More

    ಸುಸಜ್ಜಿತ ಕೇಂದ್ರಕ್ಕೆ ಪೇದೆ ಶಿಫ್ಟ್

    ಕಲಬುರಗಿ: ಕ್ವಾರಂಟೈನ್ ಕೇಂದ್ರವೊಂದರ ದುರವಸ್ಥೆ ಬಗ್ಗೆ ವಿಡಿಯೋ ಕ್ಲಿಪ್ ಮೂಲಕ ಗಮನಸೆಳೆದ ಪೇದೆಯ ಕೋರಿಕೆಗೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು, ಅವರನ್ನು ಬೇರೆಡೆಯ ಸುಸಜ್ಜಿತ ಕೇಂದ್ರಕ್ಕೆ ಕಳುಹಿಸಿಕೊಟ್ಟು ತಮ್ಮವರ ಪರ ಕಾಳಜಿ ಮೆರೆದಿದ್ದಾರೆ.
    ಇಂಥ ಪ್ರಸಂಗ ನಡೆದಿದ್ದು ನಗರದಲ್ಲಿ. ಕಾರ್ಯನಿಮಿತ್ತ ಕಳೆದ ವಾರ ಹೋಗಿದ್ದ ಈ ಪೇದೆಯನ್ನು ಕರೊನಾ ಶಂಕೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಏಷಿಯನ್ ಮಾಲ್ ಹತ್ತಿರದ ಕ್ವಾರಂಟೈನ್ ಕೇಂದ್ರಕ್ಕೆ ಆಂಬುಲೆನ್ಸ್ನಲ್ಲಿ ಕರೆತರಲಾಗಿತ್ತು. ಆದರೆ ಅಲ್ಲಿ ಎಲ್ಲಿ ಬೇಕೆಂದರಲ್ಲಿ ಉಗುಳಿದ್ದು, ಬೆಡ್ ಹೊಲಸೋ ಹೊಲಸು, ಕೋಣೆಯಲ್ಲಿದ್ದ ಕಸದ ರಾಶಿ ಕರೊನಾ ಇಲ್ಲದವರಿಗೂ ವೈರಸ್ ವಕ್ಕರಿಸುವಷ್ಟರ ಮಟ್ಟಿಗೆ ಹದಗೆಟ್ಟಿತ್ತು.
    ನರಕವನ್ನು ನೋಡಬೇಕೆಂದರೆ ಈ ಕೇಂದ್ರಕ್ಕೆ ಬರಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಕ್ವಾರಂಟೈನ್ ಕೇಂದ್ರದ ದುರವಸ್ಥೆ ಬಗ್ಗೆ ಈ ಪೇದೆಯು ಮೊಬೈಲ್ನಲ್ಲಿ ಸೆರೆಹಿಡಿದ ಚಿತ್ರಣವನ್ನು ಪೊಲೀಸ್ ಆಯುಕ್ತ ಎನ್.ಸತೀಶಕುಮಾರ್ ಮತ್ತು ಡಿಸಿಪಿ ಕಿಶೋರಬಾಬು ಅವರಿಗೆ ಕಳುಹಿಸಿಕೊಟ್ಟರು.
    ನಮ್ಮನ್ನು ಇರಿಸಿದ ಈ ಕೇಂದ್ರವನ್ನು ಒಮ್ಮೆ ನೋಡಿದರೆ ಸಾಕು, ಸೋಂಕು ಇರದಿದ್ದರೂ ಅಂಟುವುದು ಖಚಿತ. ಅಂಥ ದರಿದ್ರ ಮತ್ತು ನರಕಯಾತನೆ ವಾತಾವರಣವಿದೆ. ಎಲ್ಲಿ ಬೇಕಲ್ಲಿ ಗುಟ್ಖಾ ತಿಂದು ಉಗಿಯಲಾಗಿದೆ. ಊಟದ ಪ್ಲಾಸ್ಟಿಕ್ ತಟ್ಟೆಗಳನ್ನು ಬಿಸಾಕಲಾಗಿದೆ. ಬೆಡ್ಗಳು ಸರಿಯಾಗಿಲ್ಲ. ಕೋಣೆ ತುಂಬ ಕಸ. ಯಾರೊಬ್ಬರೂ ಸ್ವಚ್ಛಗೊಳಿಸಿಲ್ಲ. ಅವ್ಯವಸ್ಥೆ ಸುಧಾರಿಸಲು ಮುಂದಾಗಿಲ್ಲ, ಒಂದು ನಾಯಿಯೂ ಇರುವುದಿಲ್ಲ ಎಂಬೆಲ್ಲ ಆತಂಕಕಾರಿ ವಿಷಯವನ್ನು ಗಮನಕ್ಕೆ ತಂದರು.
    ಇಲ್ಲೇ ಇದ್ದರೆ ಕರೊನಾ ಬರುವುದು ಮತ್ತು ಸಾವು ಖಚಿತ. ಪೊಲೀಸರ ಸ್ಥಿತಿಯೇ ಹೀಗಾದರೆ ಸಾಮಾನ್ಯರೆ ಗತಿ ಏನು? ದಯವಿಟ್ಟು ನನ್ನನ್ನು ಬೇರೆ ಕಡೆ ಕರೆದೊಯ್ಯಿರಿ ಸರ್ ಎಂದು ಅಂಗಲಾಚಿದರು. ಖುದ್ದು ಕೋಣೆಗಳನ್ನು ಪರೀಕ್ಷಿಸಬೇಕೆಂದರೆ ನೀವು ಪಿಪಿಇ ಕಿಟ್ಗಳನ್ನು ಹಾಕಿಕೊಂಡು ಬರಬೇಕಾಗುತ್ತದೆ ಎಂದರು.
    ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯತತ್ಪರರಾದ ಆಯುಕ್ತ ಎನ್. ಸತೀಶಕುಮಾರ್ ಮತ್ತು ಡಿಸಿಪಿ ಕಿಶೋರಬಾಬು ಕಿರಿಯ ಅಧಿಕಾರಿಗಳಿಗೆ ಸೂಚಿಸಿ ಪೇದೆಯನ್ನು ಪೊಲೀಸರಿಗಾಗಿಯೇ ಸಿದ್ಧಪಡಿಸಿರುವ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಿಸಿದರು. ಅಲ್ಲದೆ ಈ ಕೇಂದ್ರದಲ್ಲಿ ಇರುವವರಿಗೆ ನೀರಿನ ಬಾಟಲ್, ಚಹಾ ಕಪ್, ಊಟದ ತಟ್ಟೆ, ಟೂತ್ ಬ್ರಶ್, ಟವಲ್, ಎನ್-95 ಮಾಸ್ಕ್, ಸ್ಯಾನಿಟೈಸರ್ ಸೇರಿ ಮೂಲಸೌಲಭ್ಯ ಸಹ ಕಲ್ಪಿಸಿಕೊಟ್ಟಿದ್ದಾರೆ.
    ಶುಭ್ರವಾದ ಕೋಣೆ, ಸ್ವಚ್ಛವಾಗಿರುವ ಬೆಡ್ ಸಹ ಹಾಕಲಾಗಿದೆ. ಶೌಚಗೃಹ ಫುಲ್ ಚಕಾಚಕ್ ಮಾಡಲಾಗಿದೆ. ಇಲ್ಲಿ ಸದಾಕಾಲ ಇದೇ ವಾತಾವರಣ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಪೊಲೀಸ್ ಸಿಬ್ಬಂದಿಗಾಗಿಯೇ ನಾವು ಇಲ್ಲಿ ಪ್ರತ್ಯೇಕವಾದ ಕ್ವಾರಂಟೈನ್ ಕೇಂದ್ರಗಳನ್ನು ತೆರೆದಿದ್ದೇವೆ. ಒಟ್ಟು 24 ಬ್ಲಾಕ್ಗಳಿದ್ದು, 48 ಕೋಣೆಗಳಿವೆ. ಈ ಕೋಣೆಗಳಲ್ಲಿ ಎಲ್ಲ ಅಗತ್ಯ ವಸ್ತುಗಳನ್ನು ಒದಗಿಸಿದ್ದೇವೆ. ನಮ್ಮ ಸಿಬ್ಬಂದಿ ಸುರಕ್ಷತೆಗೆ ಒತ್ತು ಕೊಟ್ಟಿದ್ದೇವೆ.
    | ಎನ್. ಸತೀಶಕುಮಾರ್ ನಗರ ಪೊಲೀಸ್ ಆಯುಕ್ತ

    ನನ್ನನ್ನು ಸಾವಿನ ದವಡೆಯಿಂದ ಪಾರು ಮಾಡಿದ ಪೊಲೀಸ್ ಆಯುಕ್ತರು, ಡಿಸಿಪಿ ಮತ್ತು ಎಲ್ಲ ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಧಿಕಾರಿಗಳ ಕಾಳಜಿಯಿಂದ ಬದುಕುವ ಭರವಸೆ ಮೂಡಿದೆ. ಪೊಲೀಸ್ ಕ್ವಾರಂಟೈನ್ ಕೇಂದ್ರ ಶುಭ್ರವಾಗಿದ್ದು, ಸರಿಯಾದ ಸಮಯಕ್ಕೆ ಊಟ, ತಿಂಡಿ ಕೊಡಲಾಗುತ್ತಿದೆ.
    | ಕರೊನಾ ಶಂಕಿತ ಪೊಲೀಸ್ ಪೇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts