More

    ಸೂಕ್ತ ಪರಿಹಾರ ಕೊಡಿಸುವೆ

    ಆಳಂದ: ಶುಕ್ರವಾರ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಸಾಕಷ್ಟು ಅವಘಡ ಸಂಭವಿಸಿದೆ. ಬೆಳೆ ಹಾನಿಯಾಗಿದ್ದು, ಸೇತುವೆಗಳು ಕೊಚ್ಚಿ ಹೋಗಿವೆ. ಮಾದನಹಿಪ್ಪರಗಾ- ದುಧನಿ ಸಂಪರ್ಕ ಕಡಿತವಾಗಿದೆ. ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ರೈತರಿಗೆ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ್ ಭರವಸೆ ನೀಡಿದರು.
    ಮಳೆಯಿಂದ ಹಾನಿಗೊಳಗಾದ ಜಿಡಗಾ, ದರ್ಗಾಶಿರೂರ, ಮೋಘಾ(ಕೆ), ಅಲ್ಲಾಪುರ, ಕೆರೂರ, ಮಾದನಹಿಪ್ಪರಗಾ, ಝಳಕಿ(ಬಿ), ಹಡಲಗಿ, ಚಲಗೇರಿ, ನಿಂಬಾಳ ಸೇರಿ ಇನ್ನಿತರ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಸುಮಾರು 4 ಗಂಟೆ ಸುರಿದ ಮಳೆಗೆ ಸಾಕಷ್ಟು ಸಮಸ್ಯೆ ಉಂಟಾಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದರಿಂದ ಕೆಲ ಸೇತುವೆಗಳು ಮುಳುಗಡೆಯಾಗಿವೆ. ಹೊಲ- ಗದ್ದೆಗಳಿಗೆ ನೀರು ನುಗ್ಗಿ ಬಂದರುಗಳು ಕಿತ್ತು ಹೋಗಿವೆ. ಮೊಳಕೆ ಒಡೆದ ಉದ್ದು, ಹೆಸರು, ತೊಗರಿ ಬೆಳೆ ನೀರಿನ ರಭಸಕ್ಕೆ ಹಾಳಾಗಿ ಹೋಗಿವೆ. ಇದರಿಂದ ರೈತಾಪಿ ವರ್ಗಕ್ಕೆ ಸಾಕಷ್ಟು ಹಾನಿ ಸಂಭವಿಸಿದೆ. ಈ ಬಗ್ಗೆ ಸಮಗ್ರ ವರದಿ ಪಡೆಯಲಾಗುತ್ತಿದೆ ಎಂದರು.
    ಮಳೆಯಿಂದ ಕೆರೂರ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಮಧ್ಯೆಯಿದ್ದ ಸೇತುವೆ ಕೊಚ್ಚಿ ಹೋಗಿದ್ದು, ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಜನ ಸಂಚಾರಕ್ಕಾಗಿ ಶೀಘ್ರದಲ್ಲಿಯೇ ಸೇತುವೆ ದುರಸ್ತಿ ಮಾಡಬೇಕು. ಜಿಡಗಾದ ಒಂದು ಸೇತುವೆ, ಮೋಘಾ(ಕೆ) ರಸ್ತೆ, ಕೆರೂರ ಸೇತುವೆ, ಮಾದನಹಿಪ್ಪರಗಾದ ಸಂಪರ್ಕ ಸೇತುವೆ, ಚಲಗೇರಿ ಸಂಪರ್ಕಿಸುವ ಖಾಸಾ ಹಳ್ಳದ ಸೇತುವೆಗಳು ಹಾಳಾಗಿವೆ. ನಿಂಬಾಳದ ಕೆರೆ ತುಂಬಿ ನೀರು ಹರಿದಿದ್ದರಿಂದ ಕಲ್ಲಂಗಡಿ ಸೇರಿ ಇನ್ನಿತರ ಬೆಳೆ ಹಾಳಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಜಿಪಂ ಸದಸ್ಯ ಗುರುಶಾಂತ ಪಾಟೀಲ್, ತಾಪಂ ಸದಸ್ಯರಾದ ಸಾತಪ್ಪ ಕೋಳಶೆಟ್ಟಿ, ಬಸವರಾಜ ಸಾಣಕ, ತಹಸೀಲ್ದಾರ್ ದಯಾನಂದ ಪಾಟೀಲ್, ಲೋಕೋಪಯೋಗಿ ಇಲಾಖೆ ಎಇಇ ಈರಣ್ಣ ಕುಣಗೇರಿ, ಪಂಚಾಯತ್ ರಾಜ್ ಇಲಾಖೆಯ ಮಲ್ಲಿಕಾರ್ಜುನ ಕಾರಭಾರಿ, ತೋಟಗಾರಿಕೆ ಇಲಾಖೆಯ ಸುರೇಂದ್ರನಾಥ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಜಾಧವ್, ಪೊಲೀಸ್ ಇಲಾಖೆಯ ಇಂದುಮತಿ, ತಿರುಮಲೇಶ, ಪ್ರಮುಖರಾದ ಆನಂದರಾವ ಪಾಟೀಲ್ ಕೋರಳ್ಳಿ, ಶರಣು ಕುಮಸಿ, ಪ್ರಕಾಶ ಮಾನೆ, ಲಿಂಗರಾಜ ಪಾಟೀಲ್ ಝಳಕಿ(ಬಿ), ಸಿದ್ದಾರಾಮ ತೋಳನೂರ, ಲಿಂಗರಾಜ ಉಡಗಿ, ಬಸವರಾಜ ಶಾಸ್ತ್ರಿ ಇತರರಿದ್ದರು.

    ತಾಲೂಕಿನಲ್ಲಿ ಶುಕ್ರವಾರ ಹೆಚ್ಚು ಮಳೆ ಸುರಿದಿದೆ. ಆಳಂದ- 63.6, ಖಜೂರಿ- 26.2, ನರೋಣಾ- 48, ನಿಂಬರ್ಗಾ 80, ಮಾದನ ಹಿಪ್ಪರಗಾ- 62.4, ಸರಸಂಬಾ- 78, ಕೋರಳ್ಳಿ- 87 ಮಿಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೆಲ ಹಳ್ಳಿಗಳಲ್ಲಿ ಮನೆಗಳು ಬಿದ್ದಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ಕಲ್ಪಿಸಿಕೊಡಲಾಗುವುದು.
    | ದಯಾನಂದ ಪಾಟೀಲ್, ತಹಸೀಲ್ದಾರ್, ಆಳಂದ

    ಕಳೆದ 15 ವರ್ಷಗಳಿಂದ ನೆಲ್ಲೂರ- ನಾವದಗಿ ರಸ್ತೆ ಹದಗೆಟ್ಟಿದ್ದು, ಇಲ್ಲಿವರೆಗೂ ಸಂಬಂಧಪಟ್ಟ ಶಾಸಕರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರಸ್ತೆ ಸರಿಪಡಿಸಲು ಒತ್ತಾಯಿಸಲಾಗಿದೆ. ಆದರೆ ಯಾರೊಬ್ಬರೂ ಗಮನಹರಿಸಿಲ್ಲ. ಇದೀಗ ಮಳೆಯಿಂದ ಸಂಪೂರ್ಣ ರಸ್ತೆ ಕೊಚ್ಚಿ ಹೋಗಿದೆ. ಈಗಲಾದರೂ ಸಂಬಂಧಿತರು ಗಮನಹರಿಸಿ, ದುರಸ್ತಿ ಮಾಡಬೇಕಿದೆ.
    | ನಂದಕುಮಾರ ಬಿರಾದಾರ, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯಿತಿ, ಕೊಡಲಹಂಗರಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts