More

    ಸೈಬರ್ ವಂಚನೆಗೆ ವಿಐಪಿ ವರಸೆ

    ಬೆಳಗಾವಿ: ಹೋದಲ್ಲಿ-ಬಂದಲ್ಲಿ ತಾವೂ ವಿಐಪಿ ಎಂದು ಬಿಂಬಿಸಿಕೊಂಡು ವಿಶೇಷ ಸವಲತ್ತು ನಿರೀಕ್ಷಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಜನರಲ್ಲಿನ ಈ ಗೀಳನ್ನೇ ಬಂಡವಾಳವನ್ನಾಗಿಸಿಕೊಂಡ ಆನ್‌ಲೈನ್ ವಂಚಕರು, ವಿಐಪಿ ಟಾಸ್ಕ್ ಮೂಲಕ ಲಕ್ಷಾಂತರ ರೂ. ದೋಚುತ್ತಿದ್ದಾರೆ.

    ‘ನಿಮ್ಮನ್ನು ವಿಐಪಿ ಎಂದು ಪರಿಗಣಿಸಿ, ಈ ಟಾಸ್ಕ್ ನೀಡಲಾಗಿದೆ. ಇದನ್ನು ಪೂರ್ಣಗೊಳಿಸಿದರೆ ಹಣ ನೀಡಲಾಗುವುದು’ ಎಂಬ ಸಂದೇಶದ ಬೆನ್ನು ಹತ್ತಿದ ಅಮಾಯಕರು, ಆನ್‌ಲೈನ್ ವಂಚನೆ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈಗಾಗಲೇ ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರ್ಗಿ ಹಾಗೂ ದಾವಣಗೆರೆ ಜಿಲ್ಲೆಯ ಹಲವು ಜನ ಈ ವಂಚಕರ ಖೆಡ್ಡಾಕ್ಕೆ ಬಿದ್ದಿದ್ದು, ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ.

    ಗ್ರಾಹಕರ ಮೊಬೈಲ್‌ಗೆ ಲಿಂಕ್ ಕಳುಹಿಸುವ ವಂಚಕರು ಅದನ್ನು ಬಳಸಿ ಇನ್ವೈಟ್ ಕೋಡ್ ಕಳುಹಿಸಿತ್ತಾರೆ. ಲಿಂಕ್ ಮೂಲಕ ಗ್ರಾಹಕರ ಹೆಸರು ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಪಡೆಯುತ್ತಾರೆ. ಇದು ಮೊದಲ ಟಾಸ್ಕ್. ಅದನ್ನು ಪೂರ್ಣಗೊಳಿಸಿದ್ದಕ್ಕಾಗಿ ಬೋನಸ್ ಹಾಕಲು ಅವರ ಬ್ಯಾಂಕ್ ಖಾತೆ ಮಾಹಿತಿ ಪಡೆದು ನೂರರಿಂದ-ಸಾವಿರ ರೂ. ಪಾವತಿಸುತ್ತಾರೆ. 2ನೇ ಟಾಸ್ಕ್‌ಗೆ 298 ರೂ. ರಿಚಾರ್ಚ್ ಮಾಡುವುದು, 3ನೇ ಟಾಸ್ಕ್ 500 ರೂ. ರಿಚಾರ್ಚ್ ಮಾಡಿಸಿಕೊಂಡಾಗಲೂ ಸಾವಿರಾರು ರೂ. ಜಮೆ ಮಾಡುತ್ತಾರೆ. ಇದೇ ಅವಧಿಯಲ್ಲಿ ಪ್ರತಿ ಹಂತಕ್ಕೂ ಬೇರೆ ಬೇರೆ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಾರೆ. ಒಂದು ಖಾತೆಗೆ ಅವರಿಂದ ಬೋನಸ್ ಜಮೆ ಆಯಿತು ಎಂದರೆ ಆ ಖಾತೆಯನ್ನೇ ಖಾಲಿ ಮಾಡಿದರು ಎಂದರ್ಥ ಎನ್ನುತ್ತಾರೆ ಸೈಬರ್ ಠಾಣೆ ಪೊಲೀಸ್ ಅಧಿಕಾರಿಗಳು.

    43 ಲಕ್ಷ ರೂ. ವಂಚನೆ: ವಂಚಕರು ನೀಡುವ ಇನ್‌ವೆಸ್ಟ್ ಆಫರ್‌ನ ವಿಐಪಿ ಟಾಸ್ಕ್ ಪೂರೈಸಿದ ಬೆಳಗಾವಿಯ ಪ್ರಮೋದ ಪಾಟೀಲ ಎಂಬುವರು 43.77 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಿಐಪಿ ಲಿಂಕ್ ಸಂದೇಶ ತೆರೆದ ಪ್ರಮೋದ ಅವರಿಂದ, ಕೆಪ್ಪೆಲ ಡೈಮಂಡ್ ಆ್ಯಪ್ ಮೂಲಕ ಮೊದಲ ಹಂತವಾಗಿ 10 ಸಾವಿರ, ನಂತರ 5 ಹಂತದವರೆಗೆ ಸಾವಿರಾರು ರೂ. ಪಡೆದು ಲಾಭದ ಹಣ ಎಂದು 2.36 ಲಕ್ಷ ರೂ. ನೀಡಿದ್ದಾರೆ. ಜ.7 ರಂದು ಮುಂದಿನ ಹಂತವಾಗಿ 46 ಲಕ್ಷ ರೂ. ಪಾವತಿಸಿಕೊಂಡು, ಎರಡನೇ ಲಾಭವಾಗಿ ಮತ್ತೆ 2.36 ಲಕ್ಷ ರೂ. ನೀಡಿ, ಬಾಕಿ 43.77 ಲಕ್ಷ ರೂ. ನೀಡದೆ ಸಂಪರ್ಕ ಕಳೆದುಕೊಂಡಿದ್ದಾರೆ.

    ಕ್ಷಣಿಕವಾಯ್ತು ಬೋನಸ್ ಖುಷಿ: ಮತ್ತೊಂದು ಪ್ರಕರಣದಲ್ಲಿ, 3 ಹಂತದ ಟಾಸ್ಕ್ ಎದುರಿಸಿದ ಬೆಳಗಾವಿಯ ದೀಪಿಕಾ ನಾಯಕವಾಡಿ ಎಂಬುವರ ಮೂರು ಖಾತೆಗಳಲ್ಲಿದ್ದ 1.57 ಲಕ್ಷಕ್ಕೂ ಅಧಿಕ ರೂ. ವರ್ಗಾಯಿಸಿಕೊಂಡಿದ್ದಾರೆ. ತಮ್ಮ ಮೂರೂ ಬ್ಯಾಂಕ್ ಖಾತೆಗೆ ಬೋನಸ್ ಬಂತೆಂದು ಖುಷಿ ಪಟ್ಟಿದ್ದ ದೀಪಿಕಾ ಅವರಿಗೆ ಮೂರು ಖಾತೆಗಳಲ್ಲಿದ್ದ ಒಟ್ಟು 1.57 ಲಕ್ಷ ರೂ. ಮೊತ್ತ ವಂಚಿಸಲಾಗಿದೆ. ಹೀಗೆ 30 ಸಾವಿರದಿಂದ 1 ಲಕ್ಷ ರೂ. ವರೆಗೆ ಬಹಳಷ್ಟು ಜನ ವಂಚನೆಗೊಳಗಾಗುತ್ತಿದ್ದಾರೆ. ಆದರೆ, ಹೆಚ್ಚು ಹಣ ಕಳೆದುಕೊಂಡವರಷ್ಟೇ ದೂರು ದಾಖಲಿಸಲು ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.

    ವಿವಿಧ ಆ್ಯಪ್ ಮೂಲಕ ವಿಐಪಿ ಟಾಸ್ಕ್ ನೀಡುವುದು ಮತ್ತು ಹೆಚ್ಚಿನ ಲಾಭಕ್ಕೆ ಇನ್ವೆಸ್ಟ್ ಮಾಡಿಸಿ, ಆರಂಭದಲ್ಲಿ ಲಾಭವನ್ನು ನೀಡಿ ಬಳಿಕ ವಂಚಿಸಿರುವ ಬಗ್ಗೆ ದೂರು ದಾಖಲಾಗಿವೆ. 43 ಲಕ್ಷ ರೂ. ವಂಚನೆಗೆ ಸಂಬಂಧಿಸಿದ ಬ್ಯಾಂಕ್ ಖಾತೆ ಫ್ರೀಜ್ ಮಾಡಿ, ತನಿಖೆ ಮುಂದುವರಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ ಬಹುತೇಕ ವಿದ್ಯಾವಂತರೇ ವಂಚನೆಗೆ ಒಳಗಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅಪರಿಚಿತರ ಜತೆ ವ್ಯವಹರಿಸುವಾಗ ಜನರು ಎಚ್ಚರವಾಗಿರಬೇಕು.
    | ಡಾ.ಎಂ.ಬಿ.ಬೋರಲಿಂಗಯ್ಯ ನಗರ ಪೊಲೀಸ್ ಆಯುಕ್ತ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts