More

    ಮೆತ್ತಗಾದ ಭತ್ತ ಬೆಳೆಗಾರ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ಒಂದೆಡೆ ಮಳೆ, ಇನ್ನೊಂದೆಡೆ ದರ ಕುಸಿತದಿಂದಾಗಿ ಭತ್ತ ಬೆಳೆಗಾರರು ಮೆತ್ತಗಾಗಿದ್ದಾರೆ.
    ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತವನ್ನು ಸಂರಕ್ಷಿಸಿಟ್ಟುಕೊಳ್ಳಲಾಗದೆ ಕೆಲ ರೈತರು ಪರದಾಡುತ್ತಿದ್ದಾರೆ.
    ಕಳೆದ ತಿಂಗಳು ಪ್ರತಿ ಕ್ವಿಂಟಾಲ್ ಭತ್ತಕ್ಕೆ 2 ಸಾವಿರ ರೂಪಾಯಿ ದರವಿತ್ತು. ಆದರೀಗ ವ್ಯಾಪಾರಸ್ಥರು ಪ್ರತಿ ಕ್ವಿಂಟಾಲ್​ಗೆ 1600 ರೂಪಾಯಿಯಂತೆ ಖರೀದಿಸುತ್ತಿದ್ದು, ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಒಂದು ಎಕರೆ ಭತ್ತ ಬೆಳೆಯಲು ಅಂದಾಜು 35 ಸಾವಿರ ರೂಪಾಯಿವರೆಗೂ ವ್ಯಯವಾಗುತ್ತದೆ. ಎಕರೆಗೆ ಅಂದಾಜು 25 ಕ್ವಿಂಟಾಲ್ ಭತ್ತ ಬರುತ್ತದೆ. ಇದನ್ನು 1600 ರೂಪಾಯಿಗೆ ಕ್ವಿಂಟಾಲ್​ನಂತೆ ಮಾರಾಟ ಮಾಡಿದರೆ ಲಾಭವಾಗುವುದಿಲ್ಲ. ಕನಿಷ್ಠ 2 ರಿಂದ 2500 ರೂಪಾಯಿಗೆ ಕ್ವಿಂಟಾಲ್​ನಂತೆ ಮಾರಾಟ ಮಾಡಿದರೆ ಮಾತ್ರ ಅನುಕೂಲವಾಗುತ್ತದೆ ಎಂಬುದು ಭತ್ತ ಬೆಳೆಗಾರರ ಅಭಿಪ್ರಾಯ.
    ರಾಣೆಬೆನ್ನೂರ ಭಾಗದಲ್ಲಿ ಆರ್​ಎನ್​ಆರ್, ಜ್ಯೋತಿ, ಜಯಶ್ರೀ, ಸೋನಾ ಮಸೂರಿ, ಕಾವೇರಿ ಸೇರಿ ವಿವಿಧ ಬಗೆಯ ಭತ್ತ ಬೆಳೆಯಲಾಗಿದೆ. ಸದ್ಯ ಫಸಲು ಕಟಾವಿಗೆ ಬಂದಿದೆ. ಕೆಲವರು ಕಟಾವು ಮಾಡಿದ್ದಾರೆ. ಆದರೆ, ಮಳೆಯಿಂದಾಗಿ ಭತ್ತ ಒಣಗಿಸುವುದು ಸವಾಲಿನ ಕೆಲಸವಾಗಿದೆ. ಅಲ್ಲದೆ, ಜನತಾ ಕರ್ಫ್ಯೂನಿಂದಾಗಿ ಖರೀದಿದಾರರು ಕಡಿಮೆಯಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಸ್ಥರು ತಮ್ಮಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಕಡಿಮೆ ಬೆಲೆಗೆ ಭತ್ತ ಖರೀದಿಸಲು ಮುಂದಾಗಿದ್ದಾರೆ ಎಂಬುದು ರೈತರ ಅಳಲು. ಸರ್ಕಾರ ಕೂಡಲೆ ಖರೀದಿ ಕೇಂದ್ರ ತೆರೆದು ಪ್ರತಿ ಕ್ವಿಂಟಾಲ್ ಭತ್ತಕ್ಕೆ 2500 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ಭತ್ತ ಬೆಳೆಗಾರರ ಆಗ್ರಹವಾಗಿದೆ.
    ಕಳೆದ ವರ್ಷ ನಷ್ಟ: ಕಳೆದ ವರ್ಷ ಕೇಂದ್ರ ಸರ್ಕಾರ ಒಂದು ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1815 ರೂಪಾಯಿ, ‘ಎ’ ಗ್ರೇಡ್ ಭತ್ತಕ್ಕೆ 1835 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಆರಂಭಿಸಿತ್ತು. ಆಗ ವ್ಯಾಪಾರಸ್ಥರು ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತ 25ರಿಂದ 50 ರೂಪಾಯಿ ಹೆಚ್ಚಿಗೆ ನೀಡಿ ಭತ್ತ ಖರೀದಿಸಿದ್ದರು. ಕೇಂದ್ರ ಸರ್ಕಾರವೇ ಪ್ರತಿ ಕ್ವಿಂಟಾಲ್​ಗೆ 2 ಸಾವಿರ ರೂ. ನಿಗದಿಪಡಿಸಿದ್ದರೆ ರೈತರಿಗೆ ಲಾಭವಾಗುತ್ತಿತ್ತು. ಹೀಗಾಗಿ, ಕಳೆದ ವರ್ಷವೂ ರೈತರು ನಷ್ಟ ಅನುಭವಿಸಿದ್ದರು. ಪ್ರಸಕ್ತ ವರ್ಷ ಸರ್ಕಾರ ಕನಿಷ್ಠ 2500 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

    ಸಾಲ ಮಾಡಿ ಭತ್ತ ಬೆಳೆದಿದ್ದೇವೆ. ವರ್ತಕರು ತಮಗೆ ಅನುಕೂಲವಾದ ದರಕ್ಕೆ ಖರೀದಿಸುತ್ತಿದ್ದಾರೆ. ಬೆಲೆ ಬರುವವರೆಗೂ ಕಾಯುವ ಸ್ಥಿತಿಯಲ್ಲಿ ನಾವಿಲ್ಲ. ಈಗಾಗಲೇ ಕರೊನಾದಿಂದ ಎಲ್ಲ ಬೆಲೆಗಳು ಗಗನಕ್ಕೆ ಏರಿವೆ. ರೈತರಿಗೆ ಮಾತ್ರ ದರ ಏರಿಕೆಯ ಲಾಭ ಸಿಗುತ್ತಿಲ್ಲ. ಸರ್ಕಾರ ಭತ್ತ ಬೆಳೆಗಾರರ ಬೆಂಬಲಕ್ಕೆ ಬರಬೇಕು.
    | ಬಸವರಾಜ ಎಚ್., ಭತ್ತ ಬೆಳೆಗಾರ

    ಭತ್ತ ಖರೀದಿಗೆ ಸರ್ಕಾರದಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ಈ ವರ್ಷ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
    | ಪರಮೇಶ ನಾಯ್ಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts