More

    ಸೋಂಕಿತರಿಗೆ ಯೋಗ ಕಲಿಸುವ ಶಿಕ್ಷಕಿ

    ರಾಣೆಬೆನ್ನೂರ: ಕರೊನಾ ಸೋಂಕಿತರು ಎಂದರೆ ಮಾರುದ್ದ ಅಂತರ ಕಾಯ್ದು ನಿಲ್ಲುವ ಸ್ಥಿತಿ ನಿರ್ವಣವಾಗಿರುವುದು ಸುಳ್ಳಲ್ಲ. ಆದರೆ, ಇಲ್ಲೊಬ್ಬ ಯೋಗ ಶಿಕ್ಷಕಿ ಕಳೆದ ಒಂದು ತಿಂಗಳಿಂದ ಕರೊನಾ ಸೋಂಕಿತರಿಗೆ ಯೋಗ ಕಲಿಸಿಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಇಲ್ಲಿನ ಬನಶಂಕರಿ ನಗರದ ನಿವಾಸಿ ಹಾಗೂ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಮಹಿಳಾ ಘಟಕದ ಪ್ರಭಾರಿ ಜ್ಯೋತಿ ಜಂಬಗಿ ಯೋಗ ಕಲಿಸಿಕೊಡುತ್ತಿರುವ ಶಿಕ್ಷಕಿ. ತಾಲೂಕಿನ ಜೋಯಿಸರಹರಳಹಳ್ಳಿಯ ಆಯುರ್ವೆದ ಕ್ಷೇಮ ಕೇಂದ್ರದಲ್ಲಿ ಜ್ಯೋತಿ ಜಂಬಗಿ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ನಗರದಲ್ಲಿ ತೆರೆದಿರುವ ಕೋವಿಡ್-19 ಕೇರ್ ಸೆಂಟರ್​ಗಳಿಗೆ ತೆರಳಿ ನಿತ್ಯ ಬೆಳಗ್ಗೆ ಒಂದೂವರೆ ಗಂಟೆ ಸೋಂಕಿತರಿಗೆ ತರಬೇತಿ ನೀಡುತ್ತಿದ್ದಾರೆ.

    ರೋಗಿಗಳು ಗುಣವಾಗಲು ನೆರವಾಗುವ ಹಾಗೂ ಉಸಿರಾಟದ ತೊಂದರೆಗೆ ರಾಮಬಾಣವಾಗಿರುವ ಪ್ರಾಣಾಯಾಮ ಹಾಗೂ ಶ್ವಾನಾಸನ, ಹಲಾಸನ, ಅರ್ಧ ಉಷ್ಟ್ರಾಸನ ಸೇರಿ ಇತರ ಆಸನಗಳನ್ನು ಕಲಿಸಿಕೊಡುತ್ತಿದ್ದಾರೆ. ಅಲ್ಲದೆ, ಧ್ಯಾನ ಮಾಡುವುದರಿಂದ ಆಗುವ ಲಾಭ, ಮಾಸ್ಕ್ ಧರಿಸುವಿಕೆ, ಆಹಾರ ಸೇವನೆ ಹಾಗೂ ಸ್ವಚ್ಛತೆ ಕುರಿತು ಸೋಂಕಿತರಿಗೆ ತಿಳಿ ಹೇಳುತ್ತಿದ್ದಾರೆ.

    ಉಚಿತ ಸೇವೆ: ಉಸಿರಾಟದ ಸಮಸ್ಯೆ ಬೇಗ ಗುಣವಾಗಲು ಯೋಗ ಮಾಡಿದರೆ ಅನುಕೂಲ ಎಂಬ ಕಾರಣಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ, ಜ್ಯೋತಿ ಜಂಬಗಿಯವರನ್ನು ಸಂರ್ಪಸಿ ಸೋಂಕಿತರಿಗೆ ತರಬೇತಿ ನೀಡಲು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿದ ಜ್ಯೋತಿ ಜಂಬಗಿ

    ಮೇ 20ರಿಂದ ಈವರೆಗೂ ಬೆಳಗ್ಗೆ 5 ಗಂಟೆಯಿಂದ 6.30ರವರೆಗೆ ಸೋಂಕಿತರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ,

    ಕರೊನಾ ಬರುವ ಮುಂಚೆಯೂ ಹಿಂದುಳಿದ ಕಲ್ಯಾಣ ಇಲಾಖೆಯ ಎಲ್ಲ ಮಕ್ಕಳಿಗೂ ಯೋಗ ತರಬೇತಿ ನೀಡುತ್ತ ಬಂದಿದ್ದಾರೆ.

    8 ವರ್ಷದಿಂದ ಯೋಗ ಕಲಿಕೆ: ‘ಕಳೆದ 8 ವರ್ಷದ ಹಿಂದೆ ನನಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿತ್ತು. ಹಲವು ಆಸ್ಪತ್ರೆಗೆ ತೋರಿಸಿದರೂ ಗುಣವಾಗಿರಲಿಲ್ಲ. ನಂತರ ಯೋಗಾಸನ ಮಾಡಲು ಶುರು ಮಾಡಿದೆ. ನಂತರ ಆಸ್ಪತ್ರೆಯಿಂದಲೂ ಬಗೆಹರಿಯದ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ಆದ್ದರಿಂದ ಇಂದಿಗೂ ಯೋಗಾಸನ ಜೀವನದ ಒಂದು ಭಾಗವಾಗಿ ಮಾಡಿಕೊಂಡಿದ್ದೇನೆ. ಜತೆಗೆ ಪತಂಜಲಿ ಯೋಗ ಸಮಿತಿಯಲ್ಲಿ ತೊಡಗಿಕೊಂಡು ಸೇವೆ ಸಲ್ಲಿಸುತ್ತಿದ್ದೇನೆ’ ಎಂದು ಜ್ಯೋತಿ ಜಂಬಗಿ ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

    ಬಹಳ ಸಂತೋಷದಿಂದ ಕರೊನಾ ಸೋಂಕಿತರಿಗೆ ಯೋಗ ತರಬೇತಿ ನೀಡುತ್ತಿದ್ದೇನೆ. ಸೋಂಕಿತರನ್ನು ದೂರ ಮಾಡಲು ಬದಲು ಅವರಿಗೆ ಆರೋಗ್ಯದ ಕಾಳಜಿ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ನನ್ನಿಂದ ಯೋಗ ತರಬೇತಿ ಪಡೆದುಕೊಳ್ಳುತ್ತಿರುವ ಸೋಂಕಿತರು ಸಂತೋಷ ಹಾಗೂ ವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ನೋಡಿಯೇ ನಾನು ಯೋಗ ಕಲಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ.

    | ಜ್ಯೋತಿ ಜಂಬಗಿ ಯೋಗ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts