More

    ಸೋಂಕಿತರಿಗೆ ಕಳಪೆ ಆಹಾರ ಆರೋಪ

    ನರಗುಂದ: ತಾಲೂಕಿನ ಬೆನಕನಕೊಪ್ಪ ಕ್ವಾರಂಟೈನ್ ಕೇಂದ್ರದ ಕರೊನಾ ಸೋಂಕಿತರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದ್ದು, ಸ್ವಚ್ಛತೆ ಹಾಗೂ ಮೂಲಸೌಲಭ್ಯ ಮರಿಚೀಕೆಯಾಗಿದೆ ಎಂದು ಕರೊನಾ ಸೋಂಕಿತರು ಆರೋಪಿಸಿದ್ದಾರೆ.

    ಬೆನಕನಕೊಪ್ಪ ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ 65 ಜನ ಪುರುಷ, 15 ಜನ ಮಹಿಳೆಯರು ಸೇರಿ ಒಟ್ಟು 80 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಗುಣಮಟ್ಟದ ಆಹಾರದ ಜತೆಗೆ ಕುಡಿಯಲು ಶುದ್ಧವಾದ ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹ, ಸ್ನಾನ ಗೃಹಗಳು ಸ್ವಚ್ಛತೆಯಿಂದ ಕೂಡಿಲ್ಲ. ಇದರಿಂದ ಮಹಿಳೆಯರು, ಮಕ್ಕಳು, ವಯೋವೃದ್ಧ ಸೋಂಕಿತರಿಗೆ ನಿತ್ಯ ನರಕ ದರ್ಶನವಾಗುತ್ತಿದೆ.

    ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ನೀಡಲಾಗುತ್ತಿದೆ. ಮಧ್ಯಾಹ್ನ ಚಪಾತಿ, ಅನ್ನ-ಸಾಂಬಾರು ಕೊಟ್ಟರೆ, ರಾತ್ರಿ ಕೇವಲ ಕಳಪೆ ಗುಣಮಟ್ಟದ ಪಲಾವ್ ನೀಡಲಾಗುತ್ತಿದೆ. ರಾತ್ರಿ ನೀಡಿರುವ ಪಾಲಾವ್ ತಿಂದಿರುವ ವಯೋವೃದ್ಧ ಸೋಂಕಿತರೊಬ್ಬರು ವಾಂತಿ ಮಾಡಿಕೊಂಡಿದ್ದಾರೆ. ರ್ಯಾಪಿಡ್ ಟೆಸ್ಟಿಂಗ್​ನಲ್ಲಿ ಪಾಸಿಟಿವ್ ಬಂದ ಬಳಿಕ ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿದ್ದೇವೆ. ನಮಗೆ ನಿತ್ಯ ಹೈಡೋಸ್ ಮಾತ್ರೆಗಳನ್ನು ಕೊಡುತ್ತಾರೆ. ಕಳಪೆ ಆಹಾರ ಸೇವನೆಯಿಂದಾಗಿ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಆರೋಪಿಸಿದ್ದಾರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಕರೊನಾ ಸೋಂಕಿತರಾದ ಪ್ರಶಾಂತ ಪಲ್ಲೇದ, ಎಸ್.ಎಸ್. ಗಟ್ಟಿ, ಯಲ್ಲಪ್ಪ ಕಲಾಲ, ವಿಠ್ಠಲ ಬೆನಕನಕೊಪ್ಪ, ನಾರಾಯಣ ದೇವಾಡಿಗ.

    ಮುರಿದ ಶೌಚಗೃಹಗಳ ಬಾಗಿಲು: ಇಲ್ಲಿನ ಶೌಚಗೃಹ ಮತ್ತು ಸ್ನಾನ ಗೃಹಗಳಿಗೆ ಬಾಗಿಲು ಇಲ್ಲ. ಕೆಲವೊಂದಕ್ಕೆ ಇದ್ದರೂ ಅವು ಮುರಿದು ಹೋಗಿವೆ. ಸ್ವಚ್ಛತೆಯಂತು ದೂರದ ಮಾತು. ಇದರಿಂದಾಗಿ ರಾತ್ರಿ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿ ಸೋಂಕಿತರು ನಿದ್ರಿಸದಂತಾಗಿದೆ. ಮಹಿಳೆಯರು ಮುಜುಗರ ಅನುಭವಿಸುವಂತಾಗಿದೆ. ಕುಡಿಯಲು ಶುದ್ಧ ನೀರಿಲ್ಲದ ಕಾರಣ ಫ್ಲೋರೈಡ್ ನೀರೇ ಗತಿಯಾಗಿದೆ. ಕರೊನಾಕ್ಕೆ ಬಿಸಿ ನೀರು ಮದ್ದು. ಆದರೆ, ಇಲ್ಲಿ ಬಿಸಿ ನೀರು ಇಲ್ಲ. ಆದ್ದರಿಂದ ತಕ್ಷಣ ಸೌಲಭ್ಯ ನೀಡಿ ಇಲ್ಲವೆ, ಹೋಂ ಕ್ವಾರಂಟೈನ್ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.

    ಕ್ವಾರಂಟೈನ್ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ ಹೆಚ್ಚಾಗಿದೆ. ಕಳಪೆ ಆಹಾರ ಕೊಡುವುದನ್ನು ನಿಲ್ಲಿಸಬೇಕು. ಶೌಚಗೃಹಗಳಿಗೆ ಹೊಸ ಬಾಗಿಲುಗಳನ್ನು ಅಳವಡಿಸಬೇಕಾಗಿದೆ. ಸ್ವಚ್ಛತೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿರುವ ಶೌಚ ಹಾಗೂ ಸ್ನಾನ ಗೃಹಗಳನ್ನು ಶುಚಿಗೊಳಿಸಬೇಕು. ಇಲ್ಲದಿದ್ದರೆ ರೋಗ ವಾಸಿಯಾಗುವ ಬದಲು ರೋಗವನ್ನು ಮನೆಗೆ ಅಂಟಿಸಿಕೊಂಡು ಹೋಗುವ ಪರಿಸ್ಥಿತಿ ಇದೆ. 14 ದಿನಗಳ ಕ್ವಾರಂಟೈನ್ ಮುಗಿದು, ಮನೆಗೆ ತೆರಳುವವರ ಸೋಂಕಿತರ ಆರೋಗ್ಯ ತಪಾಸಣೆಯನ್ನೂ ಮಾಡದಿರುವ ಆರೋಪ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.

    ಕ್ವಾರಂಟೈನ್ ಕೇಂದ್ರದ ಪ್ರತಿಯೊಬ್ಬ ವ್ಯಕ್ತಿಗೂ ಗುಣಮಟ್ಟದ ಆಹಾರ ದೊರೆಯುತ್ತಿದೆ. ಕೆಲವೊಬ್ಬರು ವೃಥಾ ಆರೋಪ ಮಾಡುತ್ತಿದ್ದಾರೆ. ಈ ಮೊದಲು ಕ್ವಾರಂಟೈನ್ ಕೇಂದ್ರಕ್ಕೆ ದಾಖಲಾದ ಕೆಲವರು ಅಲ್ಲಿನ ಶೌಚ ಹಾಗೂ ಸ್ನಾನ ಗೃಹಗಳ ಬಾಗಿಲನ್ನು ಒಡೆದು, ಕುಡಿಯುವ ನೀರಿನ ಪೈಪ್, ನೀರಿನ ಟ್ಯಾಂಕ್​ಗಳನ್ನು ಒಡೆದು ಹಾಕಿದ್ದಾರೆ. ಹೀಗಾಗಿ, ಬಿಸಿ ನೀರು ಇಲ್ಲದೆ ಸಮಸ್ಯೆ ಉಂಟಾಗಿದೆ. ಸೋಮವಾರ ಸಮಸ್ಯೆ ಬಗೆಹರಿಸಲಾಗುತ್ತದೆ.

    | ಎ.ಎಚ್. ಮಹೇಂದ್ರ, ತಹಸೀಲ್ದಾರ್ ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts