More

    ಸುಂದರ ಶಬ್ದ ಬಳಸುವವರೇ ಶ್ರೀಮಂತರು

    ನಿಪ್ಪಾಣಿ: ಸತ್ ಎಂಬುವುದು ಸುಂದರ ಹಾಗೂ ಅರ್ಥಪೂರ್ಣ ಶಬ್ದವಾಗಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅದಕ್ಕೆ ವಿಶೇಷ ಸ್ಥಾನವಿದೆ. ಶಬ್ದಗಳು ಬಹಳಷ್ಟು ಪ್ರಭಾವ ಬೀರುತ್ತವೆ. ಶಬ್ದಗಳಿಂದ ನಾವು ಭಾವನೆಗಳನ್ನು ವ್ಯಕ್ತ ಮಾಡಬಹುದು. ಶಬ್ದವಿಲ್ಲದಿದ್ದಲ್ಲಿ ನಮ್ಮ ಭಾವನೆಗಳು, ವಿಚಾರಗಳನ್ನು ಇನ್ನೊಬ್ಬರಿಗೆ ತಲುಪಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಜ್ಞಾನಾಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ನಗರದ ವಿರೂಪಾಕ್ಷಲಿಂಗ ಸಮಾಧಿಮಠದಲ್ಲಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಆಶೀರ್ವಚನ ನೀಡಿದ ಅವರು, ಒಂದೊಂದು ಶಬ್ದದಲ್ಲಿ ಬಹಳಷ್ಟು ಶಕ್ತಿ ಇರುತ್ತದೆ. ಒಂದು ಸಣ್ಣ ಮಲ್ಲಿಗೆ ಹೂವು ಆಹ್ಲಾದಕರ ವಾತಾವರಣ ನೀಡುತ್ತದೆ. ಅದರ ಸುಗಂಧ, ಸುವಾಸನೆ ಪರಿಸರವನ್ನು ಮಧುರಗೊಳಿಸುತ್ತದೆ. ಹಾಗೆಯೇ ಒಂದೊಂದು ಶಬ್ದಗಳು ಪುಷ್ಪಗಳಿದ್ದಂತೆ. ಶಬ್ದ ಅದ್ಬುತವಾದ ಕಾರ್ಯ ಮಾಡುತ್ತದೆ. ಬಲ್ಲವರು ಹೇಳಿದಂತೆ ಶಬ್ದಗಳು ದೇವರಂತೆ. ಶಬ್ದಗಳ ಪ್ರವಾಹ ವಿಶ್ವದಲ್ಲಿ ಜ್ಞಾನವನ್ನು ಹರವುತ್ತದೆ ಎಂದರು.

    ಶಬ್ದವನ್ನು ನಾವು ಗೌರವಿಸಬೇಕು. ಜೀವನದಲ್ಲಿ ಶಬ್ದವನ್ನು ಆರಾಧಿಸಬೇಕು. ಶಬ್ದದಲ್ಲಿಯೇ ಸತ್ಯವನ್ನು ಕಾಣಬೇಕು. ಯಾವುದನ್ನು ಹಣದಿಂದ, ಉಪಾಯದಿಂದ ಮಾಡಲು ಸಾಧ್ಯವಿಲ್ಲವೋ ಅದನ್ನು ಒಂದು ಶಬ್ದ ಮಾಡುತ್ತದೆ. ಸುಂದರವಾಗಿ ಶಬ್ದಗಳನ್ನು ಬಳಸುವವರೇ ಶ್ರೀಮಂತರು. ಮನುಷ್ಯನ ಇಂದಿನ ಬೆಳವಣಿಗೆಗೆ ಶಬ್ದಗಳೆ ಕಾರಣ. ಒಂದು ಶಬ್ದ ಆನಂದ ಕೊಟ್ಟರೆ ಇನ್ನೊಂದು ಶಬ್ದ ದುಃಖ ಕೊಡುತ್ತದೆ. ಒಂದು ಶಬ್ದ ಬೆಲೆಯನ್ನು ಹೆಚ್ಚಿಸಿದರೆ ಇನ್ನೊಂದು ಶಬ್ದ ಬೆಲೆಯನ್ನು ಕಡಿಮೆ ಮಾಡುತ್ತದೆ. ಮಾತು ಬಹಳ ಸುಂದರವಾಗಿರಬೇಕು. ಜಗತ್ತಿನಲ್ಲಿ ಮಧುರ ಶಬ್ದಗಳನ್ನು ಕೇಳುತ್ತಿರಬೇಕು. ಆಗ ಶಬ್ದಬ್ರಹ್ಮ, ಜಗತ್ತು ಸ್ವರ್ಗವಾಗುತ್ತದೆ. ಅದಕ್ಕೆ ಭಾರತೀಯರು ಎದ್ದ ತಕ್ಷಣ ಸುಂದರವಾದ ಮಂತ್ರಗಳನ್ನು ನುಡಿಯುತ್ತಾರೆ. ವಸ್ತುಗಳಿಂದ ಮನೆ ಕಟ್ಟಿದಂತೆ ಮನೆಯೊಳಗಿನ ಜನ ಶಬ್ದಗಳಿಂದ ಸ್ವರ್ಗದ ಮನೆ ನಿರ್ಮಿಸಬೇಕು ಎಂದು ಹೇಳಿದರು.

    ಪರಿಸರದಲ್ಲಿ ಎಲ್ಲ ತರಹದ ಶಬ್ದಗಳಿರುತ್ತವೆ. ಎಲ್ಲ ಶಬ್ದಗಳನ್ನು ತಲೆಯಲ್ಲಿ ಹಾಕಿಕೊಳ್ಳದೆ, ಒಳ್ಳೆಯ ಶಬ್ದಗಳನ್ನು ತೆಗೆದುಕೊಳ್ಳಬೇಕು. ಜಗತ್ತಿನಲ್ಲಿ ಒಳ್ಳೆಯ ಶಬ್ದಗಳೂ ಇರುತ್ತವೆ, ಹಾಗೆಯೇ ಕೆಟ್ಟ ಶಬ್ದಗಳೂ ಇರುತ್ತವೆ. ಕೆಟ್ಟ ಶಬ್ದ ನುಡಿದಲ್ಲಿ ಅದನ್ನು ಅಲ್ಲಿಯೇ ಬಿಟ್ಟುಬಿಡಬೇಕು. ಎರಡು ಕಣ್ಣುಗಳಿಂದ ನೋಡಬೇಕು, ಎರಡು ಕಿವಿಗಳಿಂದ ನೋಡಬೇಕು, ಆದರೆ, ಒಂದೆ ಬಾಯಿಯಿಂದ ಹೇಳಬೇಕು. ಎರಡು ಕೈಗಳಿಂದ ದುಡಿಯಬೇಕು, ಆದರೆ ಒಂದೆ ಕೈಯಿಂದ ತಿನ್ನಬೇಕು, ಇದೆ ಧರ್ಮ. ಇಂತಹ ಧರ್ಮವನ್ನು ಸಂತರು, ಜ್ಞಾನಿಗಳು, ಶರಣರು ಈ ಜಗತ್ತಿನಲ್ಲಿ ಹರವಿ ಹೋದರು ಮಾತೆಂಬುದು ಜ್ಯೋತಿರ್ಲಿಂಗ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts