರೊನಾ ಪರೀಕ್ಷೆ ಮಾಡಲಾಗಿತ್ತು. ಬುಧವಾರ ರಾತ್ರಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಸದ್ಯ ಶಿಶುವನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಿ, ತಾಯಿಯನ್ನು ಹಾವೇರಿಯ ಕೋವಿಡ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

    ಮಾಳೋದೆ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆ, ಕುಟುಂಬಸ್ಥರು ಸೇರಿ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರಿಗೆ ಕರೊನಾ ಪರೀಕ್ಷೆ ಮಾಡಿ, ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅದೇ ಆಸ್ಪತ್ರೆಯಲ್ಲಿದ್ದ ಇನ್ನೊಬ್ಬ ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕರೊನಾ ಸೋಂಕಿತ ಬಾಣಂತಿಯನ್ನು ಜಿಲ್ಲಾಸ್ಪತ್ರೆಗೆ ಒಯ್ಯಲು ವಿಳಂಬ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಮಹಿಳೆ ವಾಸವಿದ್ದ ಕುಂಬಾರ ಓಣಿ, ಆಸ್ಪತ್ರೆ ಇರುವ ವಿ.ಎಂ. ರಸ್ತೆ ಸುತ್ತ 100 ಮೀಟರ್ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ. ಮಹಿಳೆಯ ಸಂಪರ್ಕದಲ್ಲಿದ್ದವರನ್ನು ಹಳ್ಳಿಬೈಲ್​ನಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆಗೊಳಿಸಲಾಗಿದೆ ಎಂದು ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅಂಗಡಿಗಳು ಬಂದ್: ಪಟ್ಟಣದಲ್ಲಿ ಕರೊನಾ ಸೋಂಕಿನ ಮೊದಲ ಪ್ರಕರಣ ಗುರುವಾರ ದೃಢಪಡುತ್ತಿದ್ದಂತೆ ಪೇಟೆ ಓಣಿ, ಸಿ.ಎಂ. ಉದಾಸಿ ರಸ್ತೆ ಸೇರಿ ಹಲವು ಬಡಾವಣೆಯ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಿದರು. ಪಟ್ಟಣಕ್ಕೆ ಸುತ್ತಲಿನ 50ಕ್ಕೂ ಹೆಚ್ಚು ಗ್ರಾಮಸ್ಥರು ನಿತ್ಯ ಆಗಮಿಸುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಅಂಗಡಿಗಳನ್ನು ಬಂದ್ ಮಾಡಲು ಗ್ರಾಪಂ ಅಧ್ಯಕ್ಷ ಪ್ರದೀಪ ಶೇಷಗಿರಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts