More

    ಸುಚಿತ್ರಾ ಕುಟುಂಬಕ್ಕೆ ಪರಿಹಾರ ನೀಡಲು ಪಟ್ಟು

    ಚಿತ್ರದುರ್ಗ: ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಸುಚಿತ್ರಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು. ಬಸ್ ಸೌಕರ್ಯ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ವಿಭಾಗದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

    ವಿಜಾಪುರ ಗೊಲ್ಲರಹಟ್ಟಿಯ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಬಸ್‌ಗಾಗಿ ವಿದ್ಯಾರ್ಥಿನಿ ಕಾಯುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಮಾಡಿದ್ದರೆ, ಈ ಅನಾಹುತ ಸಂಭವಿಸುತ್ತಿರಲಿಲ್ಲ. ಮತ್ತೊಂದು ಬಸ್‌ಗೆ ಕೈಸನ್ನೆ ಮಾಡುವ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾಳೆ. ಆದ್ದರಿಂದ ಪರಿಹಾರ ನೀಡಲೇಬೇಕು ಎಂದು ಆಗ್ರಹಿಸಿದರು.

    ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದೆ, ಜಿಲ್ಲೆಯ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಕಬ್ಬಿಗೆರೆ, ಅಡವಿ ಗೊಲ್ಲರಹಳ್ಳಿ, ಜಾಲಿಕಟ್ಟೆ, ಈರಜ್ಜನಹಟ್ಟಿ, ಸೊಲ್ಲಾಪುರ, ಹುಳಿಯಾರು ಸೇರಿ ಹಲವು ಗ್ರಾಮಗಳಿಂದ ನಗರ-ಪಟ್ಟಣ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುವ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಅವರ ಪರಿಸ್ಥಿತಿ ಹೇಳತೀರದಾಗಿದೆ. ಈ ಕುರಿತು ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು. ಸಮಯಕ್ಕೆ ಸರಿಯಾಗಿ ಸಂಚರಿಸಲು ಕ್ರಮವಹಿಸಬೇಕು. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಿಂತಲೂ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡಲು ಚಾಲಕರು, ನಿರ್ವಾಹಕರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

    ಪದಾಧಿಕಾರಿಗಳಾದ ಕನಕರಾಜ್, ಸಿದ್ದೇಶ್ ಯಾದವ್, ಸುದರ್ಶನ್, ಚೈತ್ರಾ, ಚಂದನಾ, ಚಿತ್ರಸ್ವಾಮಿ, ಕಾರ್ಯಕರ್ತರಾದ ಗೌರಿಶಂಕರ, ಸುದೀಪ್, ಮಧು, ಕಾಟಲಿಂಗ, ಮನೋಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts