More

    ಸುರತ್ಕಲ್​ನಿಂದ ಬಂದಿದ್ದಾರೆ 13 ಕಾರ್ವಿುಕರು

    ಲಕ್ಷ್ಮೇಶ್ವರ: ಸುರತ್ಕಲ್​ನಿಂದ ಗ್ಯಾಸ್ ಟ್ಯಾಂಕರ್ ಮೂಲಕ ಪಟ್ಟಣಕ್ಕೆ ಆಗಮಿಸಿದ 13 ಕೂಲಿ ಕಾರ್ವಿುಕರನ್ನು ಪತ್ತೆ ಮಾಡಿದ ತಾಲೂಕಾಡಳಿತ ಸೋಮವಾರ ಕ್ವಾರಂಟೈನ್​ನಲ್ಲಿರಿಸಿದೆ.

    ಲಾಕ್​ಡೌನ್ ಹಿನ್ನೆಲೆಯಲ್ಲಿ ತಾಲೂಕಿನ ಬಟ್ಟೂರ ಗ್ರಾಮದ 10 ಕೂಲಿಕಾರ್ವಿುಕರು ಮಂಗಳೂರಿನ ಸುರತ್ಕಲ್​ನಲ್ಲಿ ಲಾಕ್ ಆಗಿದ್ದಾರೆ. ಭಾನುವಾರ ಅಲ್ಲಿಂದ ನಡೆದುಕೊಂಡೇ ಬರುತ್ತಿದ್ದ ಸಂದರ್ಭದಲ್ಲಿ ಬಂದ ಗ್ಯಾಸ್ ಟ್ಯಾಂಕರ್ ತಡೆದು ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಸಮೀಪದ ಜಾಲವಾಡಗಿ ಗ್ರಾಮದ ಟ್ಯಾಂಕರ್​ನ ಚಾಲಕ/ ಕ್ಲೀನರ್ ಮಾನವೀಯತೆಯ ದೃಷ್ಟಿಯಿಂದ ಹೇಗೋ ಮಾಡಿ ಟ್ಯಾಂಕರ್​ನಲ್ಲಿ ಕರೆ ತಂದಿದ್ದಾರೆ.

    ಸೋಮವಾರ ಬೆಳಗ್ಗೆ ಪಟ್ಟಣದ ಹೊರವಲಯದಲ್ಲಿ ಟ್ಯಾಂಕರ್​ನಿಂದ ಇಳಿದವರನ್ನು ಗಮನಿಸಿದ ಮಂಜಲಾಪುರ ಗ್ರಾಮಸ್ಥರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೆ, ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಟ್ಯಾಂಕರ್​ನ ಚಾಲಕ/ ಕ್ಲೀನರ್ ಸೇರಿ ಎಲ್ಲರನ್ನೂ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೊಳಪಡಿಸಿದ್ದಾರೆ. ನಂತರ ತಹಸೀಲ್ದಾರ್ ಸೂಚನೆ ಮೇರೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ನಲ್ಲಿರಿಸಲಾಗಿದೆ.

    ಈ ಕುರಿತು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಪ್ರತಿಕ್ರಿಯಿಸಿ, ‘ಸುರತ್ಕಲ್​ನಿಂದ ಬಂದ ಮಗು ಸೇರಿ ಬಟ್ಟೂರ ಗ್ರಾಮದ 11 ಜನ ಕೂಲಿಕಾರ್ವಿುಕರು, ಜಾಲವಾಡಗಿಯ ಲಾರಿ ಚಾಲಕ/ ಕ್ಲೀನರ್ ಮತ್ತು ಓರ್ವ ಶಿಶುವಿನಹಾಳದ ವ್ಯಕ್ತಿ ಒಟ್ಟು 13 ಜನರ ಆರೋಗ್ಯ ಪರೀಕ್ಷೆ ನಡೆಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಕರೊನಾ ಸೋಂಕಿನ ಲಕ್ಷಣಗಳಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್​ನಲ್ಲಿರಿಸಿ ಅವರಿಗೆ ಉಟೋಪಚಾರದ ವ್ಯವಸ್ಥೆ ಮಾಡಿ, ತಿಳಿವಳಿಕೆ ನೀಡಲಾಗಿದೆ ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts