More

    ಸೊರಬ ಒಳಾಂಗಣ ಸ್ಟೇಡಿಯಂ ಉದ್ಘಾಟನೆಗೆ ಸಿಎಂ ಆಗಮನ: ಕುಮಾರ್ ಬಂಗಾರಪ್ಪ

    ಸೊರಬ: ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಸೊರಬದಲ್ಲಿ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಶೀಘ್ರದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
    ಗುರುವಾರ ತಾಲೂಕಿನ ಜಡೆ ಗ್ರಾಮದ ಶ್ರೀ ಸಿದ್ಧವೃಷಭೇಂದ್ರ ಪ್ರೌಢಶಾಲೆಯ ಆವರಣದಲ್ಲಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಹಾಗೂ ಜಡೆ ಗ್ರಾಪಂ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗ್ರಾಮೀಣ ಪ್ರದೇಶದಲ್ಲಿನ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದೆ ಎಂದರು.
    ಎಸ್.ಬಂಗಾರಪ್ಪ ಅವರ ಸ್ಮಾರಕ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಒಂದು ಕೋಟಿ ರೂ. ಅನುದಾನ ನೀಡಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಚ್ಚುವರಿಯಾಗಿ ಎರಡು ಕೋಟಿ ರೂ. ಅನುದಾನ ನೀಡಿದ್ದಾರೆ. ಬಂಗಾರಪ್ಪ ಅವರು ಗ್ರಾಮೀಣ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಪ್ರಸ್ತುತ ಎರಡು ಬ್ಯಾಡ್ಮಿಂಟನ್ ಅಂಕಣದ ನಿರ್ಮಾಣ ಕಾರ್ಯ ಭರದಿಂದಸಾಗಿದೆ. ಮುಂಭಾಗದಲ್ಲಿ ಬಾಸ್ಕೆಟ್‌ಬಾಲ್, ಕಬಡ್ಡಿ ಮತ್ತು ಖೋ ಖೋ ಅಂಕಣ ನಿರ್ಮಿಸಲಾಗುತ್ತಿದೆ. ಜನವರಿಯಲ್ಲಿ ಸಿಎಂ ಅವರಿಂದ ಉದ್ಘಾಟನೆಯಾಗಲಿದೆ ಎಂದರು.
    ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೋಬಳಿಗೊಂದು ಕ್ರೀಡಾಂಗಣ ನಿರ್ಮಿಸಲು ಸ್ಥಳ ಕಾಯ್ದಿರಿಸುವ ಕಾರ್ಯ ನಡೆಯುತ್ತಿದೆ. ಅನೇಕ ಗ್ರಾಮಗಳಲ್ಲಿ ಗ್ರಾಮಸ್ಥರೇ ಕ್ರೀಡಾಂಗಣಕ್ಕಾಗಿ ಜಾಗವನ್ನು ಮೀಸಲಿಟ್ಟಿರುವುದು ಶ್ಲಾಘನೀಯ ವಿಷಯ. ಉತ್ತಮ ಆರೋಗ್ಯ ಹೊಂದಲು ನಿಯಮಿತ ಆಹಾರ ಸೇವನೆ ಮತ್ತು ಕ್ರೀಡೆ, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
    ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts