More

    ಸುಂದರ ಜೀವನ, ಸಾಧನೆಗೆ ಬೇಕು ಸ್ವಚ್ಛ ಮನಸ್ಸು

    ಈ ಭಾರತ ದೇಶದಲ್ಲಿ ಋಷಿಮುನಿಗಳು ಸಾವಿರಾರು ವರ್ಷಗಳಿಂದ ಮನಸಿನ ಬಗ್ಗೆ ಬಹಳಷ್ಟು ಸಂಶೋಧನೆ ಮಾಡಿದರು.

    ದೇಹಕ್ಕೆ ನಾವು ಮಹತ್ವ ಕೊಡುತ್ತೇವೆ. ದೇಹದ ಒಳಗಿರುವ ಮನಸಿಗೂ ಮಹತ್ವ ಕೊಡಬೇಕು. ಒಳ್ಳೆಯದನ್ನು ನೋಡಬೇಕು, ಕೇಳಬೇಕು. ಆಗ ನಮ್ಮ ಜೀವನ ಸುಂದರ ರೂಪ ತಾಳುತ್ತದೆ. ನಮ್ಮ ಅರಿವು ನಮಗೆ ಆಗಬೇಕು. ಆಕಾಶದಲ್ಲಿ ಹಾರುವ ಪಕ್ಷಿಗಳ ತರಹ ಹಾರುತ್ತಿರಬೇಕು.

    ಜೀವನ ಸುಂದರಗೊಳಿಸುವುದು ಮನಸು. ದೇಹದ ಚಿತ್ರ ತೆಗೆಯಬಹುದು. ಮುಟ್ಟಬಹುದು. ಆದರೆ, ಮನಸನ್ನು ಮುಟ್ಟಲು, ಚಿತ್ರಿಸಲು ಆಗುವುದಿಲ್ಲ. ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಮನಸೇ ಕಾರಣ.

    ಹೊಟ್ಟೆಕಿಚ್ಚು ಬೆಳೆಸಿಕೊಂಡರೆ ಜೀವನ ಮುಗೀತು. ಪಕ್ಕದ ಮನೆಯವರ ಶ್ರೀಮಂತಿಕೆ ನೋಡಿ ಹೊಟ್ಟೆಕಿಚ್ಚು ಪಡುವ ಗುಣವಿದ್ದರೆ, ಜಗತ್ತನ್ನು ಹಾಳು ಮಾಡುವ ಭಾವನೆ ಇದ್ದರೆ ಜೀವನ ಸುಂದರವಾಗಲು ಸಾಧ್ಯವಿಲ್ಲ.

    ಹೊಟ್ಟೆಕಿಚ್ಚಿನಿಂದ ರಾಮಾಯಣ, ಮಹಾಭಾರತ ನಡೆಯಿತು. ವಾಲ್ಮೀಕಿ ಮಹರ್ಷಿಗಳು ಹೊಟ್ಟೆಕಿಚ್ಚಿನ ಬಗ್ಗೆ ಬರೆದಿದ್ದಾರೆ.

    ದೇವಲೋಕದಲ್ಲಿ ಎರಡು ದೇವರುಗಳು. ಆ ಎರಡೂ ದೇವರಿಗೆ 5 ಮುಖಗಳು. ಅದರಲ್ಲಿ ಒಬ್ಬ ದೇವರಿಗೆ ಹೊಟ್ಟೆಕಿಚ್ಚು ಶುರುವಾಯಿತು. ನನಗೆ ಸಿಗುವ ಬೆಲೆ ಬೇರೆಯವರಿಗೆ ಸಿಗಬಾರದು ಎಂಬ ಭಾವ ಬಂತು. ನನಗೆ ಮಾತ್ರ 5 ತಲೆ ಇರಬೇಕು. ಬೇರೆಯವರಿಗೆ ಇರಬಾರದೆಂದು ಇನ್ನೊಬ್ಬ 5 ತಲೆಯ ದೇವರ ಪಕ್ಕ ಕುಳಿತಾಗ ಒಂದು ತಲೆಯನ್ನು ಚಿವುಟಿದ…

    ಎಂಥ ಮಾತ್ಸರ್ಯ ನೋಡಿ. ನನಗೂ ಇದೆ, ಅವನಿಗೂ ಇದೆ ಎಂಬ ಭಾವನೆ ಇದ್ದಿದ್ದರೆ ಏನಾಗುತ್ತಿತ್ತು ಹೇಳಿ.

    ಸಾಮಾನ್ಯ ಮನುಷ್ಯ ಅಸಾಮಾನ್ಯ ಆಗುವುದು ಈ ಮನಸಿನಿಂದ. ಉದಾಹರಣೆಗೆ- ಕವಿ ಕಾಳಿದಾಸರ ಹೆಂಡತಿ ನೀನು ದಡ್ಡ, ವಿದ್ಯಾವಂತ ಆಗಿ ಬಾ ಎಂದು ಮನೆಯಿಂದ ಹೊರಗೆ ಹಾಕಿದಳು. ದಾಸರು ಒಪ್ಪಿದರು. ಕಲಿತು ಬರುತ್ತೇನೆ ಎಂದು ಹೊರಟರು.

    ಸೃಷ್ಟಿಕರ್ತ ರಚಿಸಿದ ಕಾಡು ನಾಡುಗಳಲ್ಲಿ ಹೊರಟರು. ಪ್ರಕೃತಿಯ ಜೊತೆ ಬೆರೆತರು. ಮನಸು ಸ್ವಚ್ಛ ಇಟ್ಟುಕೊಂಡು ಹಾಡುತ್ತ ಹೊರಟರು. ಪ್ರಕೃತಿಯನ್ನು ಅನುಭವಿಸಿದರು. ಪ್ರಕೃತಿ ಸೌಂದರ್ಯ ನೋಡಿ ಅವರ ಕಣ್ಣು ಅರಳಿತು. ಮನಸು ಸ್ವಚ್ಛ ಆಗಿತ್ತು. ಮುಂದೆ ಅವರು ಮಾತಾಡಿದ್ದೆಲ್ಲ ಕಾವ್ಯ ಆಗಲು ಪ್ರಾರಂಭವಾಯಿತು. ಅದೇ ವ್ಯಕ್ತಿ ಮನೆಗೆ ಬಂದಾಗ ಕವಿರತ್ನ ಕಾಳಿದಾಸ ಎಂದು ಪ್ರಸಿದ್ಧರಾದರು.

    ಒಂದು ದಿನ ಸಣ್ಣ ಬೀಜ ಹಾಗೂ ಒಂದು ಕಲ್ಲಿಗೆ ತರ್ಕ ನಡೆಯುತ್ತದೆ. ಬೀಜಕ್ಕೆ ಕಲ್ಲು ಕೇಳಿತು- ಎಷ್ಟು ದಿನ ಅಂತ ಇಲ್ಲೇ ಕುಳಿತಿದ್ದೀಯ? ಬೀಜ ಹೇಳಿತು- ಸ್ವಲ್ಪ ತಡಿ, ಮಳೆರಾಯ ಬರಲಿದ್ದಾನೆ. ಆಗ ನನ್ನ ಮಹತ್ವ ನಿನಗೆ ಗೊತ್ತಾಗುತ್ತದೆ.

    ಕಲ್ಲು ಹೇಳಿತು- ಎಷ್ಟೋ ವರ್ಷದಿಂದ ಇಲ್ಲೇ ಕುಳಿತಿರುವ ನಾನೇ ಏನೂ ಆಗಿಲ್ಲ. ನೀನು ಏನು ಆಗುತ್ತೀಯಾ?

    ಮಳೆ ಪ್ರಾರಂಭವಾಯಿತು. ಬೀಜ ಮೊಳಕೆ ಒಡೆದು ಸಸಿಯಾಗಿ ಹೆಮ್ಮರವಾಯಿತು.

    ಕಲ್ಲು ಹೇಳಿತು- ಎಷ್ಟು ತಂಪು ನೀನು. ಎಷ್ಟೊಂದು ಸುಂದರವಾಗಿದ್ದೀಯಾ.

    ಮರ ಹೇಳಿತು- ನೀನೂ ಸುಂದರವಾಗಿದ್ದೀಯಾ. ನೀನು ಶಿಲ್ಪಿ ಕಡೆ ಹೋಗು. ಅತಿ ಸುಂದರವಾಗಿ ಕಾಣುತ್ತೀಯಾ.

    ನೋಡಲು ಕೆಲವರು ಕಲ್ಲಿನ ತರಹವೋ, ಬೀಜದ ತರಹವೋ ಇರಬಹುದು. ಸ್ವಚ್ಛ ಮನಸಿನಿಂದ ಇದ್ದರೆ ಕಲ್ಲಿನ ತರಹ ಮೂರ್ತಿಯಾಗಬಹುದು. ಬೀಜದ ತರಹ ಮರವೂ ಆಗಬಹುದು.

    ಇಟಲಿ ದೇಶದ ರೋಮ್ ಶಹರದಲ್ಲಿ ಒಬ್ಬ ಬಾಲಕ ರಸ್ತೆಯಲ್ಲಿ ಹೋಗುತ್ತಿದ್ದ. ಹೆಸರು ಮೈಕೆಲ್ಯಾಂಜೆಲೊ. ಅವನಿಗೆ ಒಬ್ಬ ಸಿರಿವಂತನ ಮನೆ ಮುಂದೆ ಕಲ್ಲು ಕಂಡಿತು. ಭೇಟಿಯಾಗಿ, ತಮ್ಮಿಂದ ಸಹಾಯ ಬೇಕು ಎಂದ. ಸೀದಾಸಾದಾ ಬಾಲಕನನ್ನು ನೋಡಿದ ಸಿರಿವಂತ ಏನು ಬೇಕು ಎಂದು ಕೇಳಿದ. ಬಾಲಕ ಹಣ ಕೇಳಲಿಲ್ಲ. ನಿಮ್ಮ ಮನೆಯ ಅಂಗಳದಲ್ಲಿ ಇರುವ ಕಲ್ಲುಬಂಡೆ ಬೇಕು ಎಂದ. ತೆಗೆದುಕೊಂಡು ಹೋಗು ಎಂದ ಸಿರಿವಂತ.

    ಬಾಲಕ ಆ ಕಲ್ಲುಬಂಡೆಯನ್ನು ತಂದು ಕೆತ್ತನೆ ಪ್ರಾರಂಭಿಸಿದ. ಅದರಲ್ಲಿ ‘ಡೇವಿಡ್’ ಎಂಬ ಮೂರ್ತಿ ಕೆತ್ತನೆ ಮಾಡಿದ. ದೇಶ ವಿದೇಶಗಳಿಂದ ಜನರು ಆ ಮೂರ್ತಿ ನೋಡಲು ಬರತೊಡಗಿದರು. ದೇಶವು ಪ್ರವಾಸಿ ತಾಣವಾಯಿತು. ಇಟಲಿ ದೇಶ ಸಿರಿವಂತವಾಯಿತು.

    ಸಾಮಾನ್ಯ ವ್ಯಕ್ತಿ ಸ್ವಚ್ಛ ಮನಸಿನಿಂದ ಅಸಾಮಾನ್ಯ ಸಾಧನೆ ಮಾಡಿದ.

    ನೋಡುವ ದೃಷ್ಟಿ ಸರಿ ಇಟ್ಟುಕೊಂಡರೆ ಏನು ಬೇಕಾದರೂ ಮಾಡಬಹುದು.

    ವಿದೇಶದಲ್ಲಿ ಒಬ್ಬ ತಾಯಿ ತನ್ನ ಮಗನನ್ನು ಶಾಲೆಗೆ ಕಳಿಸಿದ್ದಳು. ಬಾಲಕ ಸರಿಯಾಗಿ ಓದುತ್ತಿಲ್ಲ ಎಂದು ಆ ತಾಯಿಯನ್ನು ಕರೆಸಿದ ಶಾಲೆಯವರು, ನಿಮ್ಮ ಮಗನಿಗೆ ನಾವು ಶಿಕ್ಷಣ ಕೊಡುವುದು ಸಾಧ್ಯವಿಲ್ಲ ಎಂದರು. ಆಗ ತಾಯಿ ಹೇಳಿದಳು- ನನ್ನ ಮಗ ದೇಶಕ್ಕೆ ಕೀರ್ತಿ ತರುವಂತಹ ಕೆಲಸ ಮಾಡುತ್ತಾನೆ. ಆತನನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಆಗಲಿಲ್ಲ. ಮಗನ ಸಾಮರ್ಥ್ಯ ನನಗೆ ಗೊತ್ತು…

    ಮನೆಯಲ್ಲೇ ಆ ತಾಯಿ ಶಿಕ್ಷಣ ನೀಡಿದಳು. ಮುಂದೆ ಆ ಬಾಲಕ (ಥಾಮಸ್ ಎಡಿಸನ್) ಜಗತ್ತಿಗೆ ಬೆಳಕು ನೀಡುವ ವಿದ್ಯುತ್ ದೀಪ ಕಂಡು ಹಿಡಿದ. ಜಗತ್​ಪ್ರಸಿದ್ಧಿಯಾದ.

    ಸಣ್ಣವರು ಎಂದು ಬಿಡಬಾರದು. ಅವರಲ್ಲಿ ಏನಾದರೂ ಒಂದು ಶಕ್ತಿ ಇರುತ್ತದೆ. ನನ್ನ ಮಗ 100ಕ್ಕೆ 100, 90 ತೆಗೆದುಕೊಂಡಿಲ್ಲ ಎಂದು ಬೇಜಾರು ಮಾಡಿಕೊಳ್ಳಬಾರದು. ಶೇ. 35 ಅಂಕ ಪಡೆದವರಿಂದಲೂ ಅಸಾಮಾನ್ಯ ಕೆಲಸ ಆಗುತ್ತದೆ ಎನ್ನುವುದನ್ನು ಅರಿಯಬೇಕು. ಸಾಧನೆಗೆ ಸ್ವಚ್ಛ ಮನಸು ಬೇಕು.

    * ನಿರೂಪಣೆ: ತುಕಾರಾಂ ಬ. ಜಾಧವ, ಕನಕೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts