More

    ಸುವಾಸನೆ ಕಳೆದುಕೊಂಡ ಮಲ್ಲಿಗೆ

    ಕಾರವಾರ/ಭಟ್ಕಳ: ಜನತಾ ಕರ್ಫ್ಯೂ ಘೊಷಣೆಯಿಂದ ಭಟ್ಕಳದ ಮಲ್ಲಿಗೆ ವ್ಯಾಪಾರ ಬಂದಾಗಿದ್ದು, ಘಮ ಸೂಸುವ ಹೂವುಗಳು ಗಿಡದಲ್ಲಿಯೇ ಬಾಡುತ್ತಿವೆ. ಇದರಿಂದ ಬೆಳೆಗಾರರು, ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ.

    ಭಟ್ಕಳದಲ್ಲಿ ಬೆಳೆಯುವ ಸುವಾಸನೆಭರಿತ ಮಲ್ಲಿಗೆಗೆ ವಿಶೇಷ ಬೇಡಿಕೆ ಹಾಗೂ ಬೆಲೆ ಇದೆ. ಇಲ್ಲಿನ ಸುಮಾರು 10 ಸಾವಿರ ಕುಟುಂಬ ಗಳು ಸಣ್ಣ ಸಣ್ಣ ಜಾಗದಲ್ಲಿ ಬೆಳೆಯುವ ಹೂವನ್ನು ಮಾಲೆ ಕಟ್ಟಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ರವಾನಿಸುತ್ತಾರೆ. ಸದ್ಯ ಜನತಾ ಕರ್ಫ್ಯೂ ಕಾರಣ ಮಲ್ಲಿಗೆ ವ್ಯಾಪಾರ ಸಂಪೂರ್ಣ ಬಂದ್ ಆಗಿದೆ.

    ಮಾರ್ಚ್​ನಿಂದ ಜೂನ್​ವರೆಗೆ ಈ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಲ್ಲಿಗೆ ಬೆಳೆಯುತ್ತದೆ. ಮದುವೆ ಸಮಾರಂಭಗಳು, ಜಾತ್ರೆಗಳು, ಬಂಡಿಹಬ್ಬಗಳು ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಉತ್ತಮ ಬೆಲೆಯೂ ಸಿಗುತ್ತದೆ. ಕೇವಲ ಭಟ್ಕಳ ಒಂದೇ ತಾಲೂಕಿನಿಂದ ಬೇಸಿಗೆ ಅವಧಿಯಲ್ಲಿ 1 ಲಕ್ಷ ಮೊಳ ಮಲ್ಲಿಗೆ ರವಾನೆ ಯಾಗುತ್ತದೆ. ಮಂಗಳೂರು, ಉಡುಪಿ, ಕಾರ್ಕಳ, ಬೆಳ್ತಂಗಡಿ ಭಾಗದ ಮಾರು ಕಟ್ಟೆಗೆ ಮಲ್ಲಿಗೆ ಮಾರಾಟವಾಗುತ್ತದೆ. ಅಷ್ಟೇ ಏಕೆ ಇಲ್ಲಿಂದ ದುಬೈ, ಮುಂಬೈಗೂ ರವಾನೆಯಾಗುತ್ತಿತ್ತು. ಬೇಸಿಗೆ ಕಾಲದಲ್ಲಿ ರೈತರಿಗೆ ಪ್ರತಿ ಮೊಳಕ್ಕೆ 80 ರೂಪಾಯಿಗಳವರೆಗೂ ಬೆಲೆ ಸಿಗುತ್ತಿತ್ತು. ಆದರೆ, ಈ ಬಾರಿ ಜನತಾ ಕರ್ಫ್ಯೂನಿಂದಾಗಿ ಮದುವೆ, ಧಾರ್ವಿುಕ ಕಾರ್ಯಕ್ರಮ ಇತರ ಸಮಾರಂಭಗಳು ರದ್ದಾಗಿದ್ದರಿಂದ ಕಳೆದ ವಾರದವರೆಗೆ ಅತಿ ಕಡಿಮೆ ಬೆಲೆಯಲ್ಲಿ ಅಂದರೆ ಮೊಳಕ್ಕೆ 7 ರಿಂದ 8 ರೂ. ಮಾತ್ರ ಬೆಲೆಯಲ್ಲಿ ಮಲ್ಲಿಗೆ ಮಾರಾಟವಾಗುತ್ತಿತ್ತು. ಈಗ ವ್ಯಾಪಾರ ಸಂಪೂರ್ಣ ಬಂದಾಗಿ ಹೋಗಿದೆ. ಹಾಗಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.

    ಇನ್ನಷ್ಟು ಕುಟುಂಬಗಳು: ಭಟ್ಕಳದ ಮಲ್ಲಿಗೆ ಬೆಳೆಗಾರರಿಂದ ಅವುಗಳನ್ನು ಕೊಂಡು ಸ್ಥಳೀಯವಾಗಿ ಮಾರಾಟ ಮಾಡುವ 30 ವ್ಯಾಪಾರಸ್ಥರಿದ್ದಾರೆ. ಹೊರಗಿನ ಮಾರುಕಟ್ಟೆಗಳಿಗೆ ತಲುಪಿಸುವ 1500 ರಷ್ಟು ಏಜೆಂಟರಿದ್ದಾರೆ. ಹೂವು ಕೊಯ್ಯುವವರು, ಕಟ್ಟುವ ಸಹಾಯಕರು ಎಲ್ಲ ಸೇರಿ ಸಾವಿರಾರು ಕುಟುಂಬಗಳೂ ಮಲ್ಲಿಗೆ ವ್ಯವಹಾರವನ್ನೇ ನಂಬಿ ಜೀವನ ನಡೆಸುತ್ತವೆ. ವರ್ಷವಿಡೀ ಮಲ್ಲಿಗೆ ಬೆಳೆ ಬರುತ್ತದೆ. ಮಳೆಗಾಲದಲ್ಲಿ ಇಳುವರಿ ಕೊಂಚ ಕಡಿಮೆಯಾಗುತ್ತದೆ. ಸೆಪ್ಟೆಂಬರ್ ಹೊತ್ತಿಗೆ ಮತ್ತೆ ವ್ಯವಹಾರ ಚಿಗುರಿಕೊಳ್ಳುತ್ತದೆ. ಪ್ರತಿ ದಿನ 50 ಸಾವಿರ ಮೊಳಕ್ಕೂ ಹೆಚ್ಚು ಮಲ್ಲಿಗೆ ಮಾರುಕಟ್ಟೆಗೆ ರವಾನೆಯಾಗುತ್ತದೆ. ಕೆಲ ವರ್ಷ ನವರಾತ್ರಿ ಹೊತ್ತಿಗೆ ಪ್ರತಿ ಮೊಳಕ್ಕೆ 150 ರೂಪಾಯಿಗಳವರೆಗೂ ಬೆಲೆ ಬಂದಿದ್ದಿದೆ. ಆದರೆ, ಈ ಸೀಜನ್​ನಲ್ಲೇ ದುಡಿಮೆ ಇಲ್ಲದಂತಾಗಿದೆ.

    ಪರಿಹಾರವಿಲ್ಲ: ಕಳೆದ ವರ್ಷ ಮಾರ್ಚ್​ನಲ್ಲಿ ಲಾಕ್​ಡೌನ್ ಘೊಷಣೆಯಾದಾಗ ಮಲ್ಲಿಗೆ ಬೆಳೆ ಕೊಳ್ಳುವವರಿಲ್ಲದೇ ಗಿಡದಲ್ಲೇ ಸಂಪೂರ್ಣ ನಾಶವಾಗಿತ್ತು. ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಸರ್ಕಾರ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 15 ಸಾವಿರ ರೂ. ಪರಿಹಾರ ಘೊಷಿಸಿತು. ಆದರೆ, ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಗೆ ಮಾತ್ರ ಪರಿಹಾರ ನೀಡಬೇಕು ಎಂದು ಷರತ್ತು ಹೇರಿದ್ದರಿಂದ ಭಟ್ಕಳದ ಹೆಚ್ಚಿನ ಹೂವಿನ ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಹೆಚ್ಚಿನವರು ಅತಿ ಸಣ್ಣ ರೈತರಾಗಿದ್ದರಿಂದ ಅವರಿಗೆ 1 ಸಾವಿರ ರೂಪಾಯಿಯೂ ಪರಿಹಾರ ಸಿಕ್ಕಿಲ್ಲ. ಈ ವರ್ಷ ಇನ್ನೇನು ವ್ಯವಹಾರ ಚೇತರಿಸಿಕೊಂಡಿತು ಎನ್ನುವಾಗ ಜನತಾ ಕರ್ಫ್ಯೂ ಘೊಷಣೆ ಆಗಿರುವುದು ಮತ್ತೆ ಮಲ್ಲಿಗೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

    ಬೆಲೆ ಕುಸಿತದಿಂದ ಮಲ್ಲಿಗೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕಳೆದ ಬಾರಿ ಸರ್ಕಾರ ಪರಿಹಾರ ಘೊಷಿಸಿದರೂ ಹಾಕಿದ ಷರತ್ತಿನಿಂದ ಹೆಚ್ಚಿನ ಬೆಳೆಗಾರರಿಗೆ ಅನುಕೂಲವಾಗಿಲ್ಲ. ಈ ಬಾರಿ ಸರ್ಕಾರ ಮಲ್ಲಿಗೆ ಬೆಳೆಗಾರರು ಹಾಗೂ ವ್ಯಾಪಾರಸ್ಥರಿಗೆ ಪರಿಹಾರ ಧನ ಘೊಷಿಸಬೇಕು.

    | ಸಾತಪ್ಪ ನಾಯ್ಕ

    ಭಟ್ಕಳ ಮಲ್ಲಿಗೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

    ಕಳೆದ ವರ್ಷ ಭಟ್ಕಳದ ಕೆಲವು ಮಲ್ಲಿಗೆ ಬೆಳೆಗಾರರಿಗೆ ಲಾಕ್​ಡೌನ್ ಘೊಷಣೆ ನಿಮಿತ್ತ ಪರಿಹಾರ ನೀಡಲಾಗಿದೆ. ಈ ಬಾರಿ ಮದುವೆ ಹಾಗೂ ಇತರ ಸಮಾರಂಭ ರದ್ದು ಮಾಡಿದ್ದರಿಂದ ಬೆಲೆ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಪರಿಹಾರ ನೀಡುವ ವಿಚಾರ ಸರ್ಕಾರದ ಮಟ್ಟದಲ್ಲಿ ತೀರ್ವನವಾಗಬೇಕು.

    | ಬಿ.ಪಿ. ಸತೀಶ

    ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts