More

    ಸೂಟು ಬಿಟ್ಟು ಮೆಡಿಕಲ್ ಕಿಟ್ ತಯಾರಿಸುತ್ತಿದೆ ರೇಮಂಡ್!

    ಗೌರಿಬಿದನೂರು: ಗರಿಗರಿಯಾಗಿ ಮಿಂಚುವ ಸೂಟ್ ತಯಾರಿಕೆ ಮೂಲಕ ಹೆಸರಾಗಿದ್ದ ರೇಮಂಡ್ ಕಂಪನಿ ಕರೊನಾ ಸಂಕಷ್ಟದಿಂದಾಗಿ ಸದ್ಯಕ್ಕೆ ಸೂಟ್ ತಯಾರಿಕೆ ಕೈ ಬಿಟ್ಟು ಮೆಡಿಕಲ್ ಕಿಟ್ ತಯಾರಿಸುತ್ತಿದೆ!

    ಕಂಪನಿಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇತ್ತು. ಆದರೆ ಕರೊನಾ ಕರಿನೆರಳು ಜವಳಿ ಉದ್ಯಮದ ಮೇಲೂ ಬೀರಿದ್ದು, ಸೂಟ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಈಗ ಬೇಡಿಕೆ ಕುಸಿದಿದೆ. ಗೌರಿಬಿದನೂರಿನ ಗುಂಡಾಪುರ ಬಳಿಯ ಕಾರ್ಖಾನೆಯಲ್ಲಿ ಕಂಪನಿ ಉತ್ಪಾದಿಸುತ್ತಿದ್ದ ಶೇ.90 (ಉತ್ಪನ್ನಗಳು) ಸೂಟುಗಳು ಅಮೆರಿಕ, ಸ್ಪೇನ್, ಇಟಲಿ, ಚೀನಾ, ಜಪಾನ್, ಆಸ್ಟ್ರೇಲಿಯಾ ಸೇರಿ ಇತರ ವಿದೇಶಗಳಿಗೆ ರಫ್ತಾಗುತ್ತಿದ್ದವು. ಈಗ ಬಹುತೇಕ ಬೇಡಿಕೆ ಕುಸಿದಿರುವುದರಿಂದ ಮೆಡಿಕಲ್ ಕಿಟ್ ತಯಾರಿಸುತ್ತಿದೆ.

    ಪುನರಾರಂಭ: ಕಿಟ್ ತಯಾರಿಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ತಾಲೂಕಿನಲ್ಲಿರುವ ಕಾರ್ಖಾನೆ ಬಂದ್ ಆತ್ತು. ಈಗ ಪುನರಾರಂಭಗೊಂಡಿದ್ದರೂ ಸೂಟ್ ತಯಾರಿಸುತ್ತಿಲ್ಲ. ಮೊದಲ ಹಂತದಲ್ಲಿ ಪಿಪಿಇ ಕಿಟ್ ಸಿದ್ಧಪಡಿಸಿ ಎಚ್.ಎಲ್.ಎಲ್‌ಗೆ ಹಸ್ತಾಂತರಿಸುತ್ತಿದೆ. ಅಲ್ಲಿ ಕಿಟ್‌ಗೆ ಅಂತಿಮ ಸ್ವರೂಪ ನೀಡಲಾಗುತ್ತಿದೆ.

    ಕಾರ್ಮಿಕರಲ್ಲಿ ಆತಂಕ: ಪ್ರಾರಂಭದಲ್ಲಿ ಕಾರ್ಖಾನೆ 2400 ಮಂದಿಗೆ ಉದ್ಯೋಗ ನೀಡಿತ್ತು. ಈಗ ಕರೊನಾ ಹಿನ್ನೆಲೆಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 1,100ಕ್ಕೆ ಇಳಿಸಿದೆ. ಸರ್ಕಾರದ ಆದೇಶದಂತೆ ಶೇ.40 ನೌಕರರನ್ನು ಮಾತ್ರ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ಮಂದಿಗೆ ಏಪ್ರಿಲ್ ತಿಂಗಳಲ್ಲಿ ಅರ್ಧದಷ್ಟು ಸಂಬಳ ನೀಡಲಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಕಾರ್ಖಾನೆ ಮುಚ್ಚುತ್ತದೋ ಎಂಬ ಆತಂಕ ಕಾರ್ಮಿಕರನ್ನು ಕಾಡುತ್ತಿದೆ. ಕರೊನಾ ಸೋಂಕಿನ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮಾರುಕಟ್ಟೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚುವುದಿಲ್ಲ ಎಂದು ಆಡಳಿತ ಮಂಡಳಿ ಭರವಸೆ ನೀಡುತ್ತಿದೆ.

    ಕರೊನಾ ನಿಯಂತ್ರಣದ ಉದ್ದೇಶದಿಂದ ಕಂಪನಿಯು ಗುಣಮಟ್ಟದ ಮೆಡಿಕಲ್ ಕಿಟ್ ತಯಾರಿಸುತ್ತಿದೆ. ಕಾರ್ಮಿಕರ ಹಿತ ಕಾಪಾಡುವ ಉದ್ದೇಶ ಕಂಪನಿಯದ್ದಾಗಿದೆ. ಲಾಕ್‌ಡೌನ್ ಬಳಿಕ ಪರಿಸ್ಥಿತಿ ಯಥಾಸ್ಥಿತಿಗೆ ಬರಲಿದೆ.
    ಬಿ.ಎನ್.ನರಸಪ್ಪ, ಹಿರಿಯ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts