More

    ಸೋಂಕಿತರು, ಒಳರೋಗಿಗಳಿಗೆ ಸತ್ವಯುತ ಊಟ

    ಹುಬ್ಬಳ್ಳಿ: ಸರಿಯಾಗಿ ಊಟ ಕೊಡುತ್ತಿಲ್ಲವೆಂದು ಪದೇ ಪದೆ ಆರೋಪ ಹೊರುತ್ತಿದ್ದ ಇಲ್ಲಿನ ಕಿಮ್ಸ್​ನಲ್ಲಿ ಬದಲಾವಣೆ ಬಂದಿದೆ. ಕರೊನಾ ಸೋಂಕಿತರು ಹಾಗೂ ಒಳ ರೋಗಿಗಳಿಗೆ ಸತ್ವಯುತ ಊಟ ಕೊಡಲು ಆರಂಭಿಸಿದೆ.

    ಮೊದಲೆಲ್ಲ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡಲಾಗುತ್ತಿತ್ತು. ಆದರೆ, ಈಗ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಚಹಾ/ಹಾಲು, ನಂತರ ಉಪಾಹಾರ ಕೊಡಲಾಗುತ್ತಿದೆ. ಊಟದಲ್ಲೂ ಕೆಲ ಬದಲಾವಣೆ ಮಾಡಿಕೊಂಡಿದ್ದು, ಪೌಷ್ಟಿಕ ಆಹಾರ ಕೊಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿದೆ.

    ತಾಜಾ ತರಕಾರಿ, ತೊಗರಿ ಬೇಳೆ, ಕಡಲೆ ಬೇಳೆ, ಅಲಸಂದಿ, ಹೆಸರು ಹಾಗೂ ಮೊಳಕೆಕಾಳು ಕೊಡಲಾಗುತ್ತಿದೆ. ಚಪಾತಿ ಹಾಗೂ ಅನ್ನ ಸಾಂಬಾರ್ ಇರುತ್ತದೆ. ಬೆಳಗಿನ ಉಪಾಹಾರವನ್ನು ರುಚಿಕರವಾಗಿಸಲು ಉಪ್ಪಿಟ್ಟು, ಅವಲಕ್ಕಿ, ಕೇಸರಿಬಾತ್, ಚಿತ್ರಾನ್ನ, ಇಡ್ಲಿ, ಪುಳಿಯೋಗರೆ, ಬಿಸಿ ಬೇಳೆಬಾತ್ ಹೀಗೆ ತರಹೇವಾರಿ ಅಡುಗೆ ಮಾಡಿ ಉಣಬಡಿಸಲಾಗುತ್ತಿದೆ. 800 ಒಳರೋಗಿಗಳು ಹಾಗೂ 150 ಕರೊನಾ ಸೋಂಕಿತರಿಗೆ ನಿತ್ಯ ಎರಡು ಹೊತ್ತು ಊಟ, ಬೆಳಗಿನ ಉಪಾಹಾರ ಕೊಡಲಾಗುತ್ತಿದೆ. 1957ರಿಂದ ಇದ್ದ ಪದ್ಧತಿಯನ್ನು ಈಗ ಬದಲಿಸಲಾಗಿದೆ. ನಿರ್ದೇಶಕರು ಹಾಗೂ ಸಿಎಒ ನಿರ್ದೇಶನದ ಮೇರೆಗೆ ಬಹಳಷ್ಟು ಬದಲಾವಣೆ ತರುವ ಉದ್ದೇಶವಿದೆ ಎನ್ನುತ್ತಾರೆ ಉಸ್ತುವಾರಿ ಹೊತ್ತಿರುವ ಉಪವೈದ್ಯಕೀಯ ಅಧೀಕ್ಷಕ ಡಾ. ಎಸ್.ವೈ. ಮುಲ್ಕಿಪಾಟೀಲ.

    ಮಕ್ಕಳು, ಬಾಣಂತಿಯರಿಗೆ ಕಾಳಜಿ

    ಮಕ್ಕಳು ಹಾಗೂ ಬಾಣಂತಿಯರಿಗೆ ಹಾಲು, ಬ್ರೆಡ್, ಬಿಸ್ಕತ್​ಅನ್ನು ವಿಶೇಷವಾಗಿ ಕೊಡಲಾಗುತ್ತಿದೆ. ಪ್ರೊಟೀನ್, ಕಾಬೋಹೈಡ್ರೇಟ್, ಫ್ಯಾಟ್ ಇರುವ ಆಹಾರ ಕೊಡಲಾಗುತ್ತಿದೆ.

    ಆಹಾರ ಪದ್ಧತಿಯಲ್ಲಿ ಬದಲಾವಣೆ ತರಬೇಕೆಂದು ಮೊದಲಿನಿಂದಲೂ ಬಯಕೆ ಇತ್ತು. ಈಗ ಕಾಲ ಕೂಡಿಬಂದಿದೆ. ಕರೊನಾ ಸೋಂಕಿತರು, ಒಳ ರೋಗಿಗಳು, ಮಕ್ಕಳು ಹಾಗೂ ಬಾಣಂತಿಯರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ.

    | ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts